ಭಾನುವಾರ, ಜನವರಿ 19, 2020
23 °C

ರಾಜಕೀಯ ಲಾಭಕ್ಕೆ ಕಾಂಗ್ರೆಸ್‌ನ ಹಿಂಸಾಚಾರ: ನಳಿನ್‌ಕುಮಾರ್‌ ಕಟೀಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಪೌರತ್ವ ಕಾಯ್ದೆ ವಿರುದ್ಧ ದೇಶದಲ್ಲಿ ಹಿಂಸಾಚಾರಕ್ಕೆ ಇಳಿದಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಆಕ್ರೋಶ ವ್ಯಕ್ತಪಡಿಸಿದರು.

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಬೆಂಬಲಿಸಿ ಬಿಜೆಪಿ ಹಾಗೂ ಭಾರತೀಯ ಹಿತರಕ್ಷಣಾ ವೇದಿಕೆಯು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನಾಂದೋಲನದಲ್ಲಿ ಮಾತನಾಡಿ, ‘ದೇಶದ ಪಿತಾಮಹ ಮಹಾತ್ಮ ಗಾಂಧೀಜಿಯ ಕನಸು ನನಸು ಮಾಡುವ ಉದ್ದೇಶಕ್ಕೆ ಪ್ರಧಾನಿ ಮೋದಿ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ’ ಎಂದರು.

‘ಇದು ಬಿಜೆಪಿಯ ಹೋರಾಟವಲ್ಲ. ಅನಿವಾರ್ಯ ಕಾರಣಕ್ಕೆ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಿಂದ ವಲಸೆ ಬಂದಿರುವವರಿಗೆ ಪೌರತ್ವ ನೀಡುವುದು ಸಿಎಎ ಉದ್ದೇಶ. ಗಾಂಧೀಜಿ ಚಿಂತನೆ ಸಾಕಾರಗೊಳಿಸಿರುವ ಪ್ರಧಾನಿ ಮೋದಿ ಅವರನ್ನು ಅಭಿನಂದಿಸುವ ಸಲುವಾಗಿ ದೇಶದೆಲ್ಲೆಡೆ ಜನಾಂದೋಲನ ನಡೆಸಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.

‘ಭಾರತ ಮಾತೆಯ ಗೌರವ ಕಾಪಾಡುವುದು ನಮ್ಮ ಕರ್ತವ್ಯ. ಬ್ರಿಟೀಷರ ಕಪಿಮುಷ್ಠಿಯಲ್ಲಿ ಶತಮಾನಗಳ ಕಾಲ ಗುಲಾಮಗಿರಿ ಅನುಭವಿಸಿದ ಭಾರತೀಯರು ಗಾಂಧೀಜಿ ಮತ್ತು ಭಗತ್‌ಸಿಂಗ್‌ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಸಿದರು. ಸ್ವಾತಂತ್ರ್ಯ ಬಂದ ನಂತರ ಹೋರಾಟದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಇಬ್ಭಾಗವಾಯಿತು. ಮುಸ್ಲಿಂ ಲೀಗ್ ಪಾಕಿಸ್ತಾನವನ್ನು ಮತ್ತು ಕಾಂಗ್ರೆಸ್ ಭಾರತ ದೇಶವನ್ನು ಹಂಚಿಕೊಂಡವು’ ಎಂದರು.

‘ಇಬ್ಭಾಗವಾದ ಎರಡೂ ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ವರ್ಗೀಕರಣವಾಯಿತು, ಭಾರತದಲ್ಲಿ ಶೇ 3ರಷ್ಟು ಮಂದಿ ಮುಸ್ಲಿಮರು ವಾಸಿಸಿದರು. ಪಾಕಿಸ್ತಾನದಲ್ಲಿ ಶೇ 27ರಷ್ಟು ಹಿಂದೂಗಳು ವಾಸಿಸತೊಡಗಿದರು. ಭಾರತದಲ್ಲಿ ಮುಸ್ಲಿಂ ಸಮುದಾಯವನ್ನು ಗೌರವಯುತವಾಗಿ ನಡೆಸಿಕೊಂಡಿದ್ದೇವೆ. ಇದರಿಂದ ಆ ಸಮುದಾಯದ ಜನಸಂಖ್ಯೆ ಶೇ 17ಕ್ಕೆ ಏರಿದೆ. ಆದರೆ, ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆ ಶೇ 27ರಿಂದ ಶೇ 3ಕ್ಕೆ ಇಳಿದಿದೆ’ ಎಂದು ವಿವರಿಸಿದರು.

ಭಾರತದಲ್ಲಿ ಆಶ್ರಯ: ‘ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ, ಕ್ರೈಸ್ತ, ಬುದ್ಧ, ಮತ್ತು ಜೈನ ಧರ್ಮೀಯರು ಅಲ್ಲಿನ ಹಿಂಸೆ ತಾಳಲಾರದೆ ಹತ್ತಾರು ವರ್ಷಗಳಿಂದ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಇಂತಹ ನಿರಾಶ್ರಿತರಿಗೆ ದೇಶದಲ್ಲಿ ಆಶ್ರಯ ನೀಡುವುದು ತಪ್ಪೇ?’ ಎಂದು ಪ್ರಶ್ನಿಸಿದರು.

‘ಪೌರತ್ವ ಕಾಯ್ದೆ ಮೂಲಕ ದೇಶದ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡುವ ಉದ್ದೇಶವಿಲ್ಲ. ಮೋದಿ ಅವರು 2ನೇ ಅವಧಿಗೆ ಬಹುಮತ ಪಡೆದು ಪ್ರಧಾನಿಯಾಗಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ಇಡೀ ವಿಶ್ವ ಭಾರತದತ್ತ ಬೆರಗು ಗಣ್ಣಿನಿಂದ ನೋಡುತ್ತಿದೆ. ಕಾಂಗ್ರೆಸ್‌ಗೆ ಇದನ್ನು ಸಹಿಸಲಾಗುತ್ತಿಲ್ಲ’ ಎಂದು ಟೀಕಿಸಿದರು.

‘ಜಮ್ಮು ಕಾಶ್ಮೀರ ವಿಚಾರದಲ್ಲಿ 370ನೇ ವಿಧಿ ಬದಲಾವಣೆ ಆದಾಗ ಅಲ್ಪಸಂಖ್ಯಾತರು ವಿರೋಧ ತೋರಲಿಲ್ಲ. ತ್ರಿವಳಿ ತಲಾಕ್ ವಿಚಾರದಲ್ಲಿ ಅವರು ತಲೆಕೆಡಿಸಿಕೊಳ್ಳಲಿಲ್ಲ. ಅಯೋಧ್ಯೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಅವರು ಸ್ವಾಗತಿಸಿದರು’ ಎಂದು ಹೇಳಿದರು.

ಅಪಾಯವಿಲ್ಲ: ‘ಕಾಂಗ್ರೆಸ್‌ ಪೌರತ್ವ ಕಾಯ್ದೆ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ದೇಶದಲ್ಲಿ ಅಲ್ಪಸಂಖ್ಯಾತರನ್ನು ಎತ್ತಿಕಟ್ಟಿ ಗಲಭೆ ಎಬ್ಬಿಸುತ್ತಿದೆ. ಆದರೆ, ಪೌರತ್ವ ಕಾಯ್ದೆಯಿಂದ ಯಾರಿಗೂ ಅಪಾಯವಿಲ್ಲ’ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು.

‘2 ಬಾರಿ ಪ್ರಧಾನಿಯಾದ ವಾಜಪೇಯಿ ದೇಶದಿಂದ ಯಾರನ್ನಾದರೂ ಓಡಿಸಿದರೆ? ಅವರಂತೆಯೇ 2ನೇ ಬಾರಿಗೆ ಪ್ರಧಾನಿಯಾಗಿರುವ ಮೋದಿ ಅವರು ಯಾರನ್ನಾದರೂ ದೇಶ ಬಿಟ್ಟು ಹೊರಗೆ ಕಳುಹಿಸಿದ್ದಾರೆಯೇ? ವಾಜಪೇಯಿ ಅವರ ಕಾಲದಲ್ಲಿ ಅಬ್ದುಲ್‌ ಕಲಾಂ ಅವರನ್ನು ದೇಶದ ರಾಷ್ಟ್ರಪತಿಯಾಗಿ ಮಾಡಲಾಯಿತು’ ಎಂದು ವಿವರಿಸಿದರು.

‘ದೇಶದಲ್ಲಿ ಮುಸ್ಲಿಂ ಸಮುದಾಯದ ಹಲವರು ಮುಖ್ಯಮಂತ್ರಿಯಾಗಿದ್ದಾರೆ ಹಾಗೂ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಮಹಮ್ಮದ್‌ ಅಜರುದ್ದೀನ್‌ ಅವರು ಹಲವು ವರ್ಷಗಳ ಕಾಲ ಭಾರತ ಕ್ರಿಕೆಟ್‌ ತಂಡದ ನಾಯಕರಾಗಿದ್ದರು. ಅದೇ ರೀತಿ ನಟರಾದ ಸಲ್ಮಾನ್‌ ಖಾನ್ ಹಾಗು ಶಾರೂಕ್ ಖಾನ್ ಅವರನ್ನು ಮೆಚ್ಚಿಕೊಂಡಿದ್ದೇವೆ. ಆದರೂ ಕಾಂಗ್ರೆಸ್‌ ಮುಖಂಡರು ಬಿಜೆಪಿಯನ್ನು ಮುಸ್ಲಿಂ ವಿರೋಧಿ ಎಂದು ಟೀಕಿಸುವುದು ಸರಿಯೇ?’ ಎಂದು ಪ್ರಶ್ನಿಸಿದರು.

ರಾಜ್ಯ ಬಿಜೆಪಿ ಉಸ್ತುವಾರಿ ಪಿ.ಮುರುಳೀಧರರಾವ್‌, ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ಎ.ನಾಗರಾಜ್, ವೈ.ಸಂಪಂಗಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಪಾಲ್ಗೊಂಡರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು