ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಸಂರಕ್ಷಣೆ ಜಾಥಾ

ಕೋಲಾರದಲ್ಲಿ ಆರಂಭ; ಇಂದು ಬೆಂಗಳೂರಿಗೆ ಪಯಣ
Last Updated 11 ಜನವರಿ 2023, 6:18 IST
ಅಕ್ಷರ ಗಾತ್ರ

ಕೋಲಾರ: ಸಂವಿಧಾನದ ಆಶಯಗಳು ಸಂಪೂರ್ಣವಾಗಿ ಜಾರಿಯಾಗಬೇಕು, ಸಂವಿಧಾನ ವಿರೋಧಿಗಳನ್ನು ಅಧಿಕಾರದಿಂದ ಕೆಳಗಿಳಿಸಬೇಕು, ಕೋಮು ಸಾಮರಸ್ಯ ಕಾಪಾಡಬೇಕು, ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕೈಬಿಟ್ಟು ಹಳೆ ಶಿಕ್ಷಣ ಪದ್ಧತಿಯನ್ನೇ ಮುಂದುವರಿಸಬೇಕು, ರೈತ ವಿರೋಧಿ ಮೂರು ಕಾಯ್ದೆ ಹಿಂಪಡೆಯಬೇಕು… ಕೋಲಾರದಲ್ಲಿ ಆರಂಭವಾಗಿ ಬೆಂಗಳೂರಿನತ್ತ ಹೆಜ್ಜೆ ಇಟ್ಟಿರುವ ‘ಸಂವಿಧಾನ ಸಂರಕ್ಷಣಾ ಜಾಥಾ’ದಲ್ಲಿ ಮೊಳಗಿದ ಕೂಗಿದು.

ಜನಾಂದೋಲನಗಳ ಮಹಾಮೈತ್ರಿ, ಸಿಟಿಜನ್‌ ಫಾರ್‌ ಡೆಮಾಕ್ರಸಿ, ಜನತಂತ್ರ ಪ್ರಯೋಗ ಶಾಲೆ ಹಾಗೂ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ಸಹಕಾರದೊಂದಿಗೆ ಜಾಥಾ ಹಮ್ಮಿಕೊಂಡಿದ್ದು, ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ ತಲುಪಲಿದೆ.

ನಗರದ ಬಂಗಾರಪೇಟೆ ವೃತ್ತದಲ್ಲಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ, ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ಸಮತಾ ಸೈನಿಕ ದಳಸ ರಾಜ್ಯ ಅಧ್ಯಕ್ಷ ಬಿ.ಚನ್ನಕೃಷ್ಣಪ್ಪ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು. ಕಾಲೇಜು ವೃತ್ತದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದರು.

‘ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಗಂಭೀರ ಭೇದಭಾವ ಹಾಗೂ ತಾರತಮ್ಯವಿದೆ. ದುಡಿಯುವ ಜನರು ಅವರ ಶ್ರಮದ ಫಲ ಅನುಭವಿಸಲು, ಗೌರವಯುತ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

‘ಅಸ್ಪೃಶ್ಯತೆ ಇನ್ನೂ ತಾಂಡವವಾಡುತ್ತಿದ್ದು, ಸಂವಿಧಾನ ಆಶಯಗಳು ಸಂಪೂರ್ಣವಾಗಿ ಈಡೇರಿಲ್ಲ. ಸರ್ವರಿಗೂ ಶಿಕ್ಷಣ ಜಾರಿ ಮಾಡಬೇಕು, ಪಿಟಿಸಿಎಲ್‌ ಕಾಯ್ದೆಯ ಆಶಯ ಈಡೇರಿಸಬೇಕು, ಮಂಜೂರಾತಿದಾರರಿಗೇ ಭೂಮಿ ಸಿಗುವಂತೆ ನೋಡಿಕೊಳ್ಳಬೇಕು’ ಎಂದು ಚನ್ನಕೃಷ್ಣಪ್ಪ
ಆಗ್ರಹಿಸಿದರು.

ಕರ್ನಾಟಕ ಸಮತಾ ಸೈನಿಕ ದಳದ ಜಿಲ್ಲಾ ಅಧ್ಯಕ್ಷ ಎಸ್‌.ಸುಧಾಕರ್‌, ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್‌.ಎಂ.ಎನ್.ರಮೇಶ್‌, ಜಮಾತೆ ಇಸ್ಲಾಮಿ ಹಿಂದ್‌ ಜಿಲ್ಲಾ ಅಧ್ಯಕ್ಷ ಮುಬಾರಕ್‌ ಬಾಗ್‌ಬಾನ್‌, ರೈತ ಸಂಘದ ಮುಖಂಡರಾದ ಜಿ.ನಾರಾಯಣಸ್ವಾಮಿ, ಕಲ್ವಾಮಂಜಲಿ ರಾಮು ಶಿವಣ್ಣ, ಮಾದಿಗ ದಂಡೋರದ ವೇಣು, ಡಿಎಸ್‌ಎಸ್‌ ಮುಖಂಡ ಪೆಕ್ಸ್‌ ನಾರಾಯಣಸ್ವಾಮಿ, ಕರ್ನಾಟಕ ಜಾನಾಂದೋಲನ ಸಂಘಟನೆ ಅಧ್ಯಕ್ಷ ಮರಿಯಪ್ಪ, ಜಾಥಾ ಅಧ್ಯಕ್ಷ ಡಿಪಿಎಸ್‌ ರಾಜಕುಮಾರ್‌, ಉಪಾಧ್ಯಕ್ಷ ರಾಘವೇಂದ್ರ ಪ್ರಸಾದ್‌, ಡಿಪಿಎಸ್‌ ಮುನಿರಾಜು, ಡಿಪಿಎಸ್‌ ಉದಯಕುಮಾರ್‌, ದಮನಿತ ಸಂಘರ್ಷ ಸಮಿತಿಯ ಮೇಡಿಯಾಳ ಡಾ.ಮುನಿಆಂಜಿನಪ್ಪ ಪಾಲ್ಗೊಂಡಿದ್ದರು.

ನಂದಿನಿ ವಿಲೀನ ಬೇಡ: ರೈತ ವಿರೋಧಿ ಕಾಯ್ದೆಗಳನ್ನು ಕೂಡಲೇ ವಾಪಸ್ ಪಡೆಯಬೇಕು. ‘ನಂದಿನಿ’ಯನ್ನು’ ಗುಜರಾತಿನ ‘ಅಮೂಲ್’ ಜೊತೆ ವಿಲೀನ ಮಾಡಬಾರದು. ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು. ಕೋಲಾರದ ಎಪಿಎಂಸಿಗೆ ಕೂಡಲೇ ಜಾಗ ಮಂಜೂರು ಮಾಡಬೇಕು’ ಎಂದು ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯುವ ಘಟಕ ಅಧ್ಯಕ್ಷ ಕಲ್ವಾಮಂಜಲಿ ರಾಮು ಶಿವಣ್ಣ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT