ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಸೋಂಕಿತ ಸಾವು: 8ಕ್ಕೇರಿದ ಸಾವಿನ ಸಂಖ್ಯೆ

ಜಿಲ್ಲೆಯಲ್ಲಿ ಮುಂದುವರಿದ ಸಾವಿನ ಸರಣಿ: ಮತ್ತೆ 40 ಮಂದಿಗೆ ಸೋಂಕು
Last Updated 16 ಜುಲೈ 2020, 17:29 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಬುಧವಾರ ರಾತ್ರಿ ಕೊರೊನಾ ಸೋಂಕಿತರೊಬ್ಬರು ಮೃತಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಜಿಲ್ಲಾ ಕೇಂದ್ರದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಳಬಾಗಿಲು ತಾಲ್ಲೂಕಿನ ಮನ್ನೇನಹಳ್ಳಿ ಗ್ರಾಮದ 61 ವರ್ಷದ ಸೋಂಕಿತ ವಯೋವೃದ್ಧರೊಬ್ಬರು ಕೊನೆಯುಸಿರೆಳೆದಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ ಇತ್ತೀಚೆಗೆ ಸೋಂಕು ತಗುಲಿತ್ತು.

ಸೋಂಕಿತ ವ್ಯಕ್ತಿಯ ಸಾವಿನ ಬೆನ್ನಲ್ಲೇ ಜಿಲ್ಲೆಯಲ್ಲಿ ಗುರುವಾರ ಸೋಂಕಿನ ಸ್ಫೋಟವಾಗಿದ್ದು, ಹೊಸದಾಗಿ 40 ಮಂದಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ. ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು 19 ಮಂದಿಗೆ ಸೋಂಕು ತಗುಲಿದೆ.

ಉಳಿದಂತೆ ಕೆಜಿಎಫ್‌ ತಾಲ್ಲೂಕಿನಲ್ಲಿ 10, ಮುಳಬಾಗಿಲು ತಾಲ್ಲೂಕಿನಲ್ಲಿ 6 ಮಂದಿಗೆ, ಮಾಲೂರು ತಾಲ್ಲೂಕಿನಲ್ಲಿ 3 ಮಂದಿಗೆ, ಬಂಗಾರಪೇಟೆ ಹಾಗೂ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ತಲಾ ಒಬ್ಬರಿಗೆ ಸೋಂಕು ಬಂದಿರುವುದು ಖಚಿತವಾಗಿದೆ.

ಕೋಲಾರ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರದಿಂದ ಬಳಲುತ್ತಿರುವ 8 ಮಂದಿ ಪುರುಷರು ಮತ್ತು 5 ಮಂದಿ ಮಹಿಳೆಯರಿಗೆ ಸೋಂಕು ಇರುವುದು ಗೊತ್ತಾಗಿದೆ. ಜಿಲ್ಲಾ ಕೇಂದ್ರದ ಕೋವಿಡ್‌ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ನಿಯೋಜನೆಗೊಂಡಿದ್ದ 59 ವರ್ಷದ ಆರೋಗ್ಯ ಕಾರ್ಯಕರ್ತರೊಬ್ಬರಿಗೆ, ಸೋಂಕಿತ ವ್ಯಕ್ತಿಯ ಸಂಖ್ಯೆ 47,676ರ ಸಂಪರ್ಕದಿಂದ 1 ವರ್ಷದ ಮಗುವಿಗೆ, 23 ವರ್ಷ ಗರ್ಭಿಣಿಗೆ, ಕಂಟೈನ್‌ಮೆಂಟ್‌ ವಲಯದಲ್ಲಿನ ವ್ಯಕ್ತಿಗೆ ಸೋಂಕು ಬಂದಿದೆ. ಮಹಿಳೆ ಮತ್ತು ಪುರುಷರೊಬ್ಬರಿಗೆ ಸೋಂಕು ಹರಡಿದ್ದು, ಸೋಂಕಿನ ಮೂಲದ ಬಗ್ಗೆ ಪರಿಶೀಲನೆ ಮುಂದುವರಿದಿದೆ.

ಸಂಪರ್ಕದ ನಂಟು: ಕೆಜಿಎಫ್‌ ತಾಲ್ಲೂಕಿನ ಸೋಂಕಿತ ವ್ಯಕ್ತಿಯೊಬ್ಬರ ಸಂಪರ್ಕವು ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ. ಸೋಂಕಿತ ವ್ಯಕ್ತಿಯ ಸಂಖ್ಯೆ 18,096ರ ಸಂಪರ್ಕದಿಂದ ಎರಡು ವರ್ಷದ ಮಗು ಸೇರಿದಂತೆ 5 ಮಂದಿಗೆ ಸೋಂಕು ಹರಡಿದೆ. ಮತ್ತೊಂದೆಡೆ ಸೋಂಕಿತ ವ್ಯಕ್ತಿ ಸಂಖ್ಯೆ 29,169ರ ಸಂಪರ್ಕದಿಂದ ಇಬ್ಬರಿಗೆ ಸೋಂಕು ಬಂದಿದೆ. ವಿಷಮ ಶೀತ ಜ್ವರದಿಂದ ಬಳಲುತ್ತಿರುವ ಪುರುಷರೊಬ್ಬರಿಗೆ ಮತ್ತು ಹೊರ ಜಿಲ್ಲೆಗೆ ಹೋಗಿ ಬಂದಿದ್ದ 50 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. 49 ವರ್ಷದ ಮತ್ತೊಬ್ಬ ವ್ಯಕ್ತಿಗೆ ಸೋಂಕು ಹರಡಿದ್ದು, ಸೋಂಕಿನ ಮೂಲ ಗೊತ್ತಾಗಿಲ್ಲ.

ಕಂಟೈನ್‌ಮೆಂಟ್‌ ವಲಯ: ಮುಳಬಾಗಿಲು ತಾಲ್ಲೂಕಿನ ಕಂಟೈನ್‌ಮೆಂಟ್‌ ವಲಯಗಳಲ್ಲಿನ 5 ಮಂದಿಗೆ ಸೋಂಕು ಹರಡಿದೆ. ಜತೆಗೆ ಆಸ್ಪತ್ರೆಯಲ್ಲಿನ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

ಮಾಲೂರು ತಾಲ್ಲೂಕಿನಲ್ಲಿ ಆರೋಗ್ಯ ಕಾರ್ಯಕರ್ತರೊಬ್ಬರಿಗೆ, ವಿಷಮ ಶೀತ ಜ್ವರದಿಂದ ಬಳಲುತ್ತಿರುವ ವ್ಯಕ್ತಿಗೆ ಮತ್ತು ಸೋಂಕಿತ ವ್ಯಕ್ತಿಯ ಸಂಖ್ಯೆ 42,730ರ ಸಂಪರ್ಕದಿಂದ ಮಹಿಳೆಯೊಬ್ಬರಿಗೆ ಸೋಂಕು ಬಂದಿದೆ. ಬಂಗಾರಪೇಟೆ ತಾಲ್ಲೂಕಿನಲ್ಲಿ ಹೊರ ಜಿಲ್ಲೆಗೆ ಬಂದಿದ್ದ ವ್ಯಕ್ತಿಗೆ ಮತ್ತು ಶ್ರೀನಿವಾಸಪುರದಲ್ಲಿ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ 55 ವರ್ಷದ ಮಹಿಳೆಗೆ ಸೋಂಕು ಹರಡಿದೆ.

ಸೋಂಕಿತ ಮನೆ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಅಲ್ಲದೇ, ಸುರಕ್ಷತಾ ಕ್ರಮವಾಗಿ ಇಡೀ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಕ್ವಾರಂಟೈನ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT