ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಸಿ ಬ್ಯಾಂಕ್ ವಿರುದ್ಧ ಸಂಚು: ರಾಜಕೀಯೇತರ ಹೋರಾಟ

ಬ್ಯಾಂಕ್‌ ರೈತರು–ಮಹಿಳೆಯರ ಜೀವನಾಡಿ: ಶಾಸಕ ಶ್ರೀನಿವಾಸಗೌಡ ಎಚ್ಚರಿಕೆ
Last Updated 12 ಸೆಪ್ಟೆಂಬರ್ 2021, 17:03 IST
ಅಕ್ಷರ ಗಾತ್ರ

ಕೋಲಾರ: ‘ಅವಿಭಜಿತ ಕೋಲಾರ ಜಿಲ್ಲೆಯ ರೈತರು ಮತ್ತು ಮಹಿಳೆಯರ ಜೀವನಾಡಿಯಾಗಿರುವ ಡಿಸಿಸಿ ಬ್ಯಾಂಕ್ ವಿರುದ್ಧ ಸಂಚು ಮಾಡಿದರೆ ಅವಳಿ ಜಿಲ್ಲೆಯಿಂದ ರಾಜಕೀಯೇತರ ಹೋರಾಟ ರೂಪಿಸಿ ನಾನೇ ಮುಂಚೂಣಿಯಲ್ಲಿ ನಿಲ್ಲುತ್ತೇನೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಎಚ್ಚರಿಕೆ ನೀಡಿದರು.

ಡಿಸಿಸಿ ಬ್ಯಾಂಕ್‌, ವಕ್ಕಲೇರಿ ರೈತರು ಹಾಗೂ ರೇಷ್ಮೆ ಬೆಳೆಗಾರರ ಸಹಕಾರ ಸಂಘದ ಸಹಯೋಗದಲ್ಲಿ ತಾಲ್ಲೂಕಿನ ವಕ್ಕಲೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರು ಮತ್ತು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ₹ 2 ಕೋಟಿ ಸಾಲ ವಿತರಿಸಿ ಮಾತನಾಡಿದರು.

‘ಸಹಕಾರಿ ವ್ಯವಸ್ಥೆ ಹಾಳು ಮಾಡುವ ಪ್ರಯತ್ನ ಸಲ್ಲದು. ಇದರಲ್ಲಿ ಜನರ ಬದುಕಿನ ಪ್ರಶ್ನೆ ಇದೆ. ಸಹಕಾರಿ ಸಂಸ್ಥೆಗಳಲ್ಲಿ ಕೈಹಾಕುವ ಮುನ್ನ 100 ಬಾರಿ ಆಲೋಚಿಸಬೇಕು. 1994–-95ನೇ ಸಾಲಿನ ಹಳೆಯ ಪ್ರಕರಣ ಹಿಡಿದುಕೊಂಡು ಈಗ ಡಿಸಿಸಿ ಬ್ಯಾಂಕನ್ನು ಅಭದ್ರಗೊಳಿಸುವ ಪ್ರಯತ್ನ ಸಹಿಸಲು ಸಾಧ್ಯವಿಲ್ಲ. ಬ್ಯಾಂಕ್ ದಿವಾಳಿಯಾಗಿ ಅವಳಿ ಜಿಲ್ಲೆಯ ರೈತರು ಸಾಲ ಸೌಲಭ್ಯದಿಂದ ವಂಚಿತವಾದ ದಿನಗಳನ್ನು ಮರೆತಿಲ್ಲ’ ಎಂದರು.

‘ಡಿಸಿಸಿ ಬ್ಯಾಂಕ್‌ನಿಂದ ಮಹಿಳೆಯರಿಗೆ ನೀಡಿದಷ್ಟು ಸಾಲವನ್ನು ಬೇರೆ ಯಾವುದೇ ಜಿಲ್ಲೆಯಲ್ಲೂ ನೀಡಿಲ್ಲ. ನಾನೂ ಶಾಸಕನಾಗುವುದಕ್ಕಿಂತ ಮೊದಲು ಅಣ್ಣಿಹಳ್ಳಿ ಸೊಸೈಟಿಯಿಂದಲೇ ಸಹಕಾರಿಯಾಗಿ ಬೆಳೆದು ಬಂದವನು’ ಎಂದು ತಿಳಿಸಿದರು.

ಮೌನವೇ ಉತ್ತರ: ‘ನಾನೇನು ತಪ್ಪು ಮಾಡಿದ್ದೇನೆ ಎಂದು ಅರ್ಥವಾಗುತ್ತಿಲ್ಲ. ಕೆಲವರು ಪ್ರತಿನಿತ್ಯ ಬ್ಯಾಂಕ್‌ನ ವಿರುದ್ಧ ಸಂಚು ನಡೆಸುತ್ತಿದ್ದಾರೆ. ಆದರೆ, ಎಲ್ಲರ ಟೀಕೆಗಳಿಗೂ ನನ್ನದು ಮೌನವೇ ಉತ್ತರ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

‘ದಿವಾಳಿಯಾಗಿದ್ದ ಬ್ಯಾಂಕನ್ನು ಅಭಿವೃದ್್ಧಿಪಡಿಸಿದ್ದು ತಪ್ಪೇ? ಕಡಿಮೆ ಬಡ್ಡಿ, ಶೂನ್ಯ ಬಡ್ಡಿ ಸಾಲ, ಸಾಲ ಮನ್ನಾದಂತಹ ಯೋಜನೆಗಳಿಂದ ವಂಚಿತರಾಗಿದ್ದ ಜಿಲ್ಲೆಯ ರೈತರು ಹಾಗೂ ಮಹಿಳೆಯರ ಪರ ಕೆಲಸ ಮಾಡಿದ್ದು ತಪ್ಪಾಯಿತೇ?’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

‘ರಾಜ್ಯ ಸರ್ಕಾರ ಹಾಗೂ ಸಹಕಾರ ಸಚಿವರಿಗೆ ಮನವಿ ಮಾಡುತ್ತೇನೆ. ನಾವು ರಾಜಕಾರಣ ಮಾಡುತ್ತಿಲ್ಲ. ಬಡವರು, ಹೆಣ್ಣು ಮಕ್ಕಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. ಬ್ಯಾಂಕ್ ರೈತರು, ಮಹಿಳೆಯರ ಆಶಾಕಿರಣವಾಗಿದೆ. ಇಂತಹ ಸಂಸ್ಥೆಗೆ ಕೆಟ್ಟದು ಮಾಡಬೇಡಿ’ ಎಂದು ಕೋರಿದರು.

‘ಅಧಿಕಾರ ಶಾಶ್ವತವಲ್ಲ. ಮಹಿಳೆಯರು, ರೈತರು ಬ್ಯಾಂಕ್‌ನ ಜತೆಗಿದ್ದಾರೆ. ಆಡಳಿತ ಮಂಡಳಿಯಿಂದ ಅಥವಾ ವೈಯಕ್ತಿಕವಾಗಿ ನನ್ನಿಂದ ತಪ್ಪಾಗಿದ್ದರೆ ತಿದ್ದುವ ಕೆಲಸ ಮಾಡಿ. ನೇರವಾಗಿ ಬಂದು ಬುದ್ಧಿ ಹೇಳಿ. ಅಧಿಕಾರದಲ್ಲಿರುವ ಕೊನೆ ಕ್ಷಣದವರೆಗೂ ರೈತರು, ಹೆಣ್ಣು ಮಕ್ಕಳಿಗೆ ಬ್ಯಾಂಕ್ ಸೌಲಭ್ಯ ಕಲ್ಪಿಸಲು ಹೋರಾಡುತ್ತಲೇ ಇರುತ್ತೇವೆ’ ಎಂದರು.

ಶಾಪ ತಟ್ಟುತ್ತದೆ: ‘ರಾಜ್ಯದಲ್ಲೇ ಅತಿ ಹೆಚ್ಚು 6 ಲಕ್ಷ ಮಹಿಳೆಯರಿಗೆ ಸಾಲ ನೀಡಿದ್ದೇವೆ. ದಿವಾಳಿಯಾಗಿದ್ದ ಬ್ಯಾಂಕ್‌ಗೆ ಶೂನ್ಯದಿಂದ ₹ 1,200 ಕೋಟಿ ಸಾಲ ನೀಡುವ ಶಕ್ತಿ ತುಂಬಿದ್ದೇವೆ. ಬ್ಯಾಂಕ್‌ನ ಬೆನ್ನಿಗೆ ಚೂರಿ ಹಾಕಿದರೆ ಹೆಣ್ಣು ಮಕ್ಕಳ ಶಾಪ ತಟ್ಟುತ್ತದೆ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ ಗುಡುಗಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣೇಗೌಡ, ವಕ್ಕಲೇರಿ ಸೊಸೈಟಿ ಅಧ್ಯಕ್ಷ ಪಾಲಾಕ್ಷಗೌಡ, ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕರಾದ ಚಂದ್ರೇಗೌಡ, ಚಿದಾನಂದ್, ಟಿ.ಕೃಷ್ಣಪ್ಪ, ಎನ್.ಎಂ.ಆನಂದಕುಮಾರ್, ರಮೇಶ್, ಟಿ.ಮುನಿಯಪ್ಪ, ಆರ್.ಚಂದ್ರೇಗೌಡ, ಸದಾಶಿವಯ್ಯ, ವೆಂಕಟಗಿರಿಯಪ್ಪ, ಗ್ರಾ.ಪಂ ಅಧ್ಯಕ್ಷ ಮುರಳಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT