ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಿಣಿಗೆ ಸೋಂಕು: 13ಕ್ಕೇರಿದ ಸೋಂಕಿತರು

ಬೆಟ್ಟಹೊಸಪುರ ಗ್ರಾಮ ಸೀಲ್‌ಡೌನ್‌: 18 ಮಂದಿ ಕ್ವಾರಂಟೈನ್‌
Last Updated 9 ಜೂನ್ 2020, 15:46 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಬೆಟ್ಟಹೊಸಪುರ ಗ್ರಾಮದಲ್ಲಿನ ಗರ್ಭಿಣಿಯೊಬ್ಬರಿಗೆ ಕೊರೊನಾ ಸೋಂಕು ಇರುವುದು ಮಂಗಳವಾರ ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಬೆಟ್ಟಹೊಸಪುರ ಗ್ರಾಮದ ಎಂಟೂವರೆ ತಿಂಗಳ ಗರ್ಭಿಣಿಯು ನಿಯಮಿತ ಆರೋಗ್ಯ ತಪಾಸಣೆಗಾಗಿ ಜಿಲ್ಲಾ ಕೇಂದ್ರದಲ್ಲಿನ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ಬರುತ್ತಿದ್ದರು. ಆರೋಗ್ಯ ಇಲಾಖೆಯು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿನ ಎಲ್ಲಾ ಗರ್ಭಿಣಿಯರ ಆರೋಗ್ಯ ತಪಾಸಣೆ ಮಾಡುತ್ತಿದೆ.

ಅದೇ ರೀತಿ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಇತ್ತೀಚೆಗೆ ಬೆಟ್ಟಹೊಸಪುರದ ಗರ್ಭಿಣಿಯ ಆರೋಗ್ಯ ತಪಾಸಣೆ ಮಾಡಲಾಗಿತ್ತು. ಅಲ್ಲದೇ, ಅವರ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಮಂಗಳವಾರ ರಾತ್ರಿ ಪ್ರಯೋಗಾಲಯದ ವರದಿ ಬಂದಿದ್ದು, ಅವರಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ.

ಆರೋಗ್ಯ ತಪಾಸಣೆ ನಂತರ ಎಸ್‌ಎನ್‌ಆರ್‌ ವೈದ್ಯಕೀಯ ಸಿಬ್ಬಂದಿಯು ಗರ್ಭಿಣಿಯನ್ನು ಮನೆಗೆ ವಾಪಸ್‌ ಕಳುಹಿಸಿದ್ದರು. ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿದಂತೆ 18 ಮಂದಿ ಸೋಂಕಿತ ಗರ್ಭಿಣಿಯ ಸಂಪರ್ಕಕ್ಕೆ ಬಂದಿದ್ದು, ಅವರೆಲ್ಲರನ್ನೂ ಕ್ವಾರಂಟೈನ್‌ ಮಾಡಲಾಗಿದೆ. ಗರ್ಭಿಣಿಯನ್ನು ಎಸ್‌ಎನ್‌ಆರ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಂಕಿತ ಗರ್ಭಿಣಿಯ ಪತಿ ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಗರ್ಭಿಣಿಯು ಇತ್ತೀಚೆಗೆ ಬೆಂಗಳೂರಿನ ದೇವನಹಳ್ಳಿಯಲ್ಲಿನ ಸಂಬಂಧಿಕರ ಮನೆಗೆ ಹೋಗಿ ಬಂದಿದ್ದರು. ಹೀಗಾಗಿ ಇವರಿಗೆ ಯಾರಿಂದ ಸೋಂಕು ತಗುಲಿದೆ ಎಂಬುದು ಸದ್ಯಕ್ಕೆ ನಿಗೂಢವಾಗಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿಯು ಸೋಂಕಿನ ಜಾಡು ಪತ್ತೆ ಕಾರ್ಯ ಮುಂದುವರಿಸಿದ್ದಾರೆ. ಬೆಟ್ಟಹೊಸಪುರ ಗ್ರಾಮವನ್ನು ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದೆ.

ಚಿತ್ತೂರಿಗೆ ಪರಾರಿ?: ಕ್ವಾರಂಟೈನ್‌ಗೆ ಹೆದರಿ ಜೂನ್‌ 5ರಿಂದ ಪರಾರಿಯಾಗಿರುವ ಕೊರೊನಾ ಸೋಂಕಿತ ಹೋಟೆಲ್‌ ಕೆಲಸಗಾರ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಇರುವುದಾಗಿ ಗೊತ್ತಾಗಿದೆ.

ಈ ಸೋಂಕಿತ ವ್ಯಕ್ತಿಯು ವೈಯಕ್ತಿಕ ವಿವರದ ಸಂಬಂಧ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸುಳ್ಳು ಮಾಹಿತಿ ನೀಡಿದ್ದು, ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ. ಇವರು ಬಂಗಾರಪೇಟೆಯ ಹೋಟೆಲ್‌ ಒಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ, ಪೊಲೀಸರ ಪರಿಶೀಲನೆ ವೇಳೆ ಸೋಂಕಿತ ವ್ಯಕ್ತಿಯು ಕೋಲಾರದ ಎಪಿಎಂಸಿ ಬಳಿಯ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಮಾಲೂರು ರಸ್ತೆಯ ಪೂಜಾ ಕಲ್ಯಾಣ ಮಂಟಪದ ಬಳಿಯ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದರು ಎಂದು ಗೊತ್ತಾಗಿದೆ.

ಮೂಲತಃ ತುಮಕೂರು ಜಿಲ್ಲೆ ಕುಣಿಗಲ್‌ ತಾಲ್ಲೂಕಿನ ಈ ವ್ಯಕ್ತಿಯು ಲಾಕ್‌ಡೌನ್‌ ಕಾರಣಕ್ಕೆ ಹೋಟೆಲ್‌ ಬಂದ್‌ ಆಗಿದ್ದರಿಂದ ಏಪ್ರಿಲ್‌ನಲ್ಲಿ ತಮ್ಮ ಸ್ವಗ್ರಾಮಕ್ಕೆ ವಾಪಸ್‌ ಹೋಗಿದ್ದರು. ಲಾಕ್‌ಡೌನ್‌ ಸಡಿಲಿಕೆಯಾದ ಕಾರಣ ಇತ್ತೀಚೆಗೆ ಕೋಲಾರದ ಹೋಟೆಲ್‌ಗೆ ಮರಳಿ ಕೆಲಸಕ್ಕೆ ಬರುವುದಾಗಿ ಮಾಲೀಕರಿಗೆ ಹೇಳಿದ್ದರು. ಬಳಿಕ ಮಾಲೀಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಕೊರೊನಾ ಸೋಂಕು ಇಲ್ಲವೆಂಬ ವೈದ್ಯಕೀಯ ವರದಿಯೊಂದಿಗೆ ಕೆಲಸಕ್ಕೆ ಬರುವಂತೆ ಸೂಚಿಸಿ ಕಳುಹಿಸಿದ್ದರು.

ಹೀಗಾಗಿ ಈ ವ್ಯಕ್ತಿಯು ಜೂನ್‌ 3ರಂದು ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದರು. ಶನಿವಾರ (ಜೂನ್‌ 6) ಬಂದ ಪ್ರಯೋಗಾಲಯ ವರದಿಯಲ್ಲಿ ಇವರಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿತ್ತು. ಬಳಿಕ ಆರೋಗ್ಯ ಇಲಾಖೆ ಸಿಬ್ಬಂದಿಯು ಸೋಂಕಿತ ಸಂಗತಿಯನ್ನು ಇವರಿಗೆ ತಿಳಿಸಿದ್ದರು. ಆ ನಂತರ ಸೋಂಕಿತ ವ್ಯಕ್ತಿಯು ಆಸ್ಪತ್ರೆಗೆ ಬರುವುದಾಗಿ ಹೇಳಿ ಪರಾರಿಯಾಗಿದ್ದರು. ಪೊಲೀಸರು ಇವರ ಮೊಬೈಲ್‌ ಕರೆಯ ವಿವರ ಆಧರಿಸಿ ಪರಿಶೀಲನೆ ಮಾಡಿದಾಗ ಚಿತ್ತೂರಿನಲ್ಲಿ ಇರುವುದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT