ಶುಕ್ರವಾರ, ಏಪ್ರಿಲ್ 23, 2021
22 °C
ನಗರಸಭೆ ನೂತನ ಸದಸ್ಯರ ಸನ್ಮಾನ ಸಮಾರಂಭ

ಬೆಮಲ್‌ ಉಳಿವಿಗೆ ಕಾಂಗ್ರೆಸ್ ನಿಯೋಗ: ಕೆ.ಎಚ್.ಮುನಿಯಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್‌: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಾರ್ವಜನಿಕ ರಂಗದ ಕಾರ್ಖಾನೆಗಳನ್ನು ಮುಚ್ಚುವ ಪ್ರಕ್ರಿಯೆಯಲ್ಲಿ ತೊಡಗಿದೆ. ಲಕ್ಷಾಂತರ ಜನರನ್ನು ಬೀದಿ ಪಾಲು ಮಾಡುತ್ತಿದೆ. ಬೆಮಲ್‌ ಕಾರ್ಖಾನೆ ಕೂಡ ಖಾಸಗಿ ಪಾಲಾಗಬಾರದಂತೆ ತಡೆಗಟ್ಟಲು ಕಾಂಗ್ರೆಸ್ ಪಕ್ಷದ ಉನ್ನತ ಮಟ್ಟದ ನಿಯೋಗವನ್ನು ಕೇಂದ್ರ ಸರ್ಕಾರದ ಬಳಿ ಕರೆದೊಯ್ಯಲಾಗುವುದು ಎಂದು ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಹೇಳಿದರು.

ರಾಬರ್ಟಸನ್‌ಪೇಟೆಯಲ್ಲಿ ಭಾನುವಾರ ಕಾಂಗ್ರೆಸ್‌ನಿಂದ ನಗರಸಭೆಗೆ ಆಯ್ಕೆಯಾದ ಸದಸ್ಯರು ಮತ್ತು ಬೆಂಬಲ ಸೂಚಿಸಿದ ಸದಸ್ಯರನ್ನು ಸನ್ಮಾನಿಸಿ ಮಾತನಾಡಿ, ಬಿಜೆಪಿ ಒಳ್ಳೆಯ ಕೆಲಸಕ್ಕೆ ಅಡ್ಡಿ ಮಾಡುತ್ತಿದೆ. ₹279 ಕೋಟಿ ರೂಪಾಯಿಗಳನ್ನು ಮಾರಿಕುಪ್ಪಂ–ಕುಪ್ಪಂ ಹೊಸ ರೈಲು ಮಾರ್ಗಕ್ಕೆ ನಾನು ಸಚಿವನಾಗಿದ್ದಾಗ ಬಿಡುಗಡೆ ಮಾಡಿದ್ದೆ. ಆದರೆ ಬಿಜೆಪಿಗರ ಒತ್ತಡದಿಂದ ಎರಡು ವರ್ಷ ಬಿಜಿಎಂಎಲ್‌ ಅನುಮತಿ ನೀಡದೆ ಸತಾಯಿಸಿತು. ಬಿಜಿಎಂಎಲ್‌ ಕಾರ್ಖಾನೆಯನ್ನು ಮುಚ್ಚಲು ತೀರ್ಮಾನ ತೆಗೆದುಕೊಂಡಿದ್ದು ಸಹ ಎನ್‌ಡಿಎ ಸರ್ಕಾರ. ಈಗ ಬೆಮಲ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಹೊರಟಿದೆ. ಯಾವುದೆ ಕಾರಣದಿಂದಲೂ ಖಾಸಗೀಕರಣ ಮಾಡಲು ಬಿಡುವುದಿಲ್ಲ. ಸೋನಿಯಾಗಾಂಧಿ, ರಾಹುಲ್ ಗಾಂಧಿ ನೇತೃತ್ವದಲ್ಲಿ ಉನ್ನತ ಮಟ್ಟದ ಕಾಂಗ್ರೆಸ್ ನಿಯೋಗವನ್ನು ಕರೆದೊಯ್ಯಲಾಗುವುದು ಎಂದರು.

ಬಿಜಿಎಂಎಲ್ ಗೆ ಸೇರಿದ 12 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗೆ ಯೋಜನೆ ರೂಪಿಸಲಾಗಿತ್ತು. ರೈಲ್ವೆ ಇಲಾಖೆಗೆ ಸಂಬಂಧಿಸಿದ ಹಲವಾರು ಯೋಜನೆಗಳು ಕೋಲಾರ ಜಿಲ್ಲೆಗೆ ಬಂದಿದ್ದರೂ, ಅವುಗಳ ಅನುಷ್ಠಾನ ಕೂಡ ಆಗಿಲ್ಲ. ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರ ಜಮೀನು ಮಂಜೂರು ಮಾಡಬೇಕು. ಜಿಲ್ಲೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವಂತೆ ಮುಖ್ಯಮಂತ್ರಿಗಳನ್ನು ಕಾಂಗ್ರೆಸ್ ನಿಯೋಗ ಭೇಟಿ ಮಾಡಲಿದೆ ಎಂದು ತಿಳಿದರು.

ಶಾಸಕಿ ಎಂ.ರೂಪಕಲಾ ಮಾತನಾಡಿ, ನಗರದಲ್ಲಿ ಕುಡಿಯುವ ನೀರನ್ನು ಖರೀದಿ ಮಾಡಲು ಹತ್ತು ರೂಪಾಯಿ ಕೂಡ ಖರ್ಚು ಮಾಡಬಾರದು. ನಗರದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಬೇಕು. ಒಳ್ಳೆಯ ಉದ್ದೇಶಗಳನ್ನು ಇಟ್ಟುಕೊಂಡು ನಗರಸಭೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಲಾಗುತ್ತದೆ. ನಮ್ಮಲ್ಲಿ 13 ಮಂದಿ ಆಯ್ಕೆಯಾಗಿದ್ದಾರೆ. ಆರು ಪಕ್ಷೇತರರು ಬೆಂಬಲ ಸೂಚಿಸಿದ್ದಾರೆ. ಎಲ್ಲ ಸದಸ್ಯರು ಕಷ್ಟಪಟ್ಟು ಕೆಲಸ ಮಾಡಬೇಕು. ರಾಜ್ಯದಲ್ಲಿಯೇ ಉತ್ತಮ ನಗರಸಭೆ ಎಂದು ಹೆಸರುಗಳಿಸಬೇಕು ಎಂದರು.

ನಗರಸಭೆಗೆ ಇನ್ನೂ ಆರು ಜನ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಬೇಕಾಗಿತ್ತು. ಆದರೆ ಕಾಂಗ್ರೆಸ್ ಪಕ್ಷದ ಕೆಲವು ಪಕ್ಷದ್ರೋಹಿಗಳು ಬಿಜೆಪಿ ಜೊತೆಗೆ ಸೇರಿಕೊಂಡು ಪಕ್ಷಕ್ಕೆ ದ್ರೋಹ ಮಾಡಿದರು. ಅವರನ್ನು ಸುಮ್ಮನೆ ಬಿಡುವುದಿಲ್ಲ. ಪಕ್ಷಕ್ಕಾಗಿ ಕೆಲಸ ಮಾಡುವವರು ಬಲಿಪಶುವಾಗಬಾರದು. ಪಕ್ಷಕ್ಕೆ ನಿಷ್ಠಾವಂತರಾಗಿ ದುಡಿದವರಿಗೆ ಮುಂದಿನ ದಿನಗಳಲ್ಲಿ ಆದ್ಯತೆ ನೀಡಲು ವರಿಷ್ಠರು ಕ್ರಮ ಕೈಗೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸದಸ್ಯರಾದ ಬಿ.ಮಾಣಿಕ್ಯಂ, ವಳ್ಳಲ್‌ ಮುನಿಸ್ವಾಮಿ, ಶಾಂತಿಮುನಿಸ್ವಾಮಿ, ಡಿ.ಜಯಪಾಲ್‌, ಶಾಂತಿ ಅನ್ಬು, ಜಿ.ರಮೇಶ್‌, ಇಂದಿರಾಗಾಂಧಿ ದಯಾಶಂಕರ್‌, ದೇವಿ ಗಣೇಶ್‌, ಜಿ.ಕರುಣಾಕರನ್‌, ಬಿ.ಪಿ.ರಮೇಶ್‌ಕುಮಾರ್ ಜೈನ್‌, ಪಿ.ಸೆಂದಿಲ್‌ ನಾಥನ್‌, ಶಾಲಿನಿ ನಂದಕುಮಾರ್, ಜರ್ಮನ್‌ ಜೂಲಿಯಸ್‌, ಪಕ್ಷೇತರ ಸದಸ್ಯರುಗಳಾದ ಮಲರ್‌ ವೇಣಿ, ಸುಕನ್ಯ, ತಸ್ಲಿಂಬಾನು, ಶಕ್ತಿವೇಲನ್‌, ಜಯಲಕ್ಷ್ಮೀ ಮತ್ತು ಜೆಡಿಎಸ್‌ ನಿಂದ ಆಯ್ಕೆಯಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡಿರುವ ವೇಣುಗೋಪಾಲ್‌ ಅವರನ್ನು ಸನ್ಮಾನಿಸಲಾಯಿತು.

ಕಾಂಗ್ರೆಸ್ ನ 13 ಮತ್ತು ಬೆಂಬಲ ಸೂಚಿಸಿದ 6 ಪಕ್ಷೇತರರನ್ನು ಸನ್ಮಾನಿಸಲಾಯಿತು. ಮುಖಂಡರಾದ ನಾಗರತ್ನಮ್ಮ, ಮೊದಲೈಮುತ್ತು, ಅ.ಮು.ಲಕ್ಷ್ಮೀನಾರಾಯಣ, ಜಯದೇವ, ಆರ್.ನಾರಾಯಣರೆಡ್ಡಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು