ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಬಂಗಾರಪೇಟೆಗೆ ಕಾಲಿಟ್ಟ ಕೊರೊನಾ ಸೋಂಕು

ಜಿಲ್ಲೆಯಲ್ಲಿ 11ಕ್ಕೆ ಏರಿದ ಸೋಂಕಿತರ ಸಂಖ್ಯೆ: ಸಂಪರ್ಕಿತರ ಕ್ವಾರಂಟೈನ್‌
Last Updated 21 ಮೇ 2020, 14:27 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಗುರುವಾರ ಮಹಿಳೆ ಸೇರಿದಂತೆ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಕೊರೊನಾ ಸೋಂಕಿತರ ಸಂಖ್ಯೆ 11ಕ್ಕೆ ಏರಿದೆ.

ಸೋಂಕು ಮುಕ್ತವಾಗಿದ್ದ ಬಂಗಾರಪೇಟೆ ತಾಲ್ಲೂಕಿಗೂ ಇದೀಗ ಕೊರೊನಾ ಸೋಂಕು ಕಾಲಿಟ್ಟಿದ್ದು, ಸೋಂಕಿತ ವ್ಯಕ್ತಿಯ ಪ್ರವಾಸದ ವಿವರವು ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ. ಬಂಗಾರಪೇಟೆ ಪಟ್ಟಣದ ವಿಜಯನಗರ ನಿವಾಸಿಯಾದ ಈ ವ್ಯಕ್ತಿಯು ಲಾರಿ ಚಾಲಕರಾಗಿದ್ದಾರೆ.

ಇವರು ಮೇ 15ರಂದು ಸರಕು ಸಾಗಣೆ ವಾಹನದಲ್ಲಿ ತರಕಾರಿ ತುಂಬಿಸಿಕೊಂಡು ತಮಿಳುನಾಡಿನ ಚೆನ್ನೈ ಮಾರುಕಟ್ಟೆಗೆ ಹೋಗಿದ್ದರು. ನಂತರ ಮೇ 16ರಂದು ಬಂಗಾರಪೇಟೆಗೆ ಹಿಂದಿರುಗಿದ್ದರು. ಬಳಿಕ ಬಂಗಾರಪೇಟೆ ಪಟ್ಟಣ ಮತ್ತು ಎಪಿಎಂಸಿ ಸೇರಿದಂತೆ ಹಲವೆಡೆ ಸುತ್ತಾಡಿದ್ದರು.

ಈ ಸಂಗತಿ ತಿಳಿದ ಆರೋಗ್ಯ ಇಲಾಖೆ ಸಿಬ್ಬಂದಿಯು ಮೇ 18ರಂದು ಮನೆ ಬಳಿ ಹೋಗಿ ಅವರನ್ನು ಬಂಗಾರಪೇಟೆ ತಾಲ್ಲೂಕಿನ ಎಳೇಸಂದ್ರ ಗ್ರಾಮದಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಕರೆತಂದು ಕ್ವಾರಂಟೈನ್‌ ಮಾಡಿದ್ದರು. ಅಲ್ಲದೇ, ಅವರ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಗುರುವಾರ ಸಂಜೆ ಅವರ ವೈದ್ಯಕೀಯ ವರದಿ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿದೆ.

ಸೋಂಕಿತ ವ್ಯಕ್ತಿಯೊಂದಿಗೆ 4 ಮಂದಿ ಕುಟುಂಬ ಸದಸ್ಯರು, ಅಕ್ಕಪಕ್ಕದ ಮನೆಯ 6 ಮಂದಿ ಹಾಗೂ ಎಪಿಎಂಸಿಯಲ್ಲಿನ 10ಕ್ಕೂ ಹೆಚ್ಚು ಲಾರಿ ಚಾಲಕರು ಮತ್ತು ದಲ್ಲಾಳಿಗಳು ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಯು ಇವರೆಲ್ಲರನ್ನೂ ಪತ್ತೆ ಹಚ್ಚಿ ಎಳೇಸಂದ್ರದ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಿದ್ದಾರೆ.

ಪತ್ನಿಗೆ ಸೋಂಕು: ಮುಳಬಾಗಿಲು ತಾಲ್ಲೂಕಿನ ಸೊನ್ನವಾಡಿ ಗ್ರಾಮದಲ್ಲಿನ 49 ವರ್ಷದ ಕೊರೊನಾ ಸೋಂಕಿತ ವ್ಯಕ್ತಿಯಿಂದ ಅವರ ಪತ್ನಿಗೂ ಇದೀಗ ಸೋಂಕು ತಗುಲಿದೆ. ಲಾರಿ ಚಾಲಕರಾದ ಆ ವ್ಯಕ್ತಿಯು ಮುಳಬಾಗಿಲು ತಾಲ್ಲೂಕಿನ ವಡ್ಡಹಳ್ಳಿ ಹಾಗೂ ಜಿಲ್ಲಾ ಕೇಂದ್ರದ ಎಪಿಎಂಸಿಯಿಂದ ತರಕಾರಿ ತೆಗೆದುಕೊಂಡು ತಮಿಳುನಾಡಿನ ಚೆನ್ನೈಗೆ ಹೋಗಿದ್ದಾಗ ಸೋಂಕು ತಗುಲಿತ್ತು.

ಚೆನ್ನೈನಿಂದ ಮರಳಿದ ನಂತರ ಅವರನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಅವರ ಜತೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಪತ್ನಿಯ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷಿಸಿದಾಗ ಸೋಂಕು ಖಚಿತವಾಗಿದೆ. ಈ ಸೋಂಕಿತ ಮಹಿಳೆಯೊಂದಿಗೆ ಮಕ್ಕಳು ಸೇರಿದಂತೆ 25 ಮಂದಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ. ಅಲ್ಲದೇ, 15ಕ್ಕೂ ಹೆಚ್ಚು ಮಂದಿ ದ್ವಿತೀಯ ಸಂಪರ್ಕಿತರು ಪತ್ತೆಯಾಗಿದ್ದಾರೆ. ಇವರೆಲ್ಲರನ್ನೂ ಕ್ವಾರಂಟೈನ್‌ ಮಾಡಲಾಗಿದೆ.

ಕಂಟೈನ್‌ಮೆಂಟ್‌: ವಿಜಯನಗರದಲ್ಲಿನ ಸೋಂಕಿತರ ಮನೆಯ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿ ಪ್ರದೇಶವನ್ನು ನಿರ್ಬಂಧಿತ ಪ್ರದೇಶವಾಗಿ (ಕಂಟೈನ್‌ಮೆಂಟ್‌) ಘೋಷಿಸಿ ಪುರಸಭೆಯಿಂದ ಸೀಲ್‌ಡೌನ್‌ ಮಾಡಲಾಯಿತು. ಬಡಾವಣೆ ಜನರು ಹೊರಗೆ ಹೋಗಬಾರದು ಮತ್ತು ಹೊರಗಿನ ಜನರು ಬಡಾವಣೆಯೊಳಗೆ ಬರದಂತೆ ಅಧಿಕಾರಿಗಳು ಸೂಚನೆ ನೀಡಿದರು. ಇದೇ ರೀತಿ ಸೊನ್ನವಾಡಿ ಗ್ರಾಮವನ್ನು ನಿರ್ಬಂಧಿತ ಪ್ರದೇಶವಾಗಿ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT