ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ತೇಜೋವಧೆಗೆ ಷಡ್ಯಂತ್ರ: ಶಾಂತರಾಜು ಆರೋಪ

ದಲಿತ ವೆಲ್‌ಫೇರ್‌ ಟ್ರಸ್ಟ್‌ನ ಅಧ್ಯಕ್ಷ ಶಾಂತರಾಜು ಆರೋಪ
Last Updated 3 ಫೆಬ್ರುವರಿ 2023, 5:40 IST
ಅಕ್ಷರ ಗಾತ್ರ

ಕೋಲಾರ: ‘ಜಾತ್ಯತೀತ ಮನೋಭಾವದ‌ ಸಿದ್ದರಾಮಯ್ಯ ಅವರ ತೇಜೋವಧೆಗೆ ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸಲಾಗುತ್ತಿದೆ. ಅವರನ್ನು ಕೆಲವೇ ಕೆಲವು ಕುತಂತ್ರಿಗಳು ದಲಿತ ವಿರೋಧಿ ಎಂಬಂತೆ ಬಿಂಬಿಸಿ ಕೋಲಾರ ಕ್ಷೇತ್ರದಲ್ಲಿ ಕರಪತ್ರ ಹಂಚಿ ಅಪಪ್ರಚಾರ ನಡೆಸುತ್ತಿದ್ದಾರೆ’ ಎಂದು ಕರ್ನಾಟಕ ದಲಿತ ವೆಲ್‌ಪೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ಆರೋಪಿಸಿದರು.

‘ದಿನೇದಿನೇ ಸಿದ್ದರಾಮಯ್ಯ ಮೇಲೆ ವಿರೋಧ ಹೆಚ್ಚಾಗುವಂತೆ ಮಾಡಲಾಗುತ್ತಿದೆ. ಇದರ ಪರಿಣಾಮ ರಾಜ್ಯದೆಲ್ಲೆಡೆ ಬೀರುತ್ತಿದ್ದು, ಸಾರ್ವ
ಜನಿಕರು ಎಚ್ಚರಿಕೆಯಿಂದ ಇರಬೇಕು’ ಎಂದು ಗುರುವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ದಲಿತ‌ ಮುಖ್ಯಮಂತ್ರಿ ಮಾಡಬೇಕೆಂಬ ಮಹಾದಾಸೆ ನಮಗೂ ಇದೆ. ಅಕಸ್ಮಾತ್‌ ಅದು ಸಾಧ್ಯವಾಗುವುದು ಕಾಂಗ್ರೆಸ್‌ನಿಂದ ಮಾತ್ರ. ಆದರೆ, ಅದಕ್ಕೂ ಸಂದರ್ಭ ಕೂಡಿಬರಬೇಕು’ ಎಂದರು.

‘ಕೋಲಾರ ಕ್ಷೇತ್ರದಲ್ಲಿ ಅಹಿಂದ ಮತಗಳು ಹೆಚ್ಚಿದ್ದು, ಅವು ಕೈಹಿಡಿಯುವ ನಿರೀಕ್ಷೆಯಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಒಲವು ತೋರಿದ್ದಾರೆ. ಆದರೆ, ಅವರ ವಿರುದ್ಧ ದಲಿತ ಹಾಗೂ ಇತರ ಸಮುದಾಯಗಳನ್ನು ಎತ್ತಿ ಕಟ್ಟುವ ಕೆಲಸ ನಡೆಯುತ್ತಿದೆ. ಮನೆಮನೆಗೆ ಕರಪತ್ರ ಹಂಚಿ ಅಪಪ್ರಚಾರ ಮಾಡಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಎಚ್ಚರಿಸಿದರು.

‘ಬಿಜೆಪಿ ಅಧಿಕಾರಾವಧಿಯಲ್ಲಿ ದಲಿತರ ಮೇಲೆ ಹಲ್ಲೆ ನಡೆದರೂ ಕೇಳುವವರು ಇಲ್ಲವಾಗಿದ್ದಾರೆ. ಲಕ್ಷಾಂತರ ದಲಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಕ್ಕಿಲ್ಲ. ಇಂತಹ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರ
ಬಾರದು. ರಾಜ್ಯದ ಅಭಿವೃದ್ಧಿ, ಜನರ ನೆಮ್ಮದಿಗೆ ಸಿದ್ದರಾಮಯ್ಯ ಅವರಿಗೆ ಅಧಿಕಾರ ಸಿಗಬೇಕು’ ಎಂದು ಪ್ರತಿಪಾದಿಸಿದರು.

‘2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ಅವರ ಸೋಲಿಗೆ ಕಾರಣನಾಗಿದ್ದೆ. ಆದರೆ, ಬದಲಾಗಿರುವ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕಿದೆ. ಈಗಲೂ ವರುಣಾ, ಚಾಮುಂಡೇಶ್ವರಿಯಲ್ಲಿ ಅವರ ಸ್ಪರ್ಧೆಗೆ ಜನ ಒಲವು ತೋರುತ್ತಿದ್ದಾರೆ. ಆದರೆ, ಶೋಷಿತ ವರ್ಗದಿಂದ ಬಂದಿರುವ ಅವರು ತಳಸಮುದಾಯಗಳು ಹೆಚ್ಚಿಗೆ ಇರುವ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವ ಉದ್ದೇಶದಿಂದ ಈ ಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಜಿಲ್ಲೆಯ ಜನ ಅವರನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ’ ಎಂದರು.

‘ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕಂದಾಯ ಖಾತೆ ನಿರ್ವಹಣೆಯಲ್ಲಿ ವಿಫಲವಾಗಿದ್ದರಿಂದ ವಿ.ಶ್ರೀನಿವಾಸಪ್ರಸಾದ್ ಅವರನ್ನು ಕೈಬಿಡಲಾಯಿತು. ಮಲ್ಲಿಕಾರ್ಜುನ ಖರ್ಗೆ ಈಗ ಪಕ್ಷದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಸಿದ್ದರಾಮಯ್ಯ ಅವರಿಂದ ಯಾರಿಗೂ ಅನ್ಯಾಯವಾಗಿಲ್ಲ’ ಎಂದು ಹೇಳಿದರು.

‘ಇಷ್ಟಕ್ಕೂ ನಾವು ಯಾವುದೇ ಪಕ್ಷದವರಲ್ಲ. ಅವರ ಪರ ಪ್ರಚಾರಕ್ಕೆ ಬಂದಿಲ್ಲ, ಆದರೆ, ಜನರನ್ನು ಎಚ್ಚರಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಿಕ್ಕಂದಾನಿ, ಸಂಚಾಲಕ ಸುಂದರ್ ಕುಮಾರ್, ಜಿಲ್ಲಾ ಅಧ್ಯಕ್ಷ ಎಂ.ಹರಿಪ್ರಕಾಶ್, ಅಹಿಂದ ವರ್ಗದ ಸಂಚಾಲಕ ರಾಜಶೇಖರ್, ಕೆಎಸ್‌ಆರ್‌ಟಿಸಿ ಎಸ್‌ಸಿ ಎಸ್ಟಿ ನೌಕರರ ಪ್ರಧಾನ ಕಾರ್ಯದರ್ಶಿ ರೇವಣ್ಣ, ಚಿಕ್ಕಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT