ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲ್ಲಾಳಿ ಹಾವಳಿ: ರೈತ ಸಂಘ ಧರಣಿ

ನರಸಾಪುರ ನಾಡ ಕಚೇರಿಯಲ್ಲಿ ಭ್ರಷ್ಟಾಚಾರ: ಆರೋಪ
Last Updated 16 ನವೆಂಬರ್ 2019, 16:10 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ನರಸಾಪುರ ನಾಡ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕಚೇರಿ ಎದುರು ಶನಿವಾರ ಧರಣಿ ನಡೆಸಿದರು.

‘ನರಸಾಪುರ ನಾಡ ಕಚೇರಿಯಲ್ಲಿ ಸಿಬ್ಬಂದಿ ಸಮಸ್ಯೆ ಗಂಭೀರವಾಗಿದೆ. ಇದರಿಂದ ಕಚೇರಿ ದೈನಂದಿನ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಜನರಿಗೆ ತೊಂದರೆಯಾಗಿದೆ. ಮತ್ತೊಂದೆಡೆ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಿದೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ನಾಡ ಕಚೇರಿ ಸಿಬ್ಬಂದಿಯು ಲಂಚಕ್ಕಾಗಿ ಸಾರ್ವಜನಿಕರನ್ನು ಶೋಷಿಸುತ್ತಿದ್ದಾರೆ. ಸಾರ್ವಜನಿಕರು ಲಂಚ ಕೊಡದಿದ್ದರೆ ಸಿಬ್ಬಂದಿ ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ. ಸರ್ವಾಧಿಕಾರಿಗಳಂತೆ ವರ್ತಿಸುತ್ತಿರುವ ಸಿಬ್ಬಂದಿಯು ಜನರಿಂದ ಲಂಚದ ರೂಪದಲ್ಲಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದಾರೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

‘ಸಿಬ್ಬಂದಿಯು ದಲ್ಲಾಳಿಗಳ ಜತೆ ಶಾಮೀಲಾಗಿ ಲಂಚದ ದಂಧೆ ನಡೆಸುತ್ತಿದ್ದಾರೆ. ಸಾರ್ವಜನಿಕರು ಜನನ, ಮರಣ ಪ್ರಮಾಣಪತ್ರ ಪಡೆಯಲು ದಲ್ಲಾಳಿಗಳನ್ನು ಅವಲಂಬಿಸುವ ಪರಿಸ್ಥಿತಿಯಿದೆ. ಸಾಕಷ್ಟು ಸಿಬ್ಬಂದಿ ಕಚೇರಿಗೆ ಗೈರಾದರೂ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ಸಂಬಳ ಪಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.

ಅಲೆಸುತ್ತಾರೆ: ‘ನಾಡ ಕಚೇರಿಯ ಕೆಲ ಸಿಬ್ಬಂದಿ ಕಾರ್ಯ ಸ್ಥಳದಲ್ಲಿ ಇರುವುದಿಲ್ಲ. ಸಾರ್ವಜನಿಕರು ಸಿಬ್ಬಂದಿಯ ಮೊಬೈಲ್‌ಗೆ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ಜನರು ಸಿಬ್ಬಂದಿಯನ್ನು ಹುಡುಕಿಕೊಂಡು ಅಲೆಯುವಂತಾಗಿದೆ. ಸಿಬ್ಬಂದಿಯು ಕಚೇರಿಯಲ್ಲಿ ಕಂಪ್ಯೂಟರ್‌, ಸರ್ವರ್‌, ವಿದ್ಯುತ್‌ ಸಮಸ್ಯೆಯಿದೆ ಎಂದು ವಿನಾ ಕಾರಣ ಜನರನ್ನು ಅಲೆಸುತ್ತಿದ್ದಾರೆ’ ಎಂದು ಧರಣಿನಿರತರು ಕಿಡಿಕಾರಿದರು.

‘ಸರ್ಕಾರಿ ಗೋಮಾಳ ಮತ್ತು ಗುಂಡು ತೋಪು ಒತ್ತುವರಿ, ಅಕ್ರಮ ಗಣಿಗಾರಿಕೆ, ಫಿಲ್ಟರ್‌ ಮರಳು ದಂಧೆ ತಡೆಯುವಲ್ಲಿ ಸಿಬ್ಬಂದಿ ವಿಫಲರಾಗಿದ್ದಾರೆ. ಸಾಕಷ್ಟು ಕಡೆ ಸರ್ಕಾರಿ ಜಮೀನು, ರಾಜಕಾಲುವೆಗಳು ಒತ್ತುವರಿಯಾಗಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ. ಹಣದಾಸೆಗೆ ಸಿಬ್ಬಂದಿಯು ಒತ್ತುವರಿದಾರರ ಜತೆ ಶಾಮೀಲಾಗಿದ್ದಾರೆ’ ಎಂದು ದೂರಿದರು.

ಹೆದ್ದಾರಿ ಬಂದ್‌: ‘ನಾಡ ಕಚೇರಿಯಲ್ಲಿನ ಖಾಲಿ ಹುದ್ದೆ ಭರ್ತಿ ಮಾಡಬೇಕು. ಭ್ರಷ್ಟ ಸಿಬ್ಬಂದಿಯನ್ನು ಅಮಾನತು ಮಾಡಬೇಕು. ದಲ್ಲಾಳಿಗಳಿಗೆ ಕಡಿವಾಣಕ್ಕೆ ಹಾಕಬೇಕು. ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಮಾಡಬೇಕು. ಇಲ್ಲದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ನರಸಾಪುರ ಹೋಬಳಿ ಘಟಕದ ಅಧ್ಯಕ್ಷ ರೆಹಮಾನ್, ಸದಸ್ಯರಾದ ಮಂಜುನಾಥರೆಡ್ಡಿ, ಅಮರನಾರಾಯಣಸ್ವಾಮಿ, ತಿಮ್ಮಣ್ಣ, ವೆಂಕಟೇಶಪ್ಪ, ಮಂಜುನಾಥ್‌, ನರಸಿಂಹ, ನಾಗೇಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT