ಕೋಲಾರ: 'ವಿಧಾನಸೌಧದ ಪ್ರತಿ ಗೋಡೆಗಳಿಗೆ ಕಿವಿಕೊಡಿ ಅವು ಲಂಚ ಲಂಚ ಎಂದು ಪಿಸುಗುಡುತ್ತವೆ. ಲಂಚವಿಲ್ಲದೆ ಬಿಜೆಪಿ ಸರ್ಕಾರದಲ್ಲಿ ಯಾವುದೇ ಕೆಲಸ ನಡೆಯಲ್ಲ. ಹೋಟೆಲ್ ಮೆನು ರೀತಿ ವಿಧಾನಸೌಧದಲ್ಲಿ ಇಂಥ ಹುದ್ದೆಗೆ ಇಷ್ಟು ಹಣ ಎಂಬ ಬೋರ್ಡ್ ಹಾಕಿ ಬಿಟ್ಟಿದ್ದಾರೆ ' ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದರು.
ಆರ್.ಎಲ್.ಜಾಲಪ್ಪ ಅತಿಥಿ ಗೃಹ ಪಕ್ಕದ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ‘ಪ್ರಜಾಧ್ವನಿ’ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
'ನಾನು ಅಧಿಕಾರದಲ್ಲಿದ್ದಾಗ ಒಂದು ಪೈಸೆ ಹಣ ಪಡೆದಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆದು ಸನ್ಯಾಸ ಸ್ವೀಕರಿಸುತ್ತೇನೆ. ಆದರೆ, ಬಿಜೆಪಿಯರು ಲಜ್ಜೆಗೆಟ್ಟವರು. ಅವರು ಮತ್ತೆ ಅಧಿಕಾರಕ್ಕೆ ಬರಲು ಬಿಡಬಾರದು' ಎಂದರು.
'ಲಂಚ ಕೊಡದೆ ಯಾವುದೇ ಕೆಲಸ ಆಗುತ್ಯಿಲ್ಲ. ರಾಜ್ಯದ ಇತಿಹಾಸದಲ್ಲಿ ಇಷ್ಟೊಂದು ಭ್ರಷ್ಟ ಸರ್ಕಾರ ಹಿಂದೆಂದೂ ಬಂದಿಲ್ಲ. ಪ್ರತಿ ಯೋಜನೆ, ಗುತ್ತಿಗೆಗಳಲ್ಲಿ ಶೇ 40 ಕಮಿಷನ್ ಕೊಡಬೇಕಿದೆ ಎಂಬುದಾಗಿ ಗುತ್ತಿಗೆದಾರರೇ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ' ಎಂದು ನುಡಿದರು.
'ಮೂರು ಬಾರಿ ಅಧಿವೇಶನದಲ್ಲಿ 40 ಪರ್ಸೆಂಟೇಜ್ ಬಗ್ಗೆ ಪ್ರಶ್ನೆ ಮಾಡಿದೆ. ಆದರೆ, ಈ ಬಗ್ಗೆ ಮಾತನಾಡಲು, ಚರ್ಚಿಸಲು ಸ್ಪೀಕರ್ ಅವಕಾಶ ಕೊಡುತ್ತಿಲ್ಲ. ಇಂಥ ಸ್ಪೀಕರ್ ನಾನು ಎಂದೂ ನೋಡಿಲ್ಲ' ಎಂದು ಟೀಕಿಸಿದರು.
'ತಾನೂ ತಿನ್ನಲ್ಲ, ತಿನ್ನಲೂ ಬಿಡಲ್ಲ ಎಂಬುದಾಗಿ ಮೋದಿ ಅಧಿಕಾರ ಸ್ವೀಕರಿಸುವಾಗ ಹೇಳಿದ್ದರು. ಆದರೆ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಪತ್ರ ಬರೆದು ಒಂದೂವರೆ ವರ್ಷವಾದರೂ ಏಕೆ ಕ್ರಮ ಕೈಗೊಂಡಿಲ್ಲ? ತನಿಖೆ ನಡೆಸಿದರೆ ದಾಖಲೆ ಕೊಡಲು ಸಿದ್ಧವಿದ್ದಾರೆ' ಎಂದು ಹೇಳಿದರು.
'ಸೋಲುವ ಭಯದಿಂದ ಮೋದಿ ಅವರನ್ನು ವಾರಕ್ಕೊಮ್ಮೆ ರಾಜ್ಯಕ್ಕೆ ಕರೆಸುತ್ತಿದ್ದಾರೆ. ಮೋದಿ, ಷಾ ನೂರು ಬಾರಿ ರಾಜ್ಯಕ್ಕೆ ಬಂದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಮೋದಿ ಒಬ್ಬರೇ ಬಿಜೆಪಿಗೆ ಬಂಡವಾಳ. ಅಧಿಕಾರ ಕೊಡಿಸುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ' ಎಂದು ವ್ಯಂಗ್ಯವಾಡಿದರು.
'ರಾಜ್ಯದಲ್ಲಿ ಜನರ ಉತ್ಸಾಹ ನೋಡಿದರೆ ನಿರೀಕ್ಷೆಗಿಂತ ಹೆಚ್ಚು ಬೆಂಬಲ ಕಾಂಗ್ರೆಸ್ ಗೆ ಸಿಗುತ್ತಿದೆ. ಜನ ಬಿಜೆಪಿ ಸರ್ಕಾರದಿಂದ ನೊಂದಿದ್ದು ರೋಸಿ ಹೋಗಿದ್ದಾರೆ' ಎಂದು ಹೇಳಿದರು.
ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ಮಾಡಿದ ನಂತರ ನಡೆಯುತ್ತಿರುವ ಮೊದಲ ಸಮಾವೇಶ ಇದಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.