ಬುಧವಾರ, ಮೇ 18, 2022
23 °C
ತಲೆ ಮೇಲೆ ಖಾಲಿ ಸಿಲಿಂಡರ್ ಹೊತ್ತು ಗಾಂಧಿವನದಿಂದ ತಹಶೀಲ್ದಾರ್‌ ಕಚೇರಿವರೆಗೆ ಮೆರವಣಿಗೆ

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಅಗತ್ಯ ವಸ್ತುಗಳು, ಅಡುಗೆ ಅನಿಲ ಹಾಗೂ ತೈಲೋತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ಮಾಡಿದರು.

ತಲೆ ಮೇಲೆ ಖಾಲಿ ಸಿಲಿಂಡರ್ ಹೊತ್ತು ಗಾಂಧಿವನದಿಂದ ತಹಶೀಲ್ದಾರ್‌ ಕಚೇರಿವರೆಗೆ ಮೆರವಣಿಗೆ ಬಂದು ಪ್ರತಿಭಟನಾಕಾರರು ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆಯನ್ನು ದಿನೇ ದಿನೇ ಹೆಚ್ಚಳ ಮಾಡುವ ಮೂಲಕ ದೇಶದ ಜನರ ಮೇಲೆ ಗಧಾಪ್ರಹಾರ ಮಾಡುವತ್ತ ಹೊರಟಿರುವುದು ಸರಿಯಲ್ಲ’ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಆಕ್ರೋಶ
ವ್ಯಕ್ತಪಡಿಸಿದರು.

‘ಎಪ್ಪತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಎಂದಿಗೂ ಈ ರೀತಿಯ ಆಡಳಿತ ನೀಡಿರಲಿಲ್ಲ, ಆದರೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಇಂದು ಎಲ್ಲ ವರ್ಗದ ಜನರಿಗೂ ಮರಣ ಶಾಸನ ಬರೆಯಲು ಹೊರಟಿದೆ. ಕೇಂದ್ರ ಸರ್ಕಾರ ಮೊದಲಿನಿಂದಲೂ ಜನ ವಿರೋಧಿ ನೀತಿಯನ್ನು ಅನುಸರಿಸಿಕೊಂಡು ಬರುತ್ತಿದೆ. ಪೆಟ್ರೋಲ್ ಮತ್ತು ಡೀಸಲ್ ಬೆಲೆ ನಿಯಂತ್ರಿಸಲು ವಿಫಲರಾಗಿದ್ದಾರೆ. ಜನ ಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಜನ ಮುಂದಿನ ದಿನಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ದೆಹಲಿಯಲ್ಲಿ ರೈತರು ಎರಡೂವರೆ ತಿಂಗಳಿಂದಲೂ ಹೋರಾಟ ನಡೆಸುತ್ತಿದ್ದಾರೆ. 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಚಳಿಗಾಲ ಲೆಕ್ಕಿಸದೆಯೂ ಪಂಜಾಬ್, ಹರಿಯಾಣ ರೈತರು ಹೋರಾಟ ನಡೆಸುತ್ತಿದ್ದು, 10 ಸಭೆ ನಡೆದಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಪ್ರಧಾನಿಯವರು ರಾಜೀನಾಮೆ ನೀಡಲಿ’ ಎಂದು ಆಗ್ರಹಿಸಿದರು.

‘ಗಾಂಧೀಜಿಯವರು ಹೋರಾಟ ಮಾಡಿ ಸ್ವಾತಂತ್ರ್ಯ ತಂದುಕೊಟ್ಟಂತೆ ಕಾಂಗ್ರೆಸ್‍ನಿಂದ ಮತ್ತೆ ಹೋರಾಟ ಆರಂಭಿಸಲಾಗುವುದು. ಸುಮಾರು 1 ಲಕ್ಷ ಮಂದಿಯನ್ನು ಸೇರಿಸಿ ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಕೋಲಾರದಿಂದಲೇ ಹೋರಾಟಕ್ಕೆ ಚಾಲನೆ ನೀಡಲಾಗುವುದು’ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಕೇಂದ್ರ ಸರಕಾರ ಈಗಾಗಲೇ ಜನವಿರೋಧಿ ಕಾಯ್ದೆಗಳಿಂದ ರೈತರು ಹಾಗೂ ಕಾರ್ಮಿಕರು ಮತ್ತು ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಮೇಲೆ ದಿನೇ ದಿನೆ ಬೆಲೆ ಏರಿಸುತ್ತಿರುವುದರಿಂದ ಜನ ಸಾಮಾನ್ಯರು ಜೀವನ ನಡೆಸುವುದೇ ದುಸ್ತರವಾಗಿದೆ, ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು ಸದಾ ಅವರೊಡನೆ ಇರುವುದಾಗಿ ಹೇಳಿದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಎಲ್.ಎ ಮಂಜುನಾಥ್, ಸ್ಟಾಂಡ್ಲಿ, ರಾಜ್ಯ ಮಾವು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್‌ಬಾಬು, ಉದಯ್‌ಶಂಕರ್‌ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.