ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ ರಾಜಕೀಯದ ಬಣ್ಣ ಬಯಲು!

ಚುನಾವಣಾ ಸನಿಹದಲ್ಲೇ ಕೋಲಾರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ
Last Updated 6 ಡಿಸೆಂಬರ್ 2022, 5:19 IST
ಅಕ್ಷರ ಗಾತ್ರ

ಕೋಲಾರ: ವಿಧಾನಸಭೆಚುನಾವಣೆ ಹತ್ತಿರ ಇರುವಾಗಲೇ ಹಾಗೂ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಿದ್ದರಾಮಯ್ಯ ಚಿಂತನೆ ನಡೆಸಿರುವ ಹೊತ್ತಲ್ಲಿಯೇ ಜಿಲ್ಲಾ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಮುಂದುವರಿದಿದ್ದು, ಸೋಮವಾರ ಮತ್ತೆ ಭಿನ್ನಮತ ಸ್ಫೋಟಗೊಂಡಿದೆ.

ಕೋಲಾರ ವಿಧಾನಸಭೆ ಕ್ಷೇತ್ರದ ವಿಚಾರ ಚರ್ಚಿಸಲು ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ನೇತೃತ್ವದಲ್ಲಿ ಕಾಂಗ್ರೆಸ್‌ ಭವನದ ಮುಂದೆ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಬಣ ರಾಜಕೀಯದ ಬಣ್ಣ ಬಯಲಾಗಿದೆ.

ಶಾಸಕ ಕೆ.ಆರ್.ರಮೇಶ್ ಕುಮಾರ್ ಬೆಂಬಲಿಗರು ಹಾಗೂ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಬೆಂಬಲಿಗರು ಪರ‌ಸ್ಪರ ಕಿತ್ತಾಡಿಕೊಂಡಿದ್ದಾರೆ.

ಸಿದ್ದರಾಮಯ್ಯ ಸ್ಪರ್ಧೆ ವಿಚಾರವೇ ಜಿಲ್ಲೆಯಲ್ಲಿ ಬಣ ರಾಜಕೀಯದ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ. ಏಕೆಂದರೆ ರಮೇಶ್‌ ಕುಮಾರ್‌ ಬೆಂಬಲಿಗರು ಮುಂಚೂಣಿಯಲ್ಲಿ ನಿಂತು ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಕರೆತರಲು ಪಣ ತೊಟ್ಟಿದ್ದಾರೆ.

ಜೊತೆಗೆ ಪಂಚಾಯಿತಿ ಮಟ್ಟದಲ್ಲಿ ಹೋಗಿ ಸಭೆ ನಡೆಸುತ್ತಿದ್ದಾರೆ. ಇವರಲ್ಲಿ ಶಾಸಕರಾದ ರಮೇಶ್‌ ಕುಮಾರ್‌, ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಪ್ರಮುಖರು. ಆದರೆ, ಈ ಸಭೆಗಳಲ್ಲಿ ಮುನಿಯಪ್ಪ ಬಣದ ಯಾರೊಬ್ಬರೂ ಕಾಣುತ್ತಿಲ್ಲ. ಮಾಜಿ ಸಭಾಪತಿ ಹಾಗೂ ಕೋಲಾರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ವಿ.ಆರ್‌.ಸುದರ್ಶನ್‌ ಮಾತ್ರ ಎರಡೂ ಬಣದ ಸಭೆಗಳಲ್ಲಿ
ಕಾಣಿಸಿಕೊಳ್ಳುತ್ತಿದ್ದಾರೆ.

ನ.13ರಂದು ಸಿದ್ದರಾಮಯ್ಯ ಕೋಲಾರಕ್ಕೆ ಭೇಟಿ ನೀಡಿದಾಗ ಸ್ವಾಗತ ಕೋರುವುದರಲ್ಲೂ ಭಿನ್ನಮತ ಎದ್ದು ಕಂಡಿತ್ತು. ಮುನಿಯಪ್ಪ ಬಣದವರು ಪ್ರತ್ಯೇಕವಾಗಿ ಸಿದ್ದರಾಮಯ್ಯ ಅವರಿಗೆ ಸ್ವಾಗತ ಕೋರಿದ್ದರು. ಆದರೆ, ಆ ಪ್ರವಾಸದಲ್ಲಿ ಇಡೀ ದಿನ ಜೊತೆಗಿದ್ದದ್ದು ರಮೇಶ್‌ ಕುಮಾರ್‌ ಬೆಂಬಲಿಗರು. ಅವರೇ ಸಭೆ ನಡೆಸಿ ಆ ಪ್ರವಾಸದ ರೂಪುರೇಷೆ ಸಿದ್ಧಪಡಿಸಿದ್ದರು. ಆ ಸಭೆಗೆ ಮುನಿಯಪ್ಪ ಬೆಂಬಲಿಗರನ್ನು ಕರೆದಿರಲಿಲ್ಲ ಎಂದು ಜಿಲ್ಲಾ ಎಸ್‌ಸಿ ಘಟಕದ ಅಧ್ಯಕ್ಷರೂ ಆಗಿರುವ ಕೆ.ಜಯದೇವ್‌
ದೂರಿದ್ದರು.

‘ರಮೇಶ್‌ ಕುಮಾರ್‌ ನೇತೃತ್ವದಲ್ಲಿ ಘಟಬಂಧನ್‌ ಮಾಡಿಕೊಂಡು ಹಳೇ ಹಾಗೂ ನಿಷ್ಠಾವಂತ ಕಾಂಗ್ರೆಸ್ಸಿಗರನ್ನು ಕಡೆಗಣಿಸಲಾಗುತ್ತಿದೆ’ ಎಂಬುದು ಮುನಿಯಪ್ಪ ಬೆಂಬಲಿಗರ ಸಿಟ್ಟಿಗೆ ಕಾರಣ. ಸಿದ್ದರಾಮಯ್ಯ ಭೇಟಿ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿದ್ದ ಊರಬಾಗಿಲು ಶ್ರೀನಿವಾಸ್‌ ಇದೇ ಮಾತು
ಹೇಳಿದ್ದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಬೆಳವಣಿಗೆಯಿಂದ ಎದುರಾಳಿ ಬಿಜೆಪಿ ಹಾಗೂ ಜೆಡಿಎಸ್‌ಗೆ ಸಹಕಾರ ಆಗಬಹುದೆಂದು ಸೋಮವಾರದ ಕಾರ್ಯಕರ್ತರ ಸಭೆಯಲ್ಲಿ ಮುನಿಯಪ್ಪ ಕೂಡ ಸೂಚ್ಯವಾಗಿ ಹೇಳಿದ್ದಾರೆ.

ಈ ನಡುವೆ, ‘ವರುಣಾ ಕ್ಷೇತ್ರವೋ, ಕೋಲಾರ ಕ್ಷೇತ್ರವೋ’ ಎಂಬ ಗೊಂದಲದಲ್ಲಿರುವ ಸಿದ್ದರಾಮಯ್ಯ ಅವರ ನಿರ್ಧಾರದತ್ತ ಈಗ ಎಲ್ಲರ ಕಣ್ಣು ನೆಟ್ಟಿದೆ. ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರೂ ಅವರು ಯಾವುದೇ ಕ್ಷೇತ್ರ ಸೂಚಿಸಿಲ್ಲ. ಬದಲಾಗಿ ‘ಹೈಕಮಾಂಡ್‌ ಆಯ್ಕೆಗೆ ಬಿಟ್ಟಿದ್ದು’ ಎಂದು ನಮೂದಿಸಿದ್ದಾರೆ.

‘ಹೊರಗಿನವರು ಯಾರೆಂದು ಹೇಳಲಿ?’

‘ಕೆ.ಎಚ್‌.ಮುನಿಯಪ್ಪ ನೇತೃತ್ವದಲ್ಲಿ ಸೋಮವಾರ ನಡೆದ ಸಭೆ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಆದರೆ, ಹೊರಗಿನವರಿಗೆ ಕೋಲಾರದ ಉಸಾಬರಿ ಏಕೆ ಎಂದು ಮುನಿಯಪ್ಪ ಪ್ರಶ್ನಿಸಿದ್ದಾರೆ. ಹೊರಗಿವರು ಯಾರೆಂದು ಅವರೇ ಹೇಳಬೇಕು’ ಎಂದು ರಮೇಶ್‌ ಕುಮಾರ್‌ ಬಣದ ಬೆಂಬಲಿಗರೊಬ್ಬರು ಸವಾಲು ಹಾಕಿದರು.

ಹೆಸರು ಹಾಕಬಾರದೆಂದು ಷರತ್ತು ವಿಧಿಸಿ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಕೋಲಾರ ಕ್ಷೇತ್ರದಲ್ಲಿ ಹಿಂದೆ ಸ್ಪರ್ಧಿಸಿದ್ದ ನಜೀರ್‌ ಅಹಮದ್‌ ಹೊರಗಿನವರೇ? ಸತತವಾಗಿ ಕಾಂಗ್ರೆಸ್‌ ಬೆಂಬಲಿಸುತ್ತಿರುವ ಶ್ರೀನಿವಾಸಗೌಡ ಹೊರಗಿನವರೇ? 1978ರಲ್ಲೇ ಸ್ಪರ್ಧಿಸಿದ್ದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ್‌ ಕುಮಾರ್‌ ಹೊರಗಿನವರೇ? ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ ಕೆಲಸ ಮಾಡಿದವರು ಹೊರಗಿನವರೇ’ ಎಂದು ಪ್ರಶ್ನಿಸಿದರು.

ಹಾಗೆ ಮುಂದುವರಿದು, ‘ಏಳು ಸಲ ಸಂಸದರಾಗಿದ್ದ ಶಿಡ್ಲಘಟ್ಟದ ತಾಲ್ಲೂಕಿನ ಕೆ.ಎಚ್‌.ಮುನಿಯಪ್ಪ ಅವರನ್ನು ಹೊರಗಿನವರು ಎನ್ನಲು ಸಾಧ್ಯವೇ’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT