14ಕ್ಕೆ ಸಂಘರ್ಷ ರ‍್ಯಾಲಿ: ಸಿಐಟಿಯು ಅಧ್ಯಕ್ಷೆ ವರಲಕ್ಷ್ಮಿ ಹೇಳಿಕೆ

7
ಕಾರ್ಮಿಕ ಕಾನೂನು ತಿದ್ದುಪಡಿಗೆ ಸಿಐಟಿಯು ವಿರೋಧ

14ಕ್ಕೆ ಸಂಘರ್ಷ ರ‍್ಯಾಲಿ: ಸಿಐಟಿಯು ಅಧ್ಯಕ್ಷೆ ವರಲಕ್ಷ್ಮಿ ಹೇಳಿಕೆ

Published:
Updated:

ಕೋಲಾರ: ‘ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಆ.14ರಂದು ಸ್ಥಳೀಯವಾಗಿ ಧರಣಿ ಮತ್ತು ಸೆ.5ರಂದು ದೆಹಲಿಯಲ್ಲಿ ಸಂಸತ್‌ ಮುಂದೆ ಮಜ್ದೂರ್‌ ಕಿಸಾನ್‌ ಸಂಘರ್ಷ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ’ ಎಂದು ಸಿಇಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್.ವರಲಕ್ಷ್ಮಿ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೇಂದ್ರದ ನೋಟು ಅಮಾನ್ಯೀಕರಣ ಕ್ರಮ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ದೇಶದ ಅರ್ಥ ವ್ಯವಸ್ಥೆ ಬುಡ ಮೇಲಾಗಿದೆ. ಕೇಂದ್ರವು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ದೂರಿದರು.

‘ಕೇಂದ್ರವು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ (ಐಸಿಡಿಎಸ್) ಶೇ 40ರಷ್ಟು ಅನುದಾನ ಕಡಿತ ಮಾಡಿ ನೇರ ನಗದು ಕೊಡಲು ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆಗಾಗಿ ಕೇಂದ್ರೀಕೃತ ಅಡುಗೆ ಮನೆ ತೆರೆಯಲು ಮುಂದಾಗಿದೆ. ಈ ಕ್ರಮದಿಂದ ಸಾಕಷ್ಟು ಅಡುಗೆ ನೌಕರರು ಕೆಲಸ ಕಳೆದುಕೊಂಡು ಬೀದಿ ಪಾಲಾಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕೇಂದ್ರವು ಬಂಡವಾಳಶಾಹಿಗಳ ಹಿತರಕ್ಷಣೆಗಾಗಿ 44 ಕಾರ್ಮಿಕ ಕಾನೂನುಗಳನ್ನು ವಿಲೀನಗೊಳಿಸಿ, 4 ಕಾರ್ಮಿಕ ಸಂಹಿತೆಗಳಾಗಿ ರೂಪಿಸಲು ಹೊರಟಿದೆ. ವೇತನ ಸಂಬಂಧ ಸಂಸತ್ತಿನಲ್ಲಿ ಕಾರ್ಮಿಕ ಸಂಹಿತೆ ಮಸೂದೆ ಮಂಡಿಸಲಾಗಿದೆ. ಔದ್ಯೋಗಿಕ ಕಾಯ್ದೆಗೆ ತಿದ್ದುಪಡಿ ತಂದು ನಿಗದಿತ ಅವಧಿಯ ಉದ್ಯೋಗವನ್ನು ಎಲ್ಲಾ ಕ್ಷೇತ್ರಗಳಲ್ಲಿ ಜಾರಿಗೊಳಿಸಲು ಮಾಲೀಕರಿಗೆ ಮುಕ್ತ ಅವಕಾಶ ನೀಡಿದೆ’ ಎಂದು ಆರೋಪಿಸಿದರು.

ಭದ್ರತೆಯಿಲ್ಲ: ‘ದೇಶದಲ್ಲಿ ಮನೆ ಸ್ವಚ್ಛತಾ ಕೆಲಸಗಾರರು, ಕಟ್ಟಡ ನಿರ್ಮಾಣ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಆಟೊ ಚಾಲಕರು, ಹಮಾಲಿಗಳು ಹಾಗೂ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯಿಲ್ಲ. ಈ ಕಾರ್ಮಿಕರ ಕಲ್ಯಾಣ ಮಂಡಳಿಗೆ ಕೇಂದ್ರವು ಬಜೆಟ್‌ನಲ್ಲಿ ಅನುದಾನ ಮೊಟಕುಗೊಳಿಸಿದೆ. ಕಾರ್ಮಿಕರಿಗೆ ರಕ್ಷಣೆ ಸಿಗಬೇಕಾದರೆ ಹೋರಾಟ ಅನಿವಾರ್ಯ’ ಎಂದು ಹೇಳಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷೆ ಮುನಿರಾಜಮ್ಮ, ಪ್ರಧಾನ ಕಾರ್ಯದರ್ಶಿ ಬಿ.ಎಸ್.ನಾಗರತ್ನ, ಸದಸ್ಯರಾದ ವಿಜಿಕೃಷ್ಣ, ಜಿ.ಈಶ್ವರಪ್ಪ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !