ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕು: ಚಿಕಿತ್ಸೆ ನಿರಾಕರಿಸಬೇಡಿ: ರಮೇಶ್‌ಕುಮಾರ್

ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಶಾಸಕ ಸಲಹೆ
Last Updated 1 ಏಪ್ರಿಲ್ 2020, 14:17 IST
ಅಕ್ಷರ ಗಾತ್ರ

ಕೋಲಾರ: ‘ಜನರ ಬಳಿ ಹಣ ಇಲ್ಲವೆಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿಗೆ ಚಿಕಿತ್ಸೆ ನಿರಾಕರಿಸಬಾರದು. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ನಿರಂತರ ಕಣ್ಗಾವಲು ಇಡಬೇಕು’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಸಲಹೆ ನೀಡಿದರು.

ಕೊರೊನಾ ಸೋಂಕು ತಡೆಗೆ ಜಿಲ್ಲೆಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಚಿಕಿತ್ಸೆ ಸಂಬಂಧ ಇಲ್ಲಿ ಬುಧವಾರ ನಡೆದ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆ ಸೇರಿದಂತೆ ರಾಜ್ಯದೆಲ್ಲೆಡೆ ಕೊರೊನಾ ಸೋಂಕಿನ ಭೀತಿ ಹೆಚ್ಚಿದೆ. ಹಣ ಇಲ್ಲವೆಂಬ ಕಾರಣಕ್ಕೆ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳು ಯಾರಿಗೂ ಚಿಕಿತ್ಸೆ ನಿರಾಕರಿಸಬಾರದು’ ಎಂದು ಸೂಚಿಸಿದರು.

‘ಕೊರೊನಾ ಸೋಂಕುಪೀಡಿತರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಈ ಸಂಗತಿಯನ್ನು ಜಿಲ್ಲಾಡಳಿತವು ಖಾಸಗಿ ಆಸ್ಪತ್ರೆಯವರಿಗೆ ಮನವರಿಕೆ ಮಾಡಿಕೊಡಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ಈ ಸಂದರ್ಭವನ್ನು ಯುದ್ಧದ ರೀತಿ ಪರಿಗಣಿಸಿ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು. ಇಂತಹ ಸಂದಿಗ್ಧ ಸ್ಥಿತಿಯಲ್ಲೂ ಆರೋಗ್ಯ ಇಲಾಖೆ ಸಿಬ್ಬಂದಿ ತಪ್ಪು ಮಾಡಿದರೆ ದೇವರು ನಿಮ್ಮನ್ನು ಹುಟ್ಟಿಸಿ ತಪ್ಪು ಮಾಡಿದಂತೆ’ ಎಂದರು.

‘ಕೊರೊನಾ ಸೋಂಕಿನ ಆತಂಕ ಹೆಚ್ಚಿರುವುದರಿಂದ ಜಿಲ್ಲೆಗೆ ಅಗತ್ಯವಿರುವ ಎಲ್ಲಾ ಔಷಧ, ಮಾತ್ರೆ ಹಾಗೂ ವೈದ್ಯಕೀಯ ಸಲಕರಣೆಗಳನ್ನು ಶೇಖರಣೆ ಮಾಡಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ದಿಗ್ಬಂಧನ ಜಾರಿಯಲ್ಲಿದ್ದರೂ ಕೆಲವರು ಅನಗತ್ಯವಾಗಿ ಮನೆಯಿಂದ ಹೊರಬಂದು ಬೀದಿ ಸುತ್ತುತ್ತಿದ್ದಾರೆ. ಇವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ. ಜನಪ್ರತಿನಿಧಿಗಳು ಇದಕ್ಕೆ ಅಡ್ಡಿಪಡಿಸುವುದಿಲ್ಲ. ದಿಗ್ಬಂಧನದ ಆದೇಶ ಉಲ್ಲಂಘಿಸುವವರಿಗೆ ಲಾಠಿ ಏಟು ಕೊಟ್ಟು ಮನೆಯಿಂದ ಹೊರಗೆ ಬರದಂತೆ ಮಾಡಿ’ ಎಂದು ಜಿಲ್ಲಾ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

2ನೇ ಹಂತದಲ್ಲಿದೆ: ‘ರಾಜ್ಯದಲ್ಲಿ ಕೊರೊನಾ ಸೋಂಕು 2ನೇ ಹಂತದಲ್ಲಿದೆ. ಸೋಂಕು 3ನೇ ಹಂತಕ್ಕೆ ಹೋಗದಂತೆ ಪ್ರತಿಯೊಬ್ಬರು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಜನರು ಮನೆಗಳಿಂದ ಹೊರ ಬರದಂತೆ ಕ್ರಮ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ನಗರಸಭೆ ಹಾಗೂ ಪುರಸಭೆ ವತಿಯಿಂದಲೇ ಜನರ ಮನೆ ಬಾಗಿಲಿಗೆ ದಿನಸಿ ಪದಾರ್ಥ ಹಾಗೂ ತರಕಾರಿ ತಲುಪಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಆದೇಶಿಸಿದರು.

‘ಗ್ರಾಮೀಣ ಭಾಗದಲ್ಲಿ ಜನರ ಅನುಕೂಲಕ್ಕಾಗಿ ಗ್ರಾಮಪಡೆ ರಚಿಸಲಾಗಿದೆ. ಈ ಪಡೆಗಳು ಕ್ರಿಯಾಶೀಲವಾಗಿರುವಂತೆ ಹಿರಿಯ ಅಧಿಕಾರಿಗಳು ನಿಯಮಿತವಾಗಿ ಮೇಲ್ವಿಚಾರಣೆ ನಡೆಸಬೇಕು. ದಿನಸಿ ಮತ್ತು ತರಕಾರಿ ಅಂಗಡಿ ಮಾಲೀಕರು ಜನರಿಂದ ಅಗತ್ಯ ವಸ್ತುಗಳಿಗೆ ದುಪ್ಪಟ್ಟು ಹಣ ಪಡೆಯದಂತೆ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

ವೆಂಟಿಲೇಟರ್‌ ಕಡ್ಡಾಯ: ‘ಕೊರೊನಾ ಸೋಂಕಿನ ಭೀತಿ ಹೆಚ್ಚಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ಕಡ್ಡಾಯವಾಗಿ 2 ವೆಂಟಿಲೇಟರ್‌ ವ್ಯವಸ್ಥೆ ಇರಬೇಕು. ತಾಲ್ಲೂಕುಗಳಿಗೆ ಅಗತ್ಯವಿರುವ ಎಲ್ಲಾ ಔಷಧ ಹಾಗೂ ಉಪಕರಣಗಳನ್ನು ಶೀಘ್ರವೇ ಒದಗಿಸಬೇಕು’ ಎಂದು ಹೇಳಿದರು.

‘ಜಿಲ್ಲೆಗೆ ಹೆಚ್ಚಿನ ಕಡೆ ಪ್ರವೇಶ ಸಾಧ್ಯತೆ ಇರುವುದರಿಂದ ಹೊರಗಿನವರು ಜಿಲ್ಲೆಗೆ ಬರದಂತೆ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೆಲ ದಿನಗಳ ಹಿಂದೆ ಮಂಗಳೂರಿನಿಂದ 1,300ಕ್ಕೂ ಹೆಚ್ಚು ಮೀನುಗಾರರು ಜಿಲ್ಲೆಗೆ ಬಂದು ತೊಂದರೆಯಾಗಿತ್ತು. ಕೆಲ ವ್ಯಕ್ತಿಗಳು ಗ್ರಾಮೀಣ ಭಾಗದ ರಸ್ತೆಗಳು ಹಾಗೂ ಒಳ ರಸ್ತೆಗಳಲ್ಲಿ ಜಿಲ್ಲೆಗೆ ಬರುತ್ತಿದ್ದು, ಇಂತಹ ಸಂಪರ್ಕ ರಸ್ತೆಗಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು’ ಎಂದು ಸಲಹೆ ನೀಡಿದರು.

ಸಂಸದ ಎಸ್‌.ಮುನಿಸ್ವಾಮಿ, ಶಾಸಕರಾದ ಕೆ.ವೈ.ನಂಜೇಗೌಡ, ಕೆ.ಶ್ರೀನಿವಾಸಗೌಡ, ಎಂ.ರೂಪಕಲಾ, ವಿಧಾನ ಪರಿಷತ್‌ ಸದಸ್ಯರಾದ ಆರ್‌.ಚೌಡರೆಡ್ಡಿ, ನಸೀರ್‌ ಅಹಮ್ಮದ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಉಪಾಧ್ಯಕ್ಷೆ ಯಶೋದಾ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್‌.ವಿ.ದರ್ಶನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT