ಸೋಮವಾರ, ಜೂಲೈ 6, 2020
26 °C
ಏರುಗತಿಯಲ್ಲಿ ಸಾಗಿದ ಸೋಂಕಿತರ ಸಂಖ್ಯೆ

ಕೋಲಾರ | ಜಿಲ್ಲಾ ಕೇಂದ್ರಕ್ಕೆ ಕಾಲಿಟ್ಟ ಕೋವಿಡ್–19: ಹೆಚ್ಚಿದ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೊರೊನಾ ಸೋಂಕಿನಿಂದ ಮುಕ್ತವಾಗಿದ್ದ ಜಿಲ್ಲಾ ಕೇಂದ್ರಕ್ಕೂ ಇದೀಗ ಸೋಂಕು ಕಾಲಿಟ್ಟಿದ್ದು, ನಗರವಾಸಿಗಳಲ್ಲಿ ಆತಂಕ ಹೆಚ್ಚಿದೆ.

ನಗರದ ಕಸ್ತೂರಿನಗರ ಬಡಾವಣೆಯ 43 ವರ್ಷದ ನಿವಾಸಿಗೆ ಕೊರೊನಾ ಸೋಂಕು ಇರುವುದು ಬುಧವಾರ ದೃಢಪಟ್ಟಿದೆ. ದಿನೇದಿನೇ ಕೊರೊನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿದ್ದು, ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ.

ಬುಧವಾರ ಪತ್ತೆಯಾಗಿರುವ ಸೋಂಕಿತ ವ್ಯಕ್ತಿಯು ಮೂಲತಃ ಹಾವೇರಿ ಜಿಲ್ಲೆಯವರು. ಕುಟುಂಬ ಸದಸ್ಯರೊಂದಿಗೆ ಕಸ್ತೂರಿ ನಗರದಲ್ಲಿ ವಾಸವಿರುವ ಇವರು ಜಿಲ್ಲಾ ಕೇಂದ್ರದ ಎಪಿಎಂಸಿಯಲ್ಲಿನ ಟೊಮೆಟೊ ಮಂಡಿಯೊಂದರಲ್ಲಿ ವ್ಯವಸ್ಥಾಪಕರಾಗಿದ್ದಾರೆ.

ಇವರು ಇತ್ತೀಚೆಗೆ ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗೆ ಹೋಗಿ ಬಂದಿದ್ದರು. ಹೀಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿಯು ಇವರನ್ನು ಮನೆಯಲ್ಲೇ ಪ್ರತ್ಯೇಕ ನಿಗಾದಲ್ಲಿ (ಕ್ವಾರಂಟೈನ್‌) ಇರಿಸಿದ್ದರು. ಇವರ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಬುಧವಾರ ವೈದ್ಯಕೀಯ ವರದಿ ಬಂದಿದ್ದು, ಸೋಂಕು ಇರುವುದು ಖಚಿತವಾಗಿದೆ. ಇವರನ್ನು ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

18 ಮಂದಿ ಕ್ವಾರಂಟೈನ್‌: ಸೋಂಕಿತ ವ್ಯಕ್ತಿಯು ಕ್ವಾರಂಟೈನ್‌ ನಿಯಮ ಉಲ್ಲಂಘಿಸಿ ಮನೆಯಿಂದ ಹೊರಬಂದು ಎಪಿಎಂಸಿಯಲ್ಲಿ ಹಾಗೂ ನಗರದ ವಿವಿಧೆಡೆ ಓಡಾಡಿರುವುದು ಗೊತ್ತಾಗಿದೆ. ನಾಲ್ಕೈದು ದಿನಗಳಿಂದ ಮಂಡಿಯಲ್ಲಿ ಕೆಲಸಕ್ಕೆ ಹಾಜರಾಗಿರುವ ಇವರ ಜತೆ ವರ್ತಕರು, ರೈತರು, ಹಲವು ಮಂಡಿ ಮಾಲೀಕರು ಸಂಪರ್ಕಕ್ಕೆ ಬಂದಿದ್ದಾರೆ. ಕುಟುಂಬ ಸದಸ್ಯರು ಸೇರಿದಂತೆ ಸದ್ಯಕ್ಕೆ ಸುಮಾರು 18 ಮಂದಿ ಇವರ ಸಂಪರ್ಕಕ್ಕೆ ಬಂದಿರುವ ಮಾಹಿತಿ ಲಭ್ಯವಾಗಿದ್ದು, ಅವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.

ಕಂಟೈನ್‌ಮೆಂಟ್‌: ಸೋಂಕಿತ ವ್ಯಕ್ತಿಯ ಮನೆಯ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿ ಪ್ರದೇಶವನ್ನು ನಿರ್ಬಂಧಿತ ಪ್ರದೇಶವಾಗಿ (ಕಂಟೈನ್‌ಮೆಂಟ್‌) ಘೋಷಿಸಿ ನಗರಸಭೆಯಿಂದ ಸೀಲ್‌ಡೌನ್‌ ಮಾಡಲಾಗಿದೆ. ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು. ಬಡಾವಣೆಯ ಜನರು ಹೊರಗೆ ಹೋಗಬಾರದು ಮತ್ತು ಹೊರಗಿನ ಜನರು ಬಡಾವಣೆಯೊಳಗೆ ಬರದಂತೆ ಅಧಿಕಾರಿಗಳು ಸೂಚನೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು