ಗುರುವಾರ , ಅಕ್ಟೋಬರ್ 21, 2021
22 °C

ಜಿ.ಪಂ–ತಾ.ಪಂ ಚುನಾವಣೆಗೆ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ರಾಜ್ಯ ಹಾಗೂ ಜಿಲ್ಲೆಯಲ್ಲಿ ತಳ ಮಟ್ಟದಿಂದ ಪಕ್ಷ ಸಂಘಟಿಸಿ ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ’ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಸಹ ಸಂಚಾಲಕ ವಿಜಯ್‌ಶರ್ಮಾ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಷ್ಟ್ರ ರಾಜಕಾರಣದಲ್ಲಿ ವೇಗವಾಗಿ ಬೆಳೆಯುತ್ತಿರುವ ಆಮ್‌ ಆದ್ಮಿ ಪಕ್ಷವು ರಾಜ್ಯದಲ್ಲೂ ತನ್ನ ಸಂಘಟನೆ ಚುರುಕುಗೊಳಿಸಲು ಪ್ರಯತ್ನ ಮಾಡುತ್ತಿದೆ. ಪಕ್ಷ ಸಂಘಟನೆ ಮತ್ತು ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಪಾತ್ರ ಕುರಿತು ಚರ್ಚಿಸಲು ಪಕ್ಷದ ನಿಯೋಗವು ಜಿಲ್ಲಾ ಪ್ರವಾಸ ಕೈಗೊಂಡಿದೆ’ ಎಂದರು.

‘ದೆಹಲಿ ಸರ್ಕಾರದ ಆಡಳಿತ ಮಾದರಿಯನ್ನು ಇತರೆ ರಾಜಕೀಯ ಪಕ್ಷಗಳು ಅನುಸರಿಸುತ್ತಿವೆ. ದೆಹಲಿ ಆಡಳಿತ ಮಾದರಿಯನ್ನು ಜನರು ಸಹ ಮೆಚ್ಚಿಕೊಂಡಿದ್ದಾರೆ. ಜನರು ಭ್ರಷ್ಟ ರಾಜಕೀಯ ಪಕ್ಷಗಳಿಂದ ಬೇಸತ್ತಿದ್ದು, ಆಮ್‌ ಆದ್ಮಿ ಪಕ್ಷದತ್ತ ಮುಖ ಮಾಡುತ್ತಿದ್ದಾರೆ. ಕರ್ನಾಟಕದ ಅಭಿವೃದ್ಧಿ ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದು, ರಾಜ್ಯದ ಇತರೆಡೆ ಅಭಿವೃದ್ಧಿ ಶೂನ್ಯ’ ಎಂದು ಟೀಕಿಸಿದರು.

‘ದೇಸಿ ಮತ್ತು ಅಂತರರಾಷ್ಟ್ರೀಯ ಕಂಪನಿಗಳು ರಾಜ್ಯದ ಇತರೆ ನಗರಗಳಲ್ಲೂ ತಮ್ಮ ನೆಲೆ ವಿಸ್ತರಿಸಲು ಉತ್ಸುಕವಾಗಿವೆ. ಅಭಿವೃದ್ಧಿ ದೃಷ್ಟಿಯಿಂದ ಪ್ರತಿ ಗ್ರಾಮದಲ್ಲೂ ಬದಲಾವಣೆ ತರಲು ಜಿ.ಪಂ ಮತ್ತು ತಾ.ಪಂ ಚುನಾವಣೆಯು ಮಹತ್ವದ್ದು’ ಎಂದು ಅಭಿಪ್ರಾಯಪಟ್ಟರು.

‘ಜನರ ಆಶಯದಂತೆ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ಸಮಿತಿಗಳು ತಳಮಟ್ಟದಿಂದ ಪಕ್ಷ ಸಂಘಟಿಸಲು ನಿರ್ಧರಿಸಿವೆ. ಜಿಲ್ಲೆಯಲ್ಲಿ ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಸಂಘಟಿಸುತ್ತೇವೆ. ಕೆಲವೇ ದಿನಗಳಲ್ಲಿ ಸಮರ್ಥ ಕಾರ್ಯಕರ್ತರನ್ನು ಜಿಲ್ಲಾ ಮತ್ತು ತಾಲ್ಲೂಕು ಘಟಕಗಳಿಗೆ ಪದಾಧಿಕಾರಿಗಳಾಗಿ ನೇಮಿಸಿ ಸಂಘಟನೆ ಚುರುಕುಗೊಳಿಸುತ್ತೇವೆ’ ಎಂದು ಪಕ್ಷದ ಜಿಲ್ಲಾ ಘಟಕದ ಸಂಚಾಲಕ ಸುರೇಶ್ ಬಾಲಕೃಷ್ಣ ವಿವರಿಸಿದರು.

ಪಕ್ಷದ ರಾಜ್ಯ ಘಟಕದ ಜಂಟಿ ಕಾರ್ಯದರ್ಶಿ ದರ್ಶನ್ ಶೈನ್, ಸಂಘಟನಾ ಕಾರ್ಯದರ್ಶಿ ವಿ.ಗೋಪಾಲ್, ಜಿಲ್ಲಾ ವೀಕ್ಷಕ ರವಿಶಂಕರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.