ಗುರುವಾರ , ಜುಲೈ 29, 2021
22 °C

ಕೊರೊನಾ ಸ್ಫೋಟ: 15 ಮಂದಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯಲ್ಲಿ ಮಂಗಳವಾರ ಕೊರೊನಾ ಸೋಂಕಿನ ಸ್ಫೋಟವಾಗಿದ್ದು, ಒಂದೇ ದಿನ 15 ಮಂದಿಗೆ ಸೋಂಕು ಹರಡಿದೆ. ಸೋಂಕಿತರ ಜತೆಗಿನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದ ನಂಜು ಜಿಲ್ಲಾ ಕೇಂದ್ರ ಕೋಲಾರಕ್ಕೆ ಕಂಟಕವಾಗಿ ಪರಿಣಮಿಸಿದೆ.

ಕೋಲಾರ ತಾಲ್ಲೂಕಿನಲ್ಲಿ 11 ಮಂದಿ ಸೋಂಕಿತರು ಪತ್ತೆಯಾಗಿದ್ದು, ಈ ಪೈಕಿ 7 ಮಂದಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ಹರಡಿದೆ. ಸೋಂಕಿತ ವ್ಯಕ್ತಿ ಸಂಖ್ಯೆ 15,409ರ ಸಂಪರ್ಕದಿಂದ 2 ವರ್ಷದ ಹೆಣ್ಣು ಮಗು ಮತ್ತು 33 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

ಸೋಂಕಿತ ವ್ಯಕ್ತಿಯ ಸಂಖ್ಯೆ 21,656ರ ಸಂಪರ್ಕದಿಂದ ಇಬ್ಬರು ಪುರುಷರಿಗೆ ಸೋಂಕು ಹರಡಿದೆ. ಸೋಂಕಿತ ವ್ಯಕ್ತಿ ಸಂಖ್ಯೆ 21,658ರ ಪ್ರಕರಣದಿಂದ ಒಂದೇ ಕುಟುಂಬದ ಇಬ್ಬರಿಗೆ, 21,657ನೇ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಒಬ್ಬರಿಗೆ ಸೋಂಕು ತಗುಲಿದೆ. ಉಳಿದಂತೆ ವಿಷಮ ಶೀತ ಜ್ವರದಿಂದ ಬಳಲುತ್ತಿರುವ ಮಹಿಳೆ ಹಾಗೂ ಇಬ್ಬರು ಪುರುಷರಿಗೆ ಸೋಂಕು ಬಂದಿದೆ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ 70 ವರ್ಷದ ವಯೋವೃದ್ಧರೊಬ್ಬರಿಗೆ ಸೋಂಕು ಇರುವುದು ಗೊತ್ತಾಗಿದೆ.

ರೈತನಿಗೆ ಸೋಂಕು: ಶ್ರೀನಿವಾಸಪುರ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಕ್ಕೆ ತುತ್ತಾಗಿರುವ 29 ವರ್ಷದ ಪುರುಷರೊಬ್ಬರಿಗೆ ಮತ್ತು ಮಾಲೂರು ತಾಲ್ಲೂಕಿನ ಬಂಟಹಳ್ಳಿಯಲ್ಲಿ ರೈತರೊಬ್ಬರಿಗೆ ಸೋಂಕು ಹರಡಿರುವುದು ಖಚಿತವಾಗಿದೆ. ಬಂಟಹಳ್ಳಿಯ ಸೋಂಕಿತ ರೈತರ ಸಂಬಂಧಿಯು ಅನಾರೋಗ್ಯಪೀಡಿತರಾಗಿದ್ದು, ಚಿಕಿತ್ಸೆಗಾಗಿ ಇತ್ತೀಚೆಗೆ ಬೆಂಗಳೂರಿಗೆ ಹೋಗಿ ಬಂದಿದ್ದರು. ಹೀಗಾಗಿ ಅವರಿಗೆ ಸೋಂಕು ತಗುಲಿತ್ತು. ಅವರ ಸಂಪರ್ಕದಿಂದ ಸಂಬಂಧಿ ರೈತರೊಬ್ಬರಿಗೆ ಸೋಂಕು ಹರಡಿದೆ.

ವೈದ್ಯರಿಗೆ ಸೋಂಕು: ಕೆಜಿಎಫ್‌ ನಗರದಲ್ಲಿ ವೈದ್ಯರೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ಸ್ಯಾನಿಟರಿ ಬೋರ್ಡ್‌ ಕಾಲೊನಿ ನಿವಾಸಿಯಾದ ಇವರು ಕೆಜಿಎಫ್‌ನಲ್ಲಿ ಖಾಸಗಿಯಾಗಿ ಕ್ಲಿನಿಕ್‌ ನಡೆಸುತ್ತಾರೆ. ಇವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಬಂಧಿಕರ ಆರೋಗ್ಯ ವಿಚಾರಿಸಲು ಹೋಗಿದ್ದರು. ಅಲ್ಲಿಯೇ ಇವರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಕೆಜಿಎಫ್‌ನ ಚಾಂಪಿಯನ್‌ ರೀಫ್‌ ‘ಜಿ’ ಬ್ಲಾಕ್‌ ನಿವಾಸಿಗೆ ಸೋಂಕು ಇರುವುದು ಖಚಿತವಾಗಿದೆ. ಇವರು ಕೆಲಸಕ್ಕಾಗಿ ಪ್ರತಿನಿತ್ಯ ಬೆಂಗಳೂರಿಗೆ ಹೋಗಿ ಬರುತ್ತಿದ್ದರು. ಸೋಂಕಿತರ ಸಂಪರ್ಕ ಬಂದ ವ್ಯಕ್ತಿಗಳನ್ನು ಕ್ವಾರಂಟೈನ್‌ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.