ಭ್ರಷ್ಟಾಚಾರವೇ ಕಾಂಗ್ರೆಸ್‌ನ ದೊಡ್ಡ ಸಾಧನೆ: ಸಂತೋಷ್‌ ವಾಗ್ದಾಳಿ

ಶುಕ್ರವಾರ, ಏಪ್ರಿಲ್ 19, 2019
27 °C
ಸಂವಾದ

ಭ್ರಷ್ಟಾಚಾರವೇ ಕಾಂಗ್ರೆಸ್‌ನ ದೊಡ್ಡ ಸಾಧನೆ: ಸಂತೋಷ್‌ ವಾಗ್ದಾಳಿ

Published:
Updated:
Prajavani

ಕೋಲಾರ: ‘ಮತ ಗಳಿಕೆಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ಕಾಂಗ್ರೆಸ್‌ ಪಕ್ಷವನ್ನು ದೇಶದಿಂದಲೇ ಹೊರಹಾಕಬೇಕು. ದೇಶದ ಬದಲಾವಣೆಗಾಗಿ ಮೋದಿ ಅವರಿಗೆ ಮತ್ತೊಮ್ಮೆ ಪ್ರಧಾನಿಯಾಗುವ ಅವಕಾಶ ಕಲ್ಪಿಸಿ’ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಹೇಳಿದರು.

ಜಿಲ್ಲೆಯ ವಕೀಲರು ಮತ್ತು ಬಿಜೆಪಿ ಕಾನೂನು ಘಟಕದ ಸದಸ್ಯರೊಂದಿಗೆ ಇಲ್ಲಿ ಸೋಮವಾರ ನಡೆದ ಸಂವಾದದಲ್ಲಿ ಮಾತನಾಡಿ, ‘ಕಾಂಗ್ರೆಸ್‌ 7 ದಶಕದಲ್ಲಿ ರಾಜಕೀಯವಾಗಿ ದೊಡ್ಡ ದ್ರೋಹ ಎಸಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ತಾಂಡವವಾಡುವಂತೆ ಮಾಡಿದ್ದೇ ಕಾಂಗ್ರೆಸ್‌ನ ದೊಡ್ಡ ಸಾಧನೆ’ ಎಂದು ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್ ಮುಖಂಡರು ಯಾವುದೇ ಸಂದರ್ಭದಲ್ಲಿ ಮೊದಲು ರಾಜಿ ಮಾಡಿಕೊಳ್ಳುವುದಕ್ಕೆ ಮುಂದಾಗುತ್ತಾರೆ. 3 ದಶಕಗಳಿಂದ ಜಿಲ್ಲೆಗೆ ಬರಬೇಕಾದದ್ದು ಏನೂ ಬರಲಿಲ್ಲ. ಅವರಿಗೆ ಏನೇನು ಬೇಕೋ ಅವೆಲ್ಲವೂ ಬಂದಿದೆ. ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆಯ ಅಗತ್ಯವಿದೆ’ ಎಂದು ಪರೋಕ್ಷವಾಗಿ ಕಾಂಗ್ರೆಸ್‌ನ ಹಾಲಿ ಸಂಸದ ಕೆ.ಎಚ್‌.ಮುನಿಯಪ್ಪ ವಿರುದ್ಧ ಹರಿಹಾಯ್ದರು.

‘ಮೋದಿ ವಿರುದ್ಧ ಮೈತ್ರಿಕೂಟ ಕಟ್ಟಿಕೊಂಡಿರುವವರ ಪರವಾಗಿ ಪ್ರಧಾನಿ ಅಭ್ಯರ್ಥಿಯೇ ಇಲ್ಲ. ಕಾಂಗ್ರೆಸ್, ಜೆಡಿಎಸ್, ಡಿಎಂಕೆ ಮುಖಂಡರು ಮಾತ್ರ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎನ್ನುತ್ತಿದ್ದಾರೆ. ಉಳಿದವರು ಚುನಾವಣೆ ಬಳಿಕ ನೋಡೋಣ, ಮೊದಲು ಬಿಜೆಪಿ ಸೋಲಲಿ ಎನ್ನುತ್ತಿದ್ದಾರೆ. ಬೆಳಿಗ್ಗೆ ಒಂದು ಮಾತು, ಸಂಜೆಗೆ ಮತ್ತೊಂದು ಮಾತನಾಡುತ್ತಿರುವ ಅವರ ಪರಿಸ್ಥಿತಿ ನೋಡಿ ಅಯ್ಯೋ ಎನಿಸುತ್ತಿದೆ’ ಎಂದು ವ್ಯಂಗ್ಯವಾಡಿದರು.

ಗೊಂದಲದಲ್ಲಿ ಮಹಾಮೈತ್ರಿ: ‘ಗೊಂದಲದ ನಡುವೆಯೇ ಮಹಾಮೈತ್ರಿ ಸಾಗುತ್ತಿದ್ದು, ಜನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಾವು ಭರವಸೆ ಆಧಾರದ ಮೇರೆಗೆ ಮತ ಯಾಚಿಸುತ್ತಿಲ್ಲ. ನಾವು ಕೆಲಸದ ಆಧರಿಸಿ ಮತ್ತೊಮ್ಮೆ ಅವಕಾಶ ಕೇಳುತ್ತಿದ್ದೇವೆ. ಮೋದಿ ದೇಶದ ಪ್ರತಿ ವ್ಯಕ್ತಿಗೂ ಅನುಕೂಲವಾಗುವ ಯೋಜನೆ ಜಾರಿಗೆ ತಂದಿದ್ದು, ಅದಕ್ಕಾಗಿ ಮತ್ತೊಮ್ಮೆ ಅವರನ್ನು ಪ್ರಧಾನಿಯಾಗಿಸಬೇಕು’ ಎಂದು ಮನವಿ ಮಾಡಿದರು.

‘ಹಿಂದಿನ 5 ವರ್ಷದಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸಿರುವ ಮೋದಿ ಭ್ರಷ್ಟಾಚಾರ ರಹಿತವಾಗಿದ್ದಾರೆ. ತಾನೂ ಹಣ ಮಾಡದೆ, ಅಧಿಕಾರಿಗಳು ಮತ್ತು ಸಚಿವರಿಗೂ ಹಣ ಮಾಡಲಿಕ್ಕೆ ಅವಕಾಶ ಕೊಟ್ಟಿಲ್ಲ. ಒಂದು ದಿನವೂ ವಿಶ್ರಾಂತಿ ಪಡೆಯದೆ ದೇಶಕ್ಕಾಗಿ ದುಡಿದಿದ್ದಾರೆ’ ಎಂದು ಸ್ಮರಿಸಿದರು.

ವಿಶ್ರಾಂತಿ ನೀಡಿ: ‘ಇತ್ತೀಚೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರದ ಮಾತು ಇಲ್ಲವೇ ಇಲ್ಲ. ಮೋದಿಯವರು ಹಳ್ಳಿಗಾಡಿನ ಕಟ್ಟಕಡೆಯ ವ್ಯಕ್ತಿಗೂ ನಾನಾ ಯೋಜನೆಗಳ ಮೂಲಕ ತಲುಪಿದ್ದಾರೆ. ಜನಧನ್ ಯೋಜನೆಯ ಶೇ 53ರಷ್ಟು ಫಲಾನುಭವಿಗಳು ರೂಪೇಕಾರ್ಡ್ ಪಡೆದಿದ್ದು, ₹ 67 ಸಾವಿರ ಕೋಟಿ ಅವರ ಖಾತೆಗೆ ಜಮಾ ಆಗಿದೆ. ಮೋದಿ ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸಿದ್ದಾರೆ’ ಎಂದು ವಿವರಿಸಿದರು.

‘ಕೇಂದ್ರವು 46 ಕೋಟಿ ಎಲ್‍ಇಡಿ ಬಲ್ಬ್‌ ನೀಡಿದೆ. ಶೌಚಾಲಯ ನಿರ್ಮಿಸಿದೆ. ಸರ್ಕಾರ ರಚನೆಗೆ ಅಗತ್ಯವಿರುವ 300 ಸ್ಥಾನಗಳಲ್ಲಿ ಕೋಲಾರ ಕ್ಷೇತ್ರವೂ ಸೇರಬೇಕು. ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿಗೆ ವಿಶ್ರಾಂತಿ ನೀಡಿ’ ಎಂದರು.

ನದಿ ಜೋಡಣೆ: ‘ಮೋದಿ ದೇಶದ ಉದ್ದಗಲಕ್ಕೂ ನದಿ ಜೋಡಣೆಗೆ ಆದ್ಯತೆ ನೀಡಿದ್ದಾರೆ. 16 ಯೋಜನೆಗಳ ಪೈಕಿ ಈಗಾಗಲೇ 3 ಪೂರ್ಣಗೊಂಡಿವೆ. ಗೋದಾವರಿ- ಕಾವೇರಿ ನದಿ ಜೋಡಣೆಗೆ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗುತ್ತಿದ್ದು, ಈ ಯೋಜನೆಯಿಂದ 352 ಟಿಎಂಸಿ ನೀರು ಲಭ್ಯವಾಗಲಿದೆ’ ಎಂದು ಮಾಹಿತಿ ನೀಡಿದರು.

‘ನದಿಗಳ ಜೋಡಣೆಗೆ ರಾಜ್ಯ ರಾಜ್ಯಗಳ ನಡುವೆ ಹೊಂದಾಣಿಕೆ ಸಮಸ್ಯೆ ಉದ್ಭವಿಸುತ್ತದೆ. ಈ ಸಮಸ್ಯೆಗಳನ್ನೆಲ್ಲಾ ಬಗೆಹರಿಸಿಕೊಳ್ಳುವುದರಲ್ಲೇ ತಡವಾಗುತ್ತಿದೆ. ಯೋಜನೆ ಜಾರಿಗೆ ಹೆಚ್ಚಿನ ಹಣದ ಅಗತ್ಯ ಇರುವುದರಿಂದ ಹಂತ ಹಂತವಾಗಿ ಎಲ್ಲವನ್ನೂ ಜಾರಿ ಮಾಡಲಾಗುತ್ತದೆ’ ಎಂದು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !