ಬುಧವಾರ, ನವೆಂಬರ್ 13, 2019
18 °C

ಕುಲ ಕಸುಬು ಮುಂದುವರಿಸಿ: ಜಿಲ್ಲಾಧಿಕಾರಿ ಜೆ.ಮಂಜುನಾಥ್ ಕಿವಿಮಾತು

Published:
Updated:
Prajavani

ಕೋಲಾರ: ‘ವಿಶ್ವಕರ್ಮ ಸಮುದಾಯದವರು ಕುಲ ಕಸುಬು ಮುಂದುವರಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಕಿವಿಮಾತು ಹೇಳಿದರು.

ಜಿಲ್ಲಾಡಳಿತವು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿ, ‘ವಿಶ್ವಕರ್ಮ ಸಮುದಾಯದವರ ಕುಲ ಕಸುಬು ನಶಿಸುತ್ತಿದೆ. ಈ ಬಗ್ಗೆ ಸಮುದಾಯ ಜಾಗೃತಗೊಳ್ಳಬೇಕು’ ಎಂದರು.

‘ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸದಿದ್ದರೆ ಅವರು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ಮಕ್ಕಳನ್ನು ವಿದ್ಯಾವಂತರಾಗಿ ಮಾಡಿ. ಮಕ್ಕಳು ಉದ್ಯೋಗಸ್ಥರಾದರೆ ಜೀವನ ರೂಪಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ. ಹೆಣ್ಣು ಮಕ್ಕಳಿಗೆ ಮದುವೆ ಮಾಡಿದರೆ ಜವಾಬ್ದಾರಿ ಮುಗಿಯಿತೆಂಬ ಭಾವನೆಯಿಂದ ಹೊರ ಬನ್ನಿ’ ಎಂದು ಸಲಹೆ ನೀಡಿದರು.

‘ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಸಾಕಷ್ಟು ಕುಟುಂಬಗಳು ಬೀದಿ ಪಾಲಾಗಿವೆ. ಈ ಹಿನ್ನೆಲೆಯಲ್ಲಿ ಸರಳವಾಗಿ ಜಯಂತಿ ಆಚರಿಸಲು ವಿಶ್ವಕರ್ಮ ಸಮುದಾಯವರು ತೀರ್ಮಾನ ತೆಗೆದುಕೊಂಡಿರುವುದು ಸ್ವಾಗತಾರ್ಹ. ಸರ್ಕಾರ ಜಯಂತಿಗೆ ಮೀಸಲಿಟ್ಟಿರುವ ಹಣವನ್ನು ನೆರೆ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಬಳಸಲಾಗುತ್ತದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ವಿಶ್ವಕರ್ಮ ಸಮುದಾಯದ ಜನಸಂಖ್ಯೆ ಸುಮಾರು 60 ಸಾವಿರವಿದೆ. ಸಮುದಾಯದವರು ಪಂಚ ಕಸುಬು ಮಾಡುವ ಮೂಲಕ ಸಮಾಜದ ಅವಿಭಾಜ್ಯ ಅಂಗವಾಗಿ ಬೆಳೆಯುತ್ತಿದ್ದಾರೆ. ಸಣ್ಣ ಸಮುದಾಯ ಈಗ ಬೆಳಕಿಗೆ ಬರುತ್ತಿದೆ’ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವಿಷ್ಣು ಹೇಳಿದರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದ ಗೌರವಾಧ್ಯಕ್ಷ ಪ್ರಭಾಕರಾಚಾರ್, ಖಜಾಂಚಿ ಡಿ.ಹರಿಪ್ರಕಾಶ್, ಕಾರ್ಯದರ್ಶಿ ಸೋಮಶೇಖರಾಚಾರಿ, ಸಂಚಾಲಕ ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)