ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ

Last Updated 8 ನವೆಂಬರ್ 2019, 10:05 IST
ಅಕ್ಷರ ಗಾತ್ರ

ಕೋಲಾರ: ‘ದೇಶದ ಸಂವಿಧಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಮತ್ತು ಬಲಿಷ್ಠವಾದದ್ದು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್‌.ಗಂಗಾಧರ್‌ ಅಭಿಪ್ರಾಯಪಟ್ಟರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕೆನರಾ ಬ್ಯಾಂಕ್ ಸ್ವಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ವಕೀಲರ ಸಂಘ, ಹಾಗೂ ಜಾಗೃತಿ ಸೇವಾ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು- ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಪ್ರತಿ ಧರ್ಮಕ್ಕೂ ಧಾರ್ಮಿಕ ಗ್ರಂಥವಿದೆ. ಅದೇ ರೀತಿ ಎಲ್ಲಾ ಭಾರತೀಯರಿಗೆ ಸಂವಿಧಾನ ಮಹಾಗ್ರಂಥ. ದೇಶದ ಸಂವಿಧಾನ ಒಂದು ಕಥೆಯಲ್ಲ. ಬದಲಿಗೆ ಮಹಾನ್‌ ಗ್ರಂಥ. ಆದರೆ, ಅನೇಕರು ಸಂವಿಧಾನ ಓದುವುದೇ ಇಲ್ಲ. ದೇಶದ ನಾಗರಿಕರೆಲ್ಲರೂ ಸಂವಿಧಾನದ ಮುಖ್ಯ ಅಂಶಗಳನ್ನು ತಿಳಿಯಬೇಕು. ಜತೆಗೆ ಸಂವಿಧಾನದಡಿ ರಚನೆಯಾದ ಕಾನೂನು ಪಾಲಿಸುವ ಮನಸ್ಥಿತಿ ಬೆಳೆಯಬೇಕು’ ಎಂದು ಕಿವಿಮಾತು ಹೇಳಿದರು.

‘ಅಶಕ್ತರು, ಬಡವರು ಕಾನೂನಿನ ನೆರವು ಸಿಗದೆ ಸಮಸ್ಯೆ ಎದುರಿಸಬಾರದೆಂಬ ಕಾರಣಕ್ಕೆ ದೇಶದ ಎಲ್ಲಾ ಕಡೆ ಕಾನೂನು ಸೇವಾ ಪ್ರಾಧಿಕಾರ ಮತ್ತು ಕಾನೂನು ಸೇವಾ ಸಮಿತಿ ರಚಿಸಲಾಗಿದೆ. ವರ್ಷಕ್ಕೆ ₹ 1 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಎಲ್ಲರೂ ಉಚಿತವಾಗಿ ಕಾನೂನು ನೆರವು ಪಡೆಯಬಹುದು. ಕಾನೂನಿಗೆ ಸಂಬಂಧಿಸಿದಂತೆ ಅನ್ಯಾಯವಾದರೆ ಪ್ರಾಧಿಕಾರದ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬಹುದು’ ಎಂದರು.

‘ದೇಶದ ಪ್ರಜೆಗಳಿಗೆ ನೀಡಿರುವ ಧಾರ್ಮಿಕ ಸ್ವಾತಂತ್ರ್ಯ ಹಕ್ಕು, ಶೈಕ್ಷಣಿಕ ಹಕ್ಕು, ಶೋಷಣೆಯ ವಿರುದ್ಧದ ಹಕ್ಕಿಗೆ ಧಕ್ಕೆಯಾದರೆ ನ್ಯಾಯಾಲಯಗಳ ಮೂಲಕ ಪ್ರಶ್ನಿಸುವ ಅಧಿಕಾರ ನಾಗರಿಕರಿಗೆ ಇದೆ. ಅದೇ ರೀತಿ ಮೂಲಭೂತ ಕರ್ತವ್ಯ ಪಾಲಿಸುವುದು ನಾಗರಿಕರ ಜವಾಬ್ದಾರಿ’ ಎಂದು ತಿಳಿಸಿದರು.

ಸಾಮಾನ್ಯ ಕಾನೂನುಗಳು, ಮೋಟಾರು ವಾಹನ ಕಾಯ್ದೆ, ಗ್ರಾಹಕರ ಕಾನೂನು ಕುರಿತು ಉಪನ್ಯಾಸ ನೀಡಲಾಯಿತು. ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಡಿ.ಶ್ರೀನಿವಾಸ್, ವಕೀಲರಾದ ಕೆ.ಆರ್.ಧನರಾಜ್, ನಾರಾಯಣಸ್ವಾಮಿ, ತರಬೇತಿ ಸಂಸ್ಥೆ ನಿರ್ದೇಶಕ ರಮಾಕಾಂತ್ ಬಿ.ಯಾದವ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT