ಭಾನುವಾರ, ಅಕ್ಟೋಬರ್ 20, 2019
27 °C

ದೇಶದಲ್ಲಿ ಭ್ರಷ್ಟಾಚಾರ ತಾಂಡವ: ವಕೀಲ ಬಿಸಪ್ಪಗೌಡ ಕಳವಳ

Published:
Updated:
Prajavani

ಕೋಲಾರ: ‘ರಾಜಕಾರಣಿಗಳ ಹಣ ದಾಹದಿಂದ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ’ ಎಂದು ವಕೀಲ ಬಿಸಪ್ಪಗೌಡ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಇಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ದಸರಾ ಯುವ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ‘ದೇಶದಲ್ಲಿ ಮಹಾತ್ಮ ಗಾಂಧೀಜಿಯ ತತ್ವಾದರ್ಶ ಮೂಲೆ ಗುಂಪಾಗಿದೆ. ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕಚೇರಿಗಳಲ್ಲಿ ಗಾಂಧೀಜಿ ಭಾವಚಿತ್ರದ ಕೆಳಗೆ ಕೂತು ಅಕ್ರಮ ನಡೆಸುತ್ತಿದ್ದಾರೆ’ ಎಂದು ವಿಷಾದಿಸಿದರು.

‘ರಕ್ತಪಾತವಿಲ್ಲದೆ ಅಹಿಂಸೆಯ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಗಾಂಧೀಜಿಯ ತತ್ವಾದರ್ಶ ಸಮ ಸಮಾಜ ನಿರ್ಮಾಣಕ್ಕೆ ದಾರಿದೀಪ. ದೇಶದ ಅಸ್ತಿತ್ವ ಇರುವವರೆಗೂ ಗಾಂಧೀಜಿ ಹೆಸರು ಶಾಶ್ವತವಾಗಿರುತ್ತದೆ. ಅವರ ತತ್ವಾದರ್ಶದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ಗಾಂಧೀಜಿ ಇಡೀ ಜಗತ್ತೇ ಗುರುತಿಸಿರುವ ಮಹಾನ್ ನಾಯಕ. ಸರಳ ವ್ಯಕ್ತಿತ್ವದ ಅವರ ನೆನಪು ಜನಮಾನಸದಲ್ಲಿ ಶಾಶ್ವತವಾಗಿದೆ. ಅವರ ನಡೆ, ನುಡಿ ಮತ್ತು ಜೀವನ ಶೈಲಿಯನ್ನು ಎಲ್ಲರೂ ಅನುಸರಿಸಬೇಕು. ತಾಳ್ಮೆಯಿಂದ ಗಾಂಧೀಜಿ ಸಿದ್ಧಾಂತದಂತೆ ಅಹಿಂಸೆಯ ಮಾರ್ಗದಲ್ಲಿ ಸಾಗಿದರೆ ಖಂಡಿತ ಯಶಸ್ಸು ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಮಹತ್ತರ ಪಾತ್ರ: ಗಾಂಧೀಜಿ ಜೀವನ ಕುರಿತು ಉಪನ್ಯಾಸ ನೀಡಿದ ಸರ್ಕಾರಿ ಕಾನೂನು ಕಾಲೇಜಿನ ಉಪನ್ಯಾಸಕಿ ಪ್ರಸನ್ನಕುಮಾರಿ, ‘ಗಾಂಧೀಜಿ ಗ್ರಾಮ ಸ್ವರಾಜ್ಯದ ಕನಸು ಕಂಡವರು. ದೇಶದ ಸಂಸ್ಕೃತಿ ಗ್ರಾಮಗಳಲ್ಲಿ ಅಡಗಿದೆ. ಗ್ರಾಮಗಳ ಉದ್ಧಾರವಾದರೆ ಮಾತ್ರ ದೇಶದ ಉದ್ಧಾರ ಸಾಧ್ಯ ಎಂಬುದು ಗಾಂಧೀಜಿಯ ನಂಬಿಕೆಯಾಗಿತ್ತು. ಅಸೃಶ್ಯತೆ ನಿವಾರಣೆಯಲ್ಲಿ ಗಾಂಧೀಜಿ ಮಹತ್ತರ ಪಾತ್ರ ವಹಿಸಿದರು’ ಎಂದು ಸ್ಮರಿಸಿದರು.

‘ಪರಿಷತ್ತು ಜಿಲ್ಲೆಯಲ್ಲಿ ವಿಶೇಷತೆ ಹೊಂದಿದ್ದು. ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ದಸರಾ ಯುವ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಯುವಕ ಯುವತಿಯರಿಗೆ ಪ್ರೋತ್ಸಾಹ ನೀಡಲು ಹಾಗೂ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ಕವಿಗೋಷ್ಠಿ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ವಿವರಿಸಿದರು.

ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಬಿ.ಶಿವಕುಮಾರ್, ಸಾಹಿತಿ ರಘುನಂದನ್, ರಾಜ್ಯ ಬರಹಗಾರರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ನಾಗರಾಜ್, ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಜೆ ಮೌನಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಪಾಲ್ಗೊಂಡಿದ್ದರು.

Post Comments (+)