ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ಹಬ್ಬದಂತೆ ಪರಿಗಣಿಸಿ: ಡಿಡಿಪಿಐ ರತ್ನಯ್ಯ ಕಿವಿಮಾತು

ಸಂವಾದದಲ್ಲಿ ವಿದ್ಯಾರ್ಥಿಗಳಿಗೆ ಡಿಡಿಪಿಐ ರತ್ನಯ್ಯ ಕಿವಿಮಾತು
Last Updated 23 ಜನವರಿ 2020, 16:08 IST
ಅಕ್ಷರ ಗಾತ್ರ

ಕೋಲಾರ: ‘ಏಕಾಗ್ರತೆ, ಶ್ರದ್ಧೆ, ನಿರಂತರ ಕಲಿಕೆಯೊಂದಿಗೆ ಪರೀಕ್ಷೆಯನ್ನು ಹಬ್ಬವಾಗಿ ಪರಿಗಣಿಸಿ ಗೆದ್ದು ಬನ್ನಿ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ದಾನಮ್ಮ ಚನ್ನಬಸವಯ್ಯ (ಎಸ್‌ಡಿಸಿ) ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅರಿವು ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಓದಿದವರಿಗೆ ಪರೀಕ್ಷಾ ಭಯ ಇರುವುದಿಲ್ಲ. ಅಭ್ಯಾಸದ ಕೊರತೆ ಇದ್ದವರಿಗೆ ಪರೀಕ್ಷಾ ಭಯ ಸಹಜ ವಿದ್ಯಾರ್ಥಿಗಳು ಇಂದಿನಿಂದಲೇ ದಿನಕ್ಕೆ 2 ಅಂಕ ಪಡೆಯಲು ಅಭ್ಯಾಸ ಮಾಡಿದರೂ ಸಾಧನೆ ಸಾಧ್ಯ. ಯಾವುದೇ ವಿಷಯ ಕಠಿಣವಲ್ಲ. ಪರೀಕ್ಷೆ ಮುಗಿಯುವವರೆಗೆ ಟಿ.ವಿ ನೋಡುವುದನ್ನು ಹಾಗೂ ಮೊಬೈಲ್‌ ಬಳಸುವುದನ್ನು ಕಡಿಮೆ ಮಾಡಿ’ ಎಂದು ಕಿವಿಮಾತು ಹೇಳಿದರು.

‘ಇಲಾಖೆ ಸಿದ್ಧಪಡಿಸಿರುವ 6 ಸೆಟ್ ಪ್ರಶ್ನೆಪತ್ರಿಕೆಗಳನ್ನು ಪುಸ್ತಕವಾಗಿಸಿ ಪ್ರತಿ ಶಾಲೆಗೂ ವಿತರಿಸಲಾಗುತ್ತಿದೆ. ಹುಟ್ಟಿನಿಂದ ಯಾರೂ ಸಾಧಕರಲ್ಲ. ಸತತ ಪರಿಶ್ರಮ, ಅಭ್ಯಾಸ, ಗುರಿಯೊಂದಿಗೆ ಅಂಬೇಡ್ಕರ್, ಅಬ್ದುಲ್‌ ಕಲಾಂ, ವಿಶ್ವೇಶ್ವರಯ್ಯ ಅವರು ಸಾಧಕರಾದರು. ಸಾಧನೆಗೆ ಬಡತನ ಅಡ್ಡಿಯಲ್ಲ’ ಎಂದರು.

‘ಪಠ್ಯಪುಸ್ತಕ ಓದುವ ಅಭಿಯಾನ ಮಾಡಿ. ಹೆಚ್ಚು ಅಂಕ ಗಳಿಸಲು ಇದು ಅಗತ್ಯ. ಗುಂಪು ಚರ್ಚೆ ಮತ್ತು ಅಧ್ಯಯನದಿಂದ ವಿಷಯಗಳಿಗೆ ಸಂಬಂಧಪಟ್ಟ ಗೊಂದಲ ನಿವಾರಣೆಯಾಗುತ್ತವೆ. ಕಠಿಣ ವಿಷಯಗಳ ಓದಿಗೆ ಹೆಚ್ಚಿನ ಕಾಲಾವಕಾಶ ಮೀಸಲಿಡಬೇಕು. ಓದಿದ್ದನ್ನು ಮೂರ್ನಾಲ್ಕು ಬಾರಿ ಬರೆದು ಅಭ್ಯಾಸ ಮಾಡಬೇಕು’ ಎಂದು ತಿಳಿಸಿದರು.

ದಿಟ್ಟ ಹೆಜ್ಜೆ: ‘ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಈ ಸಂವಾದ ಕಾರ್ಯಕ್ರಮ ದಿಟ್ಟ ಹೆಜ್ಜೆ. ಮಕ್ಕಳು ಪೋಷಕರ ಕನಸು ನನಸು ಮಾಡಲು ಶ್ರಮ ವಹಿಸಬೇಕು. ದುಶ್ಚಟಗಳಿಂದ ದೂರವಿದ್ದು, ಶಾಲೆಗೆ ಹಾಗೂ ಪೋಷಕರಿಗೆ  ಕೀರ್ತಿ ತರಬೇಕು’ ಎಂದು ಎಸ್‌ಡಿಸಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಉಷಾ ಗಂಗಾಧರ್ ಹೇಳಿದರು.

‘ಉತ್ತಮ ಬರವಣಿಗೆಗೆ ಹೆಚ್ಚು ಅಂಕ ಸಿಗುವುದರಿಂದ ಬರವಣಿಗೆ ಕೌಶಲ ರೂಢಿಸಿಕೊಳ್ಳಿ. ಮಾರ್ಚ್‌ 27ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಗಣಿತ ವಿಷಯಕ್ಕೆ ಓದಲು 3 ದಿನ ಅವಕಾಶ ನೀಡಲಾಗಿದೆ’ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್‌ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ವಿವರಿಸಿದರು.

‘ಈ ಬಾರಿ ಪ್ರಶ್ನೆಪತ್ರಿಕೆ ಮಾದರಿ ಬದಲಾಗಿದೆ. 2 ಅಂಕದ ಪ್ರಶ್ನೆಗಳನ್ನು ಕಡಿಮೆ ಮಾಡಿದ್ದು, 3 ಅಂಕದ ಪ್ರಶ್ನೆಗಳನ್ನು ಹೆಚ್ಚಿಸಲಾಗಿದೆ. ಈ ಬಾರಿ 5 ಅಂಕದ ಪ್ರಶ್ನೆ ಇರುತ್ತದೆ. ದ್ವಿತೀಯ, ತೃತೀಯ ಭಾಷೆಗಳಿಗೆ 2- ಗಂಟೆ 30 ನಿಮಿಷ ಕಾಲಾವಕಾಶವಿದೆ. ಪರೀಕ್ಷಾ ಅವಧಿಯನ್ನು 3 ಗಂಟೆಗೆ ವಿಸ್ತರಿಸಲಾಗಿದೆ. ಉಳಿದ ವಿಷಯಗಳಿಗೂ 3- ಗಂಟೆ 15 ನಿಮಿಷ ಅವಧಿ ನೀಡಲಾಗಿದೆ’ ಎಂದು ತಿಳಿಸಿದರು.

‘ಪರೀಕ್ಷಾ ಕೇಂದ್ರಕ್ಕೆ ಅರ್ಧ ತಾಸು ಮುಂಚಿತವಾಗಿ ಹೋಗಿ. ಗಣಿತಕ್ಕೆ ಗ್ರಾಫ್‌ಶೀಟ್ ಇರುವ 28 ಪುಟಗಳ ಮತ್ತು ಇತರೆ ವಿಷಯಗಳಿಗೆ 20 ಪುಟಗಳ ಉತ್ತರ ಪತ್ರಿಕೆ ನೀಡುವುದರಿಂದ ಪರಿಶೀಲಿಸಿ ಉತ್ತರ ಬರೆಯಲು ಆರಂಭಿಸಿ’ ಎಂದು ಸೂಚಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ, ಇಸಿಒಗಳಾದ ರಾಘವೇಂದ್ರ, ಆರ್.ಶ್ರೀನಿವಾಸನ್, ಎಸ್‌ಡಿಸಿ ಪ್ರೌಢ ಶಾಲೆ ಪ್ರಾಂಶುಪಾಲೆ ಕೆ.ಆರ್.ನಾಗಲಕ್ಷ್ಮಿ, ಕಾಲೇಜು ಪ್ರಾಂಶುಪಾಲ ಶಿವರಾಮ್ ಎನ್.ಪಾಟೀಲ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT