ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಸೋಂಕು ಗಣನೀಯ ಏರಿಕೆ

Last Updated 20 ಏಪ್ರಿಲ್ 2021, 14:39 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಮಂಗಳವಾರ ಪತ್ತೆಯಾದ ಕೊರೊನಾ ಸೋಂಕಿತರ ಸಂಖ್ಯೆ ದ್ವಿಶತಕದ ಗಡಿ ದಾಟಿದ್ದು, ಸೋಂಕಿನ ಓಟಕ್ಕೆ ಆರೋಗ್ಯ ಇಲಾಖೆ ಬೆಚ್ಚಿಬಿದ್ದಿದೆ.

ದಿನದಿಂದ ದಿನಕ್ಕೆ ಕೋವಿಡ್‌ ಎರಡನೇ ಅಲೆಯ ಆರ್ಭಟ ಜೋರಾಗುತ್ತಿದ್ದು, ಜಿಲ್ಲೆಯ ಜನರು ಸೋಂಕಿನ ರುದ್ರನರ್ತನಕ್ಕೆ ಆತಂಕಗೊಂಡಿದ್ದಾರೆ. ಹೊಸದಾಗಿ 272 ಮಂದಿಗೆ ಸೋಂಕು ಹರಡಿರುವುದು ಖಚಿತವಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ ಸಾವಿರದ ಆಸುಪಾಸಿಗೆ ಬಂದು ನಿಂತಿದೆ.

ಜಿಲ್ಲೆಯಲ್ಲಿ ಒಂದೇ ದಿನ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿರುವುದು ದಾಖಲೆಯಾಗಿದ್ದು, ಜಿಲ್ಲೆಯ ಪಾಲಿಗೆ ಮಂಗಳವಾರವು ಅಮಂಗಳವಾಗಿದೆ. ಸೋಮವಾರ (ಏ.19) 701 ಇದ್ದ ಸಕ್ರಿಯ ಸೋಂಕಿತರ ಸಂಖ್ಯೆ ಏಕಾಏಕಿ 868ಕ್ಕೆ ಜಿಗಿದಿದೆ.

ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು 125 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಉಳಿದಂತೆ ಮಾಲೂರು ತಾಲ್ಲೂಕಿನ 69 ಮಂದಿಗೆ, ಬಂಗಾರಪೇಟೆ ತಾಲ್ಲೂಕಿನ 29 ಮಂದಿಗೆ, ಕೆಜಿಎಫ್‌ ತಾಲ್ಲೂಕಿನ 15 ಮಂದಿಗೆ, ಮುಳಬಾಗಿಲು ತಾಲ್ಲೂಕಿನ 23 ಮಂದಿಗೆ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ 11 ಮಂದಿಗೆ ಸೋಂಕು ತಗುಲಿದೆ.

ಈ ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ. 4ಕ್ಕಿಂತ ಹೆಚ್ಚು ಸೋಂಕಿತರಿರುವ ಗ್ರಾಮ ಹಾಗೂ ಬಡಾವಣೆಗಳನ್ನು ಆರೋಗ್ಯ ಇಲಾಖೆಯು ಸೀಲ್‌ಡೌನ್‌ ಮಾಡಿದೆ.

ಕೊಂಚ ಏರಿಕೆ: ಕಳೆದ ನಾಲ್ಕೈದು ದಿನಗಳಿಗೆ ಹೋಲಿಸಿದರೆ ಗುಣಮುಖವಾಗುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದೆ. ಜಿಲ್ಲೆಯ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರ ಪೈಕಿ 105 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮಂಗಳವಾರ ಮನೆಗೆ ಮರಳಿದರು.

ಕೋಲಾರ ತಾಲ್ಲೂಕಿನ 45 ಮಂದಿ, ಮಾಲೂರು ತಾಲ್ಲೂಕಿನ 14, ಬಂಗಾರಪೇಟೆ ತಾಲ್ಲೂಕಿನ 19, ಕೆಜಿಎಫ್‌ ತಾಲ್ಲೂಕಿನ 18, ಮುಳಬಾಗಿಲು ತಾಲ್ಲೂಕಿನ 5 ಹಾಗೂ ಶ್ರೀನಿವಾಸಪುರ ತಾಲ್ಲೂಕಿನ 4 ಮಂದಿಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT