ಬುಧವಾರ, ಜುಲೈ 28, 2021
21 °C
ಡಿಎಆರ್‌ ಕಾನ್‌ಸ್ಟೆಬಲ್‌– ವ್ಯಾಪಾರಿಗೆ ಸೋಂಕು ದೃಢ

ಒಂದೇ ಕುಟುಂಬದ 3 ಮಂದಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯಲ್ಲಿ ಬುಧವಾರ ಒಂದೇ ಕುಟುಂಬದ ಮೂವರು ಸೇರಿದಂತೆ 5 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 10ಕ್ಕೇರಿದೆ.

ಬಂಗಾರಪೇಟೆ ಪಟ್ಟಣದ ತಂದೆ, ತಾಯಿ ಮತ್ತು 2 ವರ್ಷದ ಮಗುವಿಗೆ ಸೋಂಕು ತಗುಲಿದೆ. ಮತ್ತೊಂದೆಡೆ ಕೆಜಿಎಫ್‌ನ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ (ಡಿಎಆರ್‌) ಕಾನ್‌ಸ್ಟೆಬಲ್‌ಗೆ ಹಾಗೂ ಶ್ರೀನಿವಾಸಪುರ ಪಟ್ಟಣದಲ್ಲಿನ ಪಾತ್ರೆ ವ್ಯಾಪಾರಿಗೆ ಸೋಂಕು ಹರಡಿರುವುದು ಖಚಿತವಾಗಿದೆ.

ಬಂಗಾರಪೇಟೆಯ ಸೋಂಕಿತ ಕುಟುಂಬವು ಜೂನ್‌ 4ರಂದು ಮಹಾರಾಷ್ಟ್ರದಿಂದ ಜಿಲ್ಲೆಗೆ ಮರಳಿತ್ತು. ಹೀಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿಯು ಇಡೀ ಕುಟುಂಬವನ್ನು ಬಂಗಾರಪೇಟೆ ತಾಲ್ಲೂಕಿನ ಎಳೇಸಂದ್ರ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಿದ್ದರು. ಅಲ್ಲದೇ, ಆ ಮೂವರ ಕಫಾ ಮತ್ತು ರಕ್ತ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಬುಧವಾರ ರಾತ್ರಿ ಬಂದ ಪ್ರಯೋಗಾಲಯದ ವರದಿಯಲ್ಲಿ ಮೂವರಿಗೂ ಸೋಂಕು ಇರುವುದಾಗಿ ತಿಳಿಸಲಾಗಿದೆ.

ಕಾನ್‌ಸ್ಟೆಬಲ್‌ಗೆ ಸೋಂಕು: ಕೆಜಿಎಫ್‌ನ ಡಿಎಆರ್‌ ಕಾನ್‌ಸ್ಟೆಬಲ್‌ ಚಾಂಪಿಯನ್‌ರೀಫ್‌ನ ಪೊಲೀಸ್‌ ಇಲಾಖೆ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದಾರೆ. ಅವರನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ತರಬೇತಿಗೆ ನಿಯೋಜಿಸಲಾಗಿತ್ತು. ಹೀಗಾಗಿ ಅವರು ತರಬೇತಿಗೆ ತೆರಳುವ ಮುನ್ನ ಕೆಜಿಎಫ್‌ನ ಆಸ್ಪತ್ರೆಯಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಆರೋಗ್ಯ ತಪಾಸಣೆಗೆ ಒಳಗಾಗಿದ್ದರು. ಇದೀಗ ಅವರ ವೈದ್ಯಕೀಯ ವರದಿ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿದೆ.

ಆದರೆ, ಇವರಿಗೆ ಹೇಗೆ ಸೋಂಕು ತಗುಲಿತು ಎಂಬ ಮಾಹಿತಿ ಸಿಕ್ಕಿಲ್ಲ. ಸೋಂಕಿತ ಕಾನ್‌ಸ್ಟೆಬಲ್‌ ವೈದ್ಯಕೀಯ ವರದಿ ಬರುವುದಕ್ಕೂ ಮುನ್ನವೇ ಬುಧವಾರ ಮಧ್ಯಾಹ್ನ ಚಿತ್ರದುರ್ಗ ಜಿಲ್ಲೆಗೆ ತೆರಳಿ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ. ಕುಟುಂಬ ಸದಸ್ಯರು ಹಾಗೂ ಪೊಲೀಸ್‌ ಇಲಾಖೆ ಸಿಬ್ಬಂದಿ ಸೇರಿದಂತೆ ಹಲವರು ಅವರ ಸಂಪರ್ಕಕ್ಕೆ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ವ್ಯಾಪಾರಿಗೆ ಸೋಂಕು: ಶ್ರೀನಿವಾಸಪುರ ಪಟ್ಟಣದ ಅಂಚೆ ಕಚೇರಿ ರಸ್ತೆಯಲ್ಲಿ ಪಾತ್ರೆ ಮತ್ತು ಕಾಫಿ ಪುಡಿ ಅಂಗಡಿ ಇಟ್ಟುಕೊಂಡಿರುವ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದೆ. ಶ್ರೀನಿವಾಸಪುರದ ಎಂ.ಜಿ ರಸ್ತೆ ಬಳಿ ವಾಸವಿರುವ ಈ ವ್ಯಕ್ತಿಯು ಇತ್ತೀಚೆಗೆ ಪಾತ್ರೆ ಖರೀದಿಸಲು ತಮಿಳುನಾಡಿನ ಚೆನ್ನೈಗೆ ಹೋಗಿ ಬಂದಿದ್ದರು. ನಂತರ ಇವರಿಗೆ ಜ್ವರದ ಲಕ್ಷಣ ಕಾಣಿಸಿಕೊಂಡಿತ್ತು. ಹೀಗಾಗಿ ಶ್ರೀನಿವಾಸಪುರ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿದ್ದರು.

ಇವರ ಕಫಾ ಮತ್ತು ರಕ್ತ ಮಾದರಿ ಪರೀಕ್ಷಿಸಿದ ಪ್ರಯೋಗಾಲಯ ತಜ್ಞರು ಕೊರೊನಾ ಸೋಂಕು ಇರುವುದಾಗಿ ವರದಿ ನೀಡಿದ್ದಾರೆ. ಇವರ ಸಂಪರ್ಕಕ್ಕೆ ಬಂದಿರುವ ಕುಟುಂಬ ಸದಸ್ಯರು ಹಾಗೂ ಸ್ನೇಹಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.