ಭ್ರಷ್ಟ ಅಧಿಕಾರಿಗಳು ಜಾಗ ಖಾಲಿ ಮಾಡಿ: ಶಾಸಕ ಶ್ರೀನಿವಾಸಗೌಡ ಗುಡುಗು

ಕೋಲಾರ: ‘ರೈತರನ್ನು ಶೋಷಿಸುವ ಅಧಿಕಾರಿಗಳನ್ನು ನೋಡಿ ಸುಮ್ಮನೆ ಕೂರುವುದಿಲ್ಲ. ಅಂತಹ ಭ್ರಷ್ಟ ಅಧಿಕಾರಿಗಳು ತಾವಾಗಿಯೇ ಜಾಗ ಖಾಲಿ ಮಾಡಿ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಗುಡುಗಿದರು.
ಇಲ್ಲಿ ಮಂಗಳವಾರ ನಡೆದ ರೈತರ ಮತ್ತು ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಪೋಡಿ ಸಮಸ್ಯೆ ಹೆಚ್ಚಿದ್ದು, ರೈತರಿಗೆ ತೊಂದರೆಯಾಗುತ್ತಿದೆ. ಪೋಡಿ ಸಮಸ್ಯೆ ಪರಿಹರಿಸುವ ಸೋಗಿನಲ್ಲಿ ಅಧಿಕಾರಿಗಳು ರೈತರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ. ತಹಶೀಲ್ದಾರ್ ಕಚೇರಿಯಲ್ಲಿನ ಈ ದಂದೆ ಶಾಶ್ವತವಾಗಿ ಕೊನೆಯಾಗಬೇಕು’ ಎಂದು ತಾಕೀತು ಮಾಡಿದರು.
‘ಅಧಿಕಾರಿಗಳು ಪಿ ನಂಬರ್ ಸಮಸ್ಯೆಯನ್ನು ಹಣ ಮಾಡುವ ದಂದೆಯಾಗಿಸಿಕೊಂಡಿದ್ದಾರೆ. ಪಿ ನಂಬರ್ ತೆಗೆಯದಿದ್ದರೆ ರೈತರಿಗೆ ಎಲ್ಲಾ ಹಂತದಲ್ಲೂ ಸಮಸ್ಯೆಯಾಗುತ್ತದೆ. ಈ ಸಮಸ್ಯೆ ಶಾಶ್ವತವಾಗಿ ಪರಿಹರಿಸಲು ಅಧಿಕಾರಿಗಳು ಪೂರ್ವಸಿದ್ಧತೆ ಮಾಡಿಕೊಂಡು ಮುಂದಿನ ಸಭೆಗೆ ಬರಬೇಕು’ ಎಂದು ಸೂಚಿಸಿದರು.
‘ರೈತರು ಸೌಲಭ್ಯ ಪಡೆಯಲು ಪದೇಪದೇ ಸರ್ಕಾರಿ ಕಚೇರಿಗೆ ಅಲೆಯುವ ಪರಿಸ್ಥಿತಿಯಿದೆ. ಸಣ್ಣಪುಟ್ಟ ಕೆಲಸಕ್ಕಾಗಿ ಕಚೇರಿಗೆ ಬರುವ ರೈತರನ್ನು ಸತಾಯಿಸಬೇಡಿ. ನಿರ್ದಿಷ್ಟ ಕಾಲಮಿತಿಯೊಳಗೆ ರೈತರ ಕೆಲಸ ಮಾಡಿ. ತಹಶೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಕೆಲಸ ಇಲ್ಲದವರು ಇದ್ದಾರೆ. ಅವರಿಗೆ ಜವಾಬ್ದಾರಿ ಕೊಟ್ಟು ಕೆಲಸ ಮಾಡಿಸಿ’ ಎಂದರು.
ಕಂದಾಯ ಅದಾಲತ್: ‘ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಅವರು ಪಿ ನಂಬರ್ ಸಮಸ್ಯೆ ಪರಿಹಾರಕ್ಕೆ ಜಿಲ್ಲೆಯಾದ್ಯಂತ ಕಂದಾಯ ಅದಾಲತ್ ನಡೆಸಿದ್ದರು. ಆದರೆ, ಈಗ ಕಂದಾಯ ಅದಾಲತ್ ನಡೆದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಜನರಿಗೆ ಸಾಕಷ್ಟು ದೂರು ಬರುತ್ತಿವೆ. ಲೋಪದೋಷ ಸರಿಪಡಿಸಿಕೊಂಡು ಕಾರ್ಯ ನಿರ್ವಹಿಸಬೇಕು’ ಎಂದು ತಿಳಿಸಿದರು.
‘ರೈತರ ಸಮಸ್ಯೆ ಹೇಳಲು ಬಂದರೆ ತಹಶೀಲ್ದಾರ್ ಕಚೇರಿಯಲ್ಲಿ ಇರುವುದೇ ಇಲ್ಲ. ತಹಶೀಲ್ದಾರ್ ಈವರೆಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆ ನಡೆಸಿಲ್ಲ’ ಎಂದು ಸಾರ್ವಜನಿಕರು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ‘ಕೋವಿಡ್ ಹಿನ್ನೆಲೆಯಲ್ಲಿ ತಹಶೀಲ್ದಾರ್‌ಗೆ ಸಭೆ ನಡೆಸಲು ಸಾಧ್ಯವಾಗಿಲ್ಲ. ಮುಂದೆ ನಾನೇ ಪ್ರತಿ ಮಂಗಳವಾರ ತಹಶೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಿ ಸ್ಥಳದಲ್ಲೇ ಜನರ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುತ್ತೇನೆ. ರೈತರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು’ ಎಂದು ಮನವಿ ಮಾಡಿದರು.
ಗಂಭೀರ ಪರಿಣಾಮ: ‘ಅಧಿಕಾರಿಗಳು ರೈತರು ಹಾಗೂ ಜನರ ಪರವಾಗಿ ಕೆಲಸ ಮಾಡಬೇಕು. ಆದರೆ, ಅಧಿಕಾರಿಗಳ ಕಾರ್ಯವೈಖರಿ ಇದಕ್ಕೆ ತದ್ವಿರುದ್ಧವಾಗಿದೆ. ಲಂಚಕ್ಕಾಗಿ ಅಧಿಕಾರಿಗಳು ರೈತರನ್ನು ಶೋಷಿಸುತ್ತಿದ್ದಾರೆ. ಅಧಿಕಾರಿಗಳ ವರ್ತನೆ ಬದಲಾಗದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಖಡಕ್ ಎಚ್ಚರಿಕೆ ನೀಡಿದರು.
ಉಪ ವಿಭಾಗಾಧಿಕಾರಿ ವಿ.ಸೋಮಶೇಖರ್, ತಹಶೀಲ್ದಾರ್ ಶೋಬಿತಾ, ಉಪ ತಹಶೀಲ್ದಾರ್ ಕೊಂಡಯ್ಯ ಪಾಲ್ಗೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.