ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌: ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ಸ್ಥಾಪನೆ

ಸೋಂಕಿತರಿಗೆ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ವ್ಯವಸ್ಥೆ
Last Updated 3 ಮಾರ್ಚ್ 2020, 12:55 IST
ಅಕ್ಷರ ಗಾತ್ರ

ಕೋಲಾರ: ಜಾಗತಿಕವಾಗಿ ಸಾಕಷ್ಟು ಭೀತಿ ಹುಟ್ಟಿಸಿರುವ ಕೊರೊನಾ ವೈರಸ್‌ (ಕೋವಿಡ್‌–19) ಹರಡುವಿಕೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿದ್ದು, ಸೋಂಕಿತ ರೋಗಿಗಳ ಚಿಕಿತ್ಸೆಗಾಗಿ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ತೆರೆದಿದೆ.

6 ಹಾಸಿಗೆ ಸಾಮರ್ಥ್ಯದ ವಾರ್ಡ್‌ ಜತೆಗೆ ತಪಾಸಣೆ, ರಕ್ತಪರೀಕ್ಷೆ, ವೈರಸ್ ಪತ್ತೆಗೆ ರೋಗಿಯ ರಕ್ತ ಮಾದರಿ ಸಂಗ್ರಹಿಸಿ ಬೆಂಗಳೂರಿನ ವೈರಲಾಜಿ ಪ್ರಯೋಗಾಲಯಕ್ಕೆ ಕಳುಹಿಸಲು ಈ ವಾರ್ಡ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಜತೆಗೆ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯನ್ನು ವಾರ್ಡ್‌ಗೆ ನಿಯೋಜಿಸಲಾಗಿದೆ.

ರೋಗಿಗಳಿಗೆ ವಾರ್ಡ್‌ನಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಗಿದೆ. ಗಂಭೀರ ಸಮಸ್ಯೆ ಕಂಡುಬಂದರೆ ತೀವ್ರ ನಿಗಾ ಘಟಕದ 5 ಹಾಸಿಗೆಗಳ ಪೈಕಿ ಒಂದು ಹಾಸಿಗೆಯನ್ನು ಕೊರೊನಾ ವೈರಸ್‌ ರೋಗಿಗಳ ಚಿಕಿತ್ಸೆಗೆ ಮೀಸಲಿಡಲಾಗಿದೆ.

‘ಜನರು ಹಾನಿಕಾರಕ ವೈರಸ್‌ ದೇಹ ಪ್ರವೇಶಿಸದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಹೆಚ್ಚು ಗಮನಹರಿಸಬೇಕು. ಜತಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅಗತ್ಯ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಜಿ.ನಾರಾಯಣಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.

‘ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಹರಡದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಈ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗವಾಗಿದೆ. ತೀವ್ರ ಜ್ವರ, ನೆಗಡಿ, ಕೆಮ್ಮು, ಉಸಿರಾಟ ಸಮಸ್ಯೆ ಹಾಗೂ ಭೇದಿ ಈ ರೋಗದ ಪ್ರಮುಖ ಲಕ್ಷಣಗಳು. ಈ ಸೋಂಕು ಕಾಣಿಸಿಕೊಂಡ ಕೂಡಲೇ ಚಿಕಿತ್ಸೆಗೆ ಪಡೆಯುವುದು ಸೂಕ್ತ’ ಎಂದು ಸಲಹೆ ನೀಡಿದರು.

ಚೀನಾದ ತಂಡ: ‘ಚೀನಾದ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಹಾಗೂ ತಂತ್ರಜ್ಞರ ತಂಡವು ಜ.23ರಂದು ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಮೊಬೈಲ್‌ ಉತ್ಪಾದನಾ ಕಂಪನಿಗೆ ಬಂದಿದೆ. 23 ಸದಸ್ಯರ ಆ ತಂಡವು ನರಸಾಪುರ ಬಳಿಯ ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾಸ್ಪತ್ರೆ ವೈದ್ಯಕೀಯ ಸಿಬ್ಬಂದಿಯು ಆ ಸದಸ್ಯರ ಆರೋಗ್ಯ ತಪಾಸಣೆ ಮಾಡಿದ್ದಾರೆ’ ಎಂದು ವಿವರಿಸಿದರು.

‘ಆ ತಂಡದ ಪ್ರತಿ ಸದಸ್ಯರ ರಕ್ತ ಹಾಗೂ ಕಫಾ ಮಾದರಿ ಸಂಗ್ರಹಿಸಿ ಹೆಚ್ಚಿನ ಪರಿಶೀಲನೆಗಾಗಿ ಪುಣೆಯ ರಾಷ್ಟ್ರೀಯ ರೋಗ ಸೂಕ್ಷ್ಮಾಣು ಅಧ್ಯಯನ ಸಂಸ್ಥೆಗೆ (ಎನ್‌ಐವಿ) ಕಳುಹಿಸಿದ್ದರು. ಅವರಲ್ಲಿ ಯಾರಿಗೂ ಕೊರೊನಾ ವೈರಸ್‌ ಸೋಂಕು ತಗುಲಿಲ್ಲ ಎಂದು ಎನ್‌ಐವಿ ತಜ್ಞರು ವರದಿ ಕೊಟ್ಟಿದ್ದಾರೆ’ ಎಂದು ಮಾಹಿತಿ ನೀಡಿದರು.

ಕಟ್ಟೆಚ್ಚರ ವಹಿಸಿದೆ: ‘ಜಿಲ್ಲೆಯಲ್ಲಿ ಈವರೆಗೆ ಕೊರೊನಾ ವೈರಸ್‌ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ. ಸಂಭಾವ್ಯ ಕೊರೊನಾ ಸೋಂಕು ಎದುರಿಸಲು ಜಿಲ್ಲಾಸ್ಪತ್ರೆ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿರುವ ರೈಲು ನಿಲ್ದಾಣಗಳು ಹಾಗೂ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಗಡಿ ಭಾಗದಿಂದ ಬರುವ ಜನರ ಬಗ್ಗೆ ಆರೋಗ್ಯ ಇಲಾಖೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT