ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯ ಸಹಭಾಗಿತ್ವದಲ್ಲಿ ಮಿದುಳು ಜ್ವರ ನಿಯಂತ್ರಿಸಿ: ಡಾ.ಎಂ.ಕಮಲಾ

Last Updated 28 ಸೆಪ್ಟೆಂಬರ್ 2020, 14:59 IST
ಅಕ್ಷರ ಗಾತ್ರ

ಕೋಲಾರ: ‘ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮಿದುಳು ಜ್ವರಕ್ಕೆ ತುತ್ತಾಗುತ್ತಿದ್ದು, ಸಮುದಾಯದ ಸಹಭಾಗಿತ್ವದೊಂದಿಗೆ ಈ ಕಾಯಿಲೆ ನಿಯಂತ್ರಿಸಬಹುದು’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಂ.ಕಮಲಾ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಿದುಳು ಜ್ವರ ನಿಯಂತ್ರಣ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಜಿಲ್ಲೆಯಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಮಿದುಳು ಜ್ವರ ತಡೆ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತದೆ. ಮಿದುಳು ಜ್ವರವು ಸಾಂಕ್ರಾಮಿಕ ರೋಗವಾಗಿದ್ದು, ವೈರಾಣುಗಳಿಂದ ಈ ಕಾಯಿಲೆ ಬರುತ್ತದೆ. ಕೆಲವರಿಗೆ ಕಾಯಿಲೆಯಿಂದ ನರ ದೌರ್ಬಲ್ಯ ಮತ್ತು ಬುದ್ಧಿಮಾಂದ್ಯತೆ ಉಂಟಾಗುತ್ತದೆ’ ಎಂದು ವಿವರಿಸಿದರು.

‘ಮಿದುಳು ಜ್ವರದ ವೈರಾಣುವಿರುವ ಹಂದಿ, ಬೆಳ್ಳಕ್ಕಿಗಳನ್ನು (ಕೊಕ್ಕರೆ) ಕಚ್ಚಿದ ಕ್ಯೂಲೆಕ್ಸ್‌ ಜಾತಿಯ ಸೊಳ್ಳೆಗಳು ಮನುಷ್ಯರಿಗೆ ಕಚ್ಚಿದರೆ ಈ ರೋಗ ಬರುತ್ತದೆ. ಸೆಪ್ಟೆಂಬರ್‌ ತಿಂಗಳಿನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ’ ಎಂದು ಮಾಹಿತಿ ನೀಡಿದರು.

‘ಆರಂಭದಲ್ಲಿ ವಿಪರೀತ ಜ್ವರ, ತಲೆ ನೋವು, ಕತ್ತಿನ ಬಿಗಿತ, ತಲೆ ಸುತ್ತುವಿಕೆ, ಚಳಿ ಮತ್ತು ಎಚ್ಚರ ತಪ್ಪುವುದು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ಈ ಲಕ್ಷಣಗಳು ಕಂಡುಬಂದಲ್ಲಿ ತಡ ಮಾಡದೆ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಕಾಯಿಲೆಯ ಆರಂಭದಲ್ಲೇ ಚಿಕಿತ್ಸೆ ಪಡೆದರೆ ಬುದ್ಧಮಾಂಧ್ಯತೆ ಮತ್ತು ಸಾವು ತಪ್ಪಿಸಬಹುದು’ ಎಂದು ಸಲಹೆ ನೀಡಿದರು.

ಲಸಿಕೆ ಹಾಕಿಸಿ: ‘ಮಕ್ಕಳಿಗೆ 2 ಬಾರಿ ಮಿದುಳು ಜ್ವರ ನಿರೋಧಕ ಲಸಿಕೆ (ಜೆ.ಇ) ಹಾಕಿಸಬೇಕು. ಈ ರೋಗ ಕಂಡುಬರುವ ಸ್ಥಳಗಳಲ್ಲಿ ಹೊರಾಂಗಣ ಕೀಟನಾಶಕ ಧೂಮೀಕರಣ ಮಾಡಬೇಕು. ಹಂದಿ ಗೂಡುಗಳಿಗೆ ಕೀಟನಾಶಕ ಸಿಂಪಡಣೆ ಮತ್ತು ಸೊಳ್ಳೆ ನಿರೋಧಕ ಜಾಲರಿ ಅಳವಡಿಸಬೇಕು. ಮನೆಗಳಲ್ಲಿ ತಪ್ಪದೆ ಸೊಳ್ಳೆ ಪರದೆ ಮತ್ತು ಸೊಳ್ಳೆ ನಿರೋಧಕ ಉಪಯೋಗಿಸಬೇಕು. ಸಂಜೆ ವೇಳೆ ಮೈತುಂಬಾ ಬಟ್ಟೆ ಧರಿಸಬೇಕು’ ಎಂದರು.

‘ನೀರು ನಿಂತ ಸ್ಥಳಗಳಲ್ಲಿ ಲಾರ್ವಾ ಮೀನುಗಳನ್ನು ಬಿಡಬೇಕು ಮತ್ತು ಬೇವಿನ ಮಿಶ್ರಣದ ಗೊಬ್ಬರಗಳನ್ನು ಗದ್ದೆಗಳಲ್ಲಿ ಉಪಯೋಗಿಸಬೇಕು. ಮುನ್ನೆಚ್ಚರಿಕೆ ಕ್ರಮ ಅನುಸರಿಸಿದರೆ ಮಿದುಳು ಜ್ವರ ತಡೆಗಟ್ಟಬಹುದು’ ಎಂದು ತಿಳಿಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ರೇಣುಕಾದೇವಿ, ಅನಿತಾ, ಆರೋಗ್ಯ ಇಲಾಖೆ ಅಧಿಕಾರಿಗಳು, ಕೀಟ ಶಾಸ್ತ್ರಜ್ಞರು, ಗ್ರಾಮ ಪಂಚಾಯಿತಿ ಸದಸ್ಯರು, ಶಿಕ್ಷಕರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT