ಗುರುವಾರ , ಜೂನ್ 24, 2021
24 °C
ಕಾರ್ಯಪಡೆ ಸದಸ್ಯರಿಗೆ ತಾ.ಪಂ ಅಧ್ಯಕ್ಷ ಆಂಜಿನಪ್ಪ ಸಲಹೆ

ಗ್ರಾಮೀಣ ಭಾಗದಲ್ಲಿ ಸೋಂಕು ನಿಯಂತ್ರಿಸಿ: ಆಂಜಿನಪ್ಪ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕಾರ್ಯಪಡೆ ಸದಸ್ಯರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದರೆ ಹಳ್ಳಿಗಳಲ್ಲಿ ಕೊರೊನಾ ಸೋಂಕು ನಿಯಂತ್ರಣ ಸಾಧ್ಯ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಅಭಿಪ್ರಾಯಪಟ್ಟರು.

ಕೋವಿಡ್ ನಿಯಂತ್ರಣ ಸಂಬಂಧ ತಾಲ್ಲೂಕಿನ ದೊಡ್ಡಹಸಾಳ ಗ್ರಾ.ಪಂ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಪಡೆ ಸಮಿತಿ ಸಭೆಯಲ್ಲಿ ಮಾತನಾಡಿ, ‘ಕಾರ್ಯಪಡೆ ಸದಸ್ಯರು ತಮ್ಮ ವ್ಯಾಪ್ತಿಯ ಪ್ರತಿ ಮನೆಗೂ ಭೇಟಿ ಕೊಟ್ಟು ಕೊರೊನಾ ಸೋಂಕಿನ ಲಕ್ಷಣವಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಆರೋಗ್ಯ ತಪಾಸಣೆ ಮಾಡಿಸಬೇಕು. ಸೋಂಕು ದೃಢಪಟ್ಟರೆ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು’ ಎಂದರು.

‘ಗ್ರಾ.ಪಂ ಮಟ್ಟದಲ್ಲಿ ಕೋವಿಡ್‌ ಮಾರ್ಗಸೂಚಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಹೊರ ಜಿಲ್ಲೆಯಿಂದ ಗ್ರಾಮಗಳಿಗೆ ಬಂದವರನ್ನು ಗುರುತಿಸಿ ಅವರ ಆರೋಗ್ಯದ ಮೇಲೆ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ನಿಗಾ ವಹಿಸಬೇಕು. ಪ್ರತಿ ಗ್ರಾಮದಲ್ಲಿ ಸ್ವಯಂ ಸೇವಕರನ್ನು ನೇಮಿಸಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಹಾಗೂ ನಿರ್ಗತಿಕರಿಗೆ ದಾನಿಗಳ ಮೂಲಕ ಊಟದ ವ್ಯವಸ್ಥೆ ಮಾಡಬೇಕು’ ಎಂದು ದೊಡ್ಡಹಸಾಳ ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಹೇಳಿದರು.

‘ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಗ್ರಾ.ಪಂ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಜನರು ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಪಾಲನೆ ಮಾಡಬೇಕು’ ಎಂದು ತಾ.ಪಂ ಸದಸ್ಯೆ ವಿ.ಸವಿತಾ ಸೂಚಿಸಿದರು.

ಅಡ್ಡ ಪರಿಣಾಮವಿಲ್ಲ: ‘ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ನೆಗಡಿ, ಕೆಮ್ಮು, ಜ್ವರದ ಲಕ್ಷಣ ಕಂಡುಬಂದರೆ ತಕ್ಷಣ ಪರೀಕ್ಷೆಗೆ ಒಳಗಾಗಿ ಚಿಕಿತ್ಸೆ ಪಡೆಯಬೇಕು. ಜನರು ತಪ್ಪದೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ಪಡೆಯುವುದರಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ’ ಎಂದು ದೊಡ್ಡಹಸಾಳ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ.ಹರ್ಷಿತಾ ಸಲಹೆ ನೀಡಿದರು.

ಕಾರ್ಯಪಡೆ ಸದಸ್ಯರಿಗೆ ಕೋವಿಡ್ ಕಿಟ್ ವಿತರಿಸಲಾಯಿತು. ದೊಡ್ಡಹಸಾಳ ಗ್ರಾ.ಪಂ ಉಪಾಧ್ಯಕ್ಷ ಕೆ.ನಾರಾಯಣಸ್ವಾಮಿ, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂಗಲರಾಯಗೌಡ, ಕಾರ್ಯದರ್ಶಿ ನಾರಾಯಣಸ್ವಾಮಿ ಪಾಲ್ಗೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು