ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ಗೆ ಮೂಲಸೌಕರ್ಯ ಅಗತ್ಯ

ಹೊಸ ಕಟ್ಟಡಕ್ಕೆ ಹೈಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ ಶಂಕುಸ್ಥಾಪನೆ
Last Updated 2 ಅಕ್ಟೋಬರ್ 2022, 5:13 IST
ಅಕ್ಷರ ಗಾತ್ರ

ಕೋಲಾರ: ‘ನ್ಯಾಯಾಲಯದ ಕಾರ್ಯ ಕಲಾಪಗಳನ್ನು ಸುಗಮವಾಗಿ ನಡೆಸಲು, ತ್ವರಿತಗತಿಯಲ್ಲಿ ಪ್ರಕರಣ ವಿಲೇವಾರಿ ಮಾಡಲು ಸುಸಜ್ಜಿತ ಮೂಲಸೌಲಭ್ಯ ಅಗತ್ಯ’ ಎಂದು ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಅಭಿಪ್ರಾಯಪಟ್ಟರು.

ಜಿಲ್ಲಾ ನ್ಯಾಯಾಲಯ, ಲೋಕೋಪಯೋಗಿ ಇಲಾಖೆ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ನೂತನ ನ್ಯಾಯಾಲಯಸಂಕೀರ್ಣ ನಿರ್ಮಾಣಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಕೋಲಾರದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ₹ 25 ಕೋಟಿ ಬಿಡುಗಡೆ ಮಾಡಿದೆ. ಬೇಗನೇ ಕಟ್ಟಣ ನಿರ್ಮಾಣ ಕಾರ್ಯ ಮುಗಿಸಬೇಕು. ಉತ್ತಮ ಸೌಲಭ್ಯ‌ಗಳಿಂದ ಕೂಡಿರಬೇಕು’ ಎಂದು ಸಲಹೆ ನೀಡಿದರು.

‘ಎಲ್ಲಿ ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಿರುವುದೋ ಅಲ್ಲಿ ಶಾಂತಿ-ಸುವ್ಯವಸ್ಥೆ ಸಾಧ್ಯವಾಗುತ್ತದೆ. ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ತ್ವರಿತಗತಿಯಲ್ಲಿ ನ್ಯಾಯ ಒದಗಿಸಬೇಕು’ ಎಂದರು.

‘ಹೈಕೋರ್ಟ್‌ ಪ್ರಸ್ತಾಪ ಸಲ್ಲಿಸಿರುವ ನ್ಯಾಯಾಲಯದ ಮೂಲ ಸೌಕರ್ಯದ ಬಾಕಿ ಯೋಜನೆಗಳಿಗೆ ಸರ್ಕಾರ ಬೇಗನೇ ಒಪ್ಪಿಗೆ ನೀಡಬೇಕು’ ಎಂದು ಹೇಳಿದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಾಧ್ಯಕ್ಷ ಮತ್ತು ಹೈಕೋರ್ಟ್‌ ನ್ಯಾಯಾಧೀಶ ಬಿ. ವೀರಪ್ಪ, 'ಈ ಯೋಜನೆಗೆ ತಡವಾಗಿ ಹಣ ಬಿಡುಗಡೆಯಾಯಿತು. ಬೆಂಗಳೂರಿಗೆ 70 ಕಿ.ಮೀ.ದೂರದಲ್ಲಿರುವ ಕೋಲಾರಕ್ಕೆ ಏಕೆ ಅನ್ಯಾಯವೆಂದು ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಮೇಲೆ ಹಣ ಬಂತು. ಗುಣಮಟ್ಟದ ಕಟ್ಟಡ ತಲೆ‌ ಎತ್ತಬೇಕು' ಎಂದರು.

ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಕೆ.ಆರ್. ನಾಗರಾಜ, ‘ದಿನೇದಿನೇ ವ್ಯಾಜ್ಯ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ, ಕೋಲಾರ ನ್ಯಾಯಾಲಯದಲ್ಲಿ ಕಟ್ಟಡ ಕೊರತೆ ಇದೆ. ಈ ಸಂಬಂಧ ಧರಣಿ ಕೂಡ ನಡೆದಿತ್ತು. ಈಗ ಹೈಕೋರ್ಟ್‌ ನೆರವಿನಿಂದ ನಮ್ಮೆಲ್ಲರ ಸಮಸ್ಯೆ ಬಗೆಹರಿದಿದೆ’ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಜಿ. ಶ್ರೀಧರ್ ಮಾತನಾಡಿ, ‘ಯೋಜನೆ ಹಿಂದೆ ಹಲವರ ಪರಿಶ್ರಮವಿದೆ. 10 ವರ್ಷಗಳ ಹೋರಾಟ ನಡೆಸಿದ್ದೇವೆ. ‌850ಕ್ಕೂ ಹೆಚ್ಚು ವಕೀಲರು ಇದ್ದಾರೆ. ಆದರೆ, ಕೂರಲು ಸರಿಯಾದ ಜಾಗವಿರಲಿಲ್ಲ. ವಕೀಲರ ಸಂಘಕ್ಕೆ ಎರಡು ಎಕರೆ ಜಾಗ ಕೊಡಬೇಕು’ ಎಂದು‌ ಮನವಿ‌ ಮಾಡಿದರು.

ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಮತ್ತು ಹೈಕೋರ್ಟ್ ನ್ಯಾಯಾಧೀಶ ಎಸ್. ಸುನಿಲ್‌ ದತ್ ಯಾದವ್, ಹೈಕೋರ್ಟ್ ನ್ಯಾಯಾಧೀಶ ಎನ್.ಎಸ್. ಸಂಜಯಗೌಡ, ರಿಜಿಸ್ಟ್ರಾರ್ ಜನರಲ್‌ ಮುರಳೀಧರ ಪೈ ಬಿ., ವಕೀಲರ ಸಂಘದ ಕಾರ್ಯದರ್ಶಿ ರಘುಪತಿ ಗೌಡ, ಪಿಡಬ್ಲ್ಯುಡಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಚಂದ್ರಶೇಖರ್ ಭಾಗವಹಿಸಿದ್ದರು.

ಜಿಲ್ಲಾಧಿಕಾರಿ ವೆಂಕಟ್‌ ರಾಜಾ, ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್‌ ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಡಿ. ದೇವರಾಜ್‌, ತಹಶೀಲ್ದಾರ್‌ ವಿ. ನಾಗರಾಜ್‌, ಬೆಂಗಳೂರಿನ ವಕೀಲ ವಿವೇಕ್‌ ರೆಡ್ಡಿ, ವಕೀಲ ನರೇಂದ್ರಬಾಬು, ಜಿಲ್ಲೆಯ ವಕೀಲರು, ನ್ಯಾಯಾಧೀಶರು ಕಾರ್ಯಕ್ರಮದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT