ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರದ ಉಸಾಬರಿ ಇವರಿಗೆ ಏಕೆ?

ರಮೇಶ್‌ ಕುಮಾರ್‌ ಬೆಂಬಲಿಗರ ನಡೆಗೆ ಕೆ.ಎಚ್‌.ಮುನಿಯಪ್ಪ ಆಕ್ರೋಶ
Last Updated 6 ಡಿಸೆಂಬರ್ 2022, 4:59 IST
ಅಕ್ಷರ ಗಾತ್ರ

ಕೋಲಾರ: ‘ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಸಿದವರೇ ಈಗ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಸಭೆ ನಡೆಸಿ, ಗುಂಪುಗಾರಿಕೆ ಹೆಚ್ಚಾಗಲು ಕಾರಣವಾಗಿದ್ದಾರೆ. ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಿಕೊಳ್ಳಲಿ; ಕೋಲಾರ ಕ್ಷೇತ್ರ ಊಸಾಬರಿ ಇವರಿಗೆ ಏಕೆ? ಇದು ಆರೋಗ್ಯಕರವಲ್ಲ’ ಎಂದು ಕಾಂಗ್ರೆಸ್‌ ಮುಖಂಡ, ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪಅವರು ಕೆ.ಆರ್‌.ರಮೇಶ್‌ ಕುಮಾರ್‌ ನೇತೃತ್ವದ ಘಟಬಂಧನ್ ಗುಂಪನ್ನು ತರಾಟೆಗೆ ತೆಗೆದುಕೊಂಡರು.

ನಗರದ ಕಾಂಗ್ರೆಸ್‌ ಭವನದ ಮುಂಭಾಗದ ರಸ್ತೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೋಮವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಅವರೇ ತಮ್ಮ ಸ್ಪರ್ಧೆ ಬಗ್ಗೆ ಹೈಕಮಾಂಡ್‌ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ. ಆದರೆ, ಇಲ್ಲಿ ಮಾತ್ರ ಕೆಲವರು ಅವರ ಹೆಸರು ಹೇಳಿಕೊಂಡು ಗುಂಪುಗಾರಿಕೆ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ಪಂಚಾಯಿತಿಗಳಿಗೆ ಹೋಗಿ ಸಭೆ ಮಾಡುತ್ತಿದ್ದಾರೆ. ಅಲ್ಲಿ ಯಾರೂ ಬೇರೆ ಇಲ್ಲವೇ? ಒಳಗೊಂದು ಹೊರಗೊಂದು ಮಾತನಾಡುವುದನ್ನು ಬಿಟ್ಟುಬಿಡಿ, ಮತ್ತೆ ಅದನ್ನೇ ಮುಂದುವರಿಸಿದರೆ ಕಾಂಗ್ರೆಸ್‌ಗೆ ಕಷ್ಟ ಎದುರಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಎಲ್ಲಾ ನೋವುಗಳನ್ನು ನುಂಗಿಕೊಂಡು ರಾಷ್ಟ್ರದ ಹಿತದೃಷ್ಟಿಯಿಂದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಆದೇಶದಂತೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಪಕ್ಷದಲ್ಲಿ ಇಷ್ಟೊಂದು ಗೊಂದಲವಿದ್ದರೆ ಜನ ಯಾರಿಗೆ ವೋಟ್ ಹಾಕುತ್ತಾರೆ? ಇಲ್ಲಿನ ಜಗಳ ರಾಜ್ಯಮಟ್ಟಕ್ಕೂ ಹರಡಿ ಮತ್ತಷ್ಟು ಗೊಂದಲ ಉಂಟಾಗುತ್ತದೆ. ಎದುರಾಳಿಗಳು ಸಹಕಾರಿಯಾಗುತ್ತದೆ. ಹೀಗಾಗಿ. ಹಳೆಯದ್ದನ್ನು ಮರೆತು ಎಲ್ಲರೂ ಒಂದಾಗಿ ಅವಿಭಜಿತ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ’ ಎಂದರು.

‘ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಹಲವು ಸ್ಥಳೀಯಆಕಾಂಕ್ಷಿಗಳು ಇದ್ದಾರೆ. ಸಿದ್ದರಾಮಯ್ಯ ಅವರು ಪಕ್ಷದಿಂದ ಅರ್ಜಿ ಪಡೆದಾಗ ಯಾವ ಕ್ಷೇತ್ರವೆಂದು ನಮೂದಿಸಿಲ್ಲ. ನಾನು ಕೂಡ ಅರ್ಜಿ ಪಡೆದಿದ್ದು, ಯಾವ ಕ್ಷೇತ್ರವೆಂದು ನಮೂದು ಮಾಡಿಲ್ಲ’
ಎಂದರು.

ಈಹಂತದಲ್ಲಿ ಕಾರ್ಯಕರ್ತರೊಬ್ಬರು, ‘ಸಿದ್ದರಾಮಯ್ಯ ಕೋಲಾರದಿಂದಲೇ ಸ್ಪರ್ಧೆ ಮಾಡಬೇಕು’ ಎಂದು ಜೋರಾಗಿ ಕೂಗಿದರು. ಅವರ ಕೂಗಿಗೆ ಇತರ ಕಾರ್ಯಕರ್ತರು ದನಿಗೂಡಿಸಿ, ಸಿದ್ದರಾಮಯ್ಯ ಬರಲೇಬೇಕೆಂದು ಜಯಕಾರ ಕೂಗಿದರು.

ಆ ಸಂದರ್ಭದಲ್ಲಿ ಮತ್ತೊಂದು ಗುಂಪು ಕೆ.ಎಚ್.ಮುನಿಯಪ್ಪ ಅವರಿಗೆ ಜಯಘೋಷ ಕೂಗಿತು. ಆಗ ಎರಡು ಗುಂಪುಗಳ ನಡುವೆ ಮಾತಿನ ಚಕಮುಕಿ, ನೂಕಾಟ ನಡೆಯಿತು.

ಟಿಕೆಟ್‌ ಆಕಾಂಕ್ಷಿ, ಮಾಜಿ ಸಭಾಪತಿ ವಿ.ಆರ್.ಸುದರ್ಶನ್‌ ಮಾತನಾಡಿ, ‘ಈ ಬಾರಿಯ ಚುನಾವಣೆ ಕಾಂಗ್ರೆಸ್‌ಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ. ರಾಜ್ಯದಲ್ಲಿ 2023ರಲ್ಲಿ‌ ಮತ್ತೆ ಅಧಿಕಾರಕ್ಕೆ ಬರಬೇಕು. ತಮಿಳುನಾಡು, ಆಂಧ್ರ, ಪಶ್ಚಿಮ ಬಂಗಾಳ ಕಾಂಗ್ರೆಸ್ ಆಗಬಾರದು' ಎಂದರು.

‘ಬಿಜೆಪಿಯವರು ಜನರ ಭಾವನೆ ಕೆರಳಿಸುತ್ತಿದ್ದಾರೆ. ರಾಜ್ಯ ಸರ್ಕಾರ ಜನರ ಬದುಕಿಗೆ ಶಾಪವಾಗಿ ಪರಿಣಮಿಸಿದ್ದು, ಅಭಿವೃದ್ಧಿ ಮರೆತಿದೆ. ಕೋಮು ಸೌಹಾರ್ದ ಇಲ್ಲದಿದ್ದರೆ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ.‌ ವೈಫಲ್ಯ ಮುಚ್ಚಿಕೊಳ್ಳಲು ಬಿಜೆಪಿ ಸರ್ಕಾರ ಜನರ ಮನಸ್ಸು ಕದಡುತ್ತಿದೆ’ ಎಂದು ಆರೋಪಿಸಿದರು.

‘ಜ.15ರ ನಂತರ ಯಾವುದೇ ಸಂದರ್ಭದಲ್ಲಿ ಚುನಾವಣೆ ಘೋಷಣೆ ಆಗಬಹುದು. ಹೀಗಾಗಿ, ನಾವು
ಜನರ ಮಧ್ಯೆ ಹೋಗಬೇಕು. ಬೂತ್ ಮಟ್ಟದಲ್ಲಿ ಪಕ್ಷ‌ ಸಂಘಟಿಸಬೇಕು. ಸಮರ್ಥ ತಂಡ ಕಟ್ಟಬೇಕು. ಸಂಘಟನೆ ಚುರುಕಾಗಬೇಕು. ಹಿರಿಯರ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಅವರು ಕಾರ್ಯಕರ್ತರನ್ನು ಮುನ್ನಡೆಸಬೇಕು’ ಎಂದು ಸಲಹೆ
ನೀಡಿದರು.

‘ಕೆಪಿಸಿಸಿ,‌ ಎಐಸಿಸಿ ವರಿಷ್ಠರು ರಮೇಶ್ ಕುಮಾರ್ ಹಾಗೂ ಮುನಿಯಪ್ಪ ಅವರನ್ನು ಕರೆದು ಮಾತನಾಡಿಸಬೇಕು. ಒಂದುಗೂಡಿಸಬೇಕು’ ಎಂದು ಸಲಹೆ ನೀಡಿದರು. ಟಿಕೆಟ್‌ ಆಕಾಂಕ್ಷಿಗಳಾದ ಊರುಬಾಗಿಲು ಶ್ರೀನಿವಾಸ್ ಹಾಗೂ ಎಲ್.ಎ.ಮಂಜುನಾಥ್ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ ಬಾಬು, ಉದಯಶಂಕರ್, ಎಸ್‌ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಎಸ್‌ಟಿ ಘಟಕದ ಅಧ್ಯಕ್ಷ ನಾಗರಾಜ್‌,‌ ನಗರಸಭೆ ಉಪಾಧ್ಯಕ್ಷ ಅಸ್ಲಾಂ ಪಾಷಾ, ಸದಸ್ಯರಾದ ಮುಬಾರಕ್, ಅಂಬರೀಷ್, ಜಿಲ್ಲಾ ಕಾಂಗ್ರೆಸ್‌ ಮಹಿಳಾ ಅಧ್ಯಕ್ಷರಾದ ರತ್ನಮ್ಮ, ಮುಖಂಡ ಮಂಜುನಾಥ್, ಸಾಲಾವುದ್ದಿನ್ ಬಾಬು, ಶ್ರೀನಿವಾಸ್ ಇದ್ದರು.

‘ಸಿದ್ದರಾಮಯ್ಯ ಬರದಿದ್ದರೆ ಸ್ಥಳೀಯರಿಗೆ ಟಿಕೆಟ್‌’

‘ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಸ್ವಾಗತವಿದೆ. ಅವರು ರಾಜ್ಯದ ಆಸ್ತಿ. ಬಂದರೆ ಯಾರ ವಿರೋಧವೂ ಇರಲ್ಲ. ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಕೂಡ ಸ್ವಾಗತಿಸುತ್ತಾರೆ. ಅವರು ಬರದಿದ್ದರೆ ಭಿನ್ನಾಭಿಪ್ರಾಯ ಇರಬಾರದು. ಸ್ಥಳೀಯರಿಗೆ ಆದ್ಯತೆ ನೀಡಬೇಕು. ಕ್ಷೇತ್ರದಲ್ಲಿ 2014ರಿಂದ ಗೊಂದಲ ಇದೆ’ ಎಂದು ವಿ.ಆರ್‌.ಸುದರ್ಶನ್‌ ತಿಳಿಸಿದರು.

ಇದೇ ವಿಷಯವನ್ನು ಮುನಿಯಪ್ಪ ಕೂಡ ಹೇಳಿದರು. ‘ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ಸ್ಥಳೀಯರಿಗೆ ಟಿಕೆಟ್‌ ನೀಡಬೇಕು. ಸುದರ್ಶನ್‌, ಎಲ್‌.ಎ.ಮಂಜುನಾಥ್‌, ಊರಬಾಗಿಲು ಶ್ರೀನಿವಾಸ್‌ ಅವರನ್ನು ಪರಿಗಣಿಸಬೇಕು’ ಎಂದು ಪ್ರತಿಪಾದಿಸಿದರು.

‘ಹಳೆಯದ್ದನ್ನು ಮರೆಯೋಣ’

‘ಹಳೆಯದ್ದನ್ನು ಮರೆತು ಎಲ್ಲರೂ ಒಟ್ಟಿಗೆ ಹೋಗೋಣ, ಎರಡೂ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸೋಣ, ಸಿದ್ದರಾಮಯ್ಯ ಬರುವುದಕ್ಕೆ ನನ್ನದು ಸ್ವಾಗತವಿದೆ, ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗೋಣ, ಯಾರಿಗೆ ಟಿಕೆಟ್ ನೀಡಿದರೂ ಒಟ್ಟಾಗಿ ಕೆಲಸ ಮಾಡೋಣ’ ಎಂದು ಮುನಿಯಪ್ಪ ಹೇಳಿದರು.

‘ಸಿದ್ದರಾಮಯ್ಯ ಕೋಲಾರ ಕ್ಷೇತ್ರಕ್ಕೆ ಬರುವ ಮೊದಲು ಕ್ಷೇತ್ರದಲ್ಲಿನ ಪಕ್ಷದಲ್ಲಿರುವ ಗುಂಪುಗಾರಿಕೆ ಸರಿಮಾಡಲು ಸೂಚಿಸಿದ್ದೇನೆ’ ಎಂದು ನುಡಿದರು.

‘ಸಿದ್ದರಾಮಯ್ಯ ಸಿ.ಎಂ ಆಗಬೇಕು’

‘ಸಿದ್ದರಾಮಯ್ಯ ಸ್ಪರ್ಧೆಗೆ ಮುನಿಯಪ್ಪ ಸೇರಿದಂತೆ ಎಲ್ಲರೂ ಒಪ್ಪಿಗೆ ನೀಡಬೇಕು. ಜಿಲ್ಲೆಗೆ

ಸಿದ್ದರಾಮಯ್ಯ ಕೊಡುಗೆ ಅಪಾರ. ಅವರು ಕೋಲಾರ ಕ್ಷೇತ್ರದಿಂದ ಗೆದ್ದು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು’ ಎಂದು ನಗರಸಭೆ ಸದಸ್ಯ, ಘಟಬಂಧನ್‌ ಸದಸ್ಯ ಅಂಬರೀಷ್‌ ತಿಳಿಸಿದರು.

ಗಲಾಟೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮನ್ನು ಸಭೆಗೆ ಕರೆದಿರಲಿಲ್ಲ. ಆದರೂ ಪಕ್ಷದ ಸಿದ್ಧಾಂತ ಗೌರವಿಸಿ ಬಂದಿದ್ದೇವೆ. ಗಲಾಟೆ ಮಾಡಲು ಇಲ್ಲಿಗೆ ಬಂದಿಲ್ಲ, ಕೆಲವರು ಗೊಂದಲ ಸೃಷ್ಟಿಸಿದ್ದಾರೆ ಅಷ್ಟೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT