ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರು ಕಾನೂನು ಹೋರಾಟ ನಡೆಸಿ:ಕೋಲಾರ ಜಿಲ್ಲಾಧಿಕಾರಿ ಮಂಜುನಾಥ್‌ ಕಿವಿಮಾತು

ರಾಷ್ಟ್ರೀಯ ಗ್ರಾಹಕರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಕಿವಿಮಾತು
Last Updated 24 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಕೋಲಾರ: ‘ಗ್ರಾಹಕರ ಹಿತರಕ್ಷಣೆ ಉದ್ದೇಶಕ್ಕೆ ನೀಡಿರುವ ಹಕ್ಕುಗಳನ್ನು ಅರಿತು ಸರಕು ಅಥವಾ ಸೇವೆಯಲ್ಲಿ ಅನ್ಯಾಯವಾದರೆ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಯ ಮೊರೆ ಹೋಗಿ ನ್ಯಾಯ ಪಡೆಯಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾನೂನು ಮಾಪನಶಾಸ್ತ್ರ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ಜೀವನದಲ್ಲಿ ನಿತ್ಯ ಬಳಕೆಗಾಗಿ ಅನೇಕ ಸಾಮಗ್ರಿ ಕೊಳ್ಳುವ ನಾವೆಲ್ಲರೂ ಗ್ರಾಹಕರೇ. ಗ್ರಾಹಕರ ರಕ್ಷಣೆಗಾಗಿ ಸರ್ಕಾರ ಕಾನೂನು ರೂಪಿಸಿ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ನೀಡಿದೆ. ಗ್ರಾಹಕರಿಗೆ ಸುರಕ್ಷತೆ, ವಸ್ತುವಿನ ಬಗ್ಗೆ ಮಾಹಿತಿ, ಆಯ್ಕೆ ಸ್ವಾತಂತ್ರ್ಯ ನೀಡಲಾಗಿದೆ. ಸರಕು ಮತ್ತು ಸೇವೆ ಸೂಕ್ತ ರೀತಿಯಲ್ಲಿ ನೀಡದೆ ಮೋಸ ಮಾಡಿದರೆ ಅದರ ವಿರುದ್ಧ ಬಳಕೆದಾರರು ನ್ಯಾಯಕ್ಕಾಗಿ ಕಾನೂನಾತ್ಮಕ ಹೋರಾಟ ನಡೆಸಬೇಕು’ ಎಂದರು.

‘ಜಾಗತಿಕವಾಗಿ ಬದಲಾದ ವ್ಯವಸ್ಥೆಯಲ್ಲಿ ಆನ್‌ಲೈನ್‌ ಖರೀದಿ ಹೆಚ್ಚುತ್ತಿದೆ. ಗ್ರಾಹಕರು ನೀಡುವ ಹಣಕ್ಕೆ ಸರಿಯಾದ ರೀತಿಯ ಮತ್ತು ಗುಣಮಟ್ಟದ ಸರಕು ನೀಡಬೇಕು. ಖರೀದಿಸಿದ ವಸ್ತುವಿನ ಪ್ರಮಾಣ, ಗುಣಮಟ್ಟದಲ್ಲಿ ವಂಚನೆಯಾದರೆ ಗ್ರಾಹಕರ ರಕ್ಷಣಾ ಕಾಯ್ದೆಯಡಿ ಪ್ರಶ್ನಿಸುವ ಅಧಿಕಾರ ನೀಡಲಾಗಿದೆ. ಸಾರ್ವಜನಿಕರು ಗ್ರಾಹಕರ ವೇದಿಕೆ ಮೆಟ್ಟಿಲೇರಿ ಪರಿಹಾರ ಪಡೆಯುವ ಅವಕಾಶವಿದೆ’ ಎಂದು ವಿವರಿಸಿದರು.

‘ಗ್ರಾಹಕರು ಖರೀದಿಸುವ ವಸ್ತುಗಳ ಸಂಪೂರ್ಣ ವಿವರ ಪಡೆಯುವ ಹಕ್ಕು ಹೊಂದಿರುತ್ತಾರೆ. ವಸ್ತುಗಳಿಗೆ ಕಲಬೆರಕೆ ಮಾಡಿ, ಮೋಸ ಮಾಡಿ ಬದುಕುವವರು ಇದ್ದಾರೆ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು. ತಂತ್ರಜ್ಞಾನ ಬೆಳೆದಂತೆ ಆನ್‌ಲೈನ್‌ ವ್ಯವಹಾರಕ್ಕೆ ಉತ್ತೇಜನ ಹೆಚ್ಚುತ್ತಿದೆ. ಆದರೆ, ಆನ್‌ಲೈನ್‌ ವ್ಯವಹಾರ ಮಾಡುವಾಗ ಮೈಯೆಲ್ಲಾ ಕಣ್ಣಾಗಿರಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಸಲಹೆ ನೀಡಿದರು.

ದೂರು ಕೊಡುತ್ತಿಲ್ಲ: ‘ದೇಶದಲ್ಲಿ 1986ರಲ್ಲಿ ಗ್ರಾಹಕರ ರಕ್ಷಣಾ ಕಾಯ್ದೆ ಜಾರಿಗೆ ಬಂದಿತು. ಮಾಹಿತಿ ಕೊರತೆಯಿಂದಾಗಿ ಗ್ರಾಹಕರು ತಮಗಾಗುವ ವಂಚನೆ ವಿರುದ್ಧ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಗೆ ದೂರು ಕೊಡುತ್ತಿಲ್ಲ’ ಎಂದು ಹೈಕೋರ್ಟ್ ವಕೀಲೆ ಕುಸುಮಾ ಬೇಸರ ವ್ಯಕ್ತಪಡಿಸಿದರು.

‘ಗ್ರಾಹಕರ ರಕ್ಷಣಾ ಕಾಯ್ದೆ 1986ರಕ್ಕೆ ಮತ್ತಷ್ಟು ಬಲ ತುಂಬಿ ಗ್ರಾಹಕರ ರಕ್ಷಣಾ ಕಾಯ್ದೆ–2019 ರೂಪಿಸಲಾಗಿದೆ. ಈ ಕಾಯ್ದೆಗೆ ಆ.9ರಂದು ರಾಷ್ಟ್ರಪತಿಯ ಅಂಕಿತ ಬಿದ್ದಿದೆ. ಹೊಸ ಕಾಯ್ದೆ ಅನ್ವಯ ಜಿಲ್ಲಾ ಗ್ರಾಹಕರ ವೇದಿಕೆಗೆ ಈ ಹಿಂದೆ ನಿಗದಿಪಡಿಸಲಾಗಿದ್ದ ₹ 20 ಲಕ್ಷ ಮೌಲ್ಯದ ವಸ್ತುಗಳ ನಷ್ಟದ ಪರಿಮಿತಿಯನ್ನು ₹ 1 ಕೋಟಿಗೆ ಹೆಚ್ಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ₹ 1 ಕೋಟಿಯಿಂದ ₹ 10 ಕೋಟಿವರೆಗೆ ಹಾಗೂ ₹ 10 ಕೋಟಿಗಿಂತ ಹೆಚ್ಚಿನ ವಂಚನೆ ಪ್ರಕರಣಗಳ ಸಂಬಂಧ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ಧಾವೆ ಹೂಡಬಹುದು’ ಎಂದು ತಿಳಿಸಿದರು.

ಬಿಲ್‌ ಪಡೆಯಿರಿ: ‘ಯಾವುದೇ ವಸ್ತುವಿನಿಂದ ಆದ ಹಾನಿ, ಗಾಯ, ಮಾನಸಿಕ ವೇದನೆಗೂ ಪರಿಹಾರ ನೀಡಲು ನೂತನ ಕಾಯ್ದೆಯಲ್ಲಿ ಅವಕಾಶವಿದೆ. ಅಲ್ಪ ಮೊತ್ತ ಅಥವಾ ಹಣ ಉಳಿತಾಯದ ಆಸೆಗೆ ಬಿಲ್ ಇಲ್ಲದೆ ವಸ್ತುಗಳ ಖರೀದಿ ಬೇಡ. ಗ್ರಾಹಕರು ಬಿಲ್‌ ಕೇಳಿ ಪಡೆಯಬೇಕು. ವ್ಯಾಜ್ಯಗಳನ್ನು ಮಧ್ಯಸ್ಥಿಕೆ ಕೇಂದ್ರದ ಮೂಲಕ ಶೀಘ್ರವಾಗಿ ಪರಿಹರಿಸಿಕೊಳ್ಳಬಹುದು’ ಎಂದು ಹೇಳಿದರು.

ವಕೀಲ ಸುರೇಂದ್ರಕುಮಾರ್, ಬೆಂಗಳೂರಿನ ಕ್ರಿಯೇಟಿವ್ ಸಂಸ್ಥೆ ಅಧ್ಯಕ್ಷ ವೈ ಮುರಳೀಧರನ್‌, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಕೆ.ಎನ್.ಲಕ್ಷ್ಮೀನಾರಾಯಣ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಉಪ ನಿರ್ದೇಶಕ ನಾಗರಾಜ್ ಕೆಳಗಿನಮನಿ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷೆ ಕೆ.ಎಸ್.ನಾಗಮಣಿ, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಗೋಪಾಲಕೃಷ್ಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT