ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಕರ್ತವ್ಯ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ: ಸಚಿವ ಸುಧಾಕರ್‌

ಸಭೆಯಲ್ಲಿ ವೈದ್ಯಕೀಯ ಸಿಬ್ಬಂದಿಗೆ ಆರೋಗ್ಯ ಸಚಿವ ಸುಧಾಕರ್‌ ಖಡಕ್‌ ಎಚ್ಚರಿಕೆ
Last Updated 27 ಏಪ್ರಿಲ್ 2021, 11:38 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್‌ ಪರಿಸ್ಥಿತಿ ನಿರ್ವಹಣೆ ಜವಾಬ್ದಾರಿಯುತ ಕೆಲಸ. ಜನರು ವೈದ್ಯರ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕರ್ತವ್ಯ ನಿರ್ಲಕ್ಷ್ಯಕ್ಕೆ, ಉದಾಸೀನತೆಗೆ ಅವಕಾಶವಿಲ್ಲ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ವೈದ್ಯಕೀಯ ಸಿಬ್ಬಂದಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಇಲ್ಲಿನ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೈದ್ಯಕೀಯ ಆಮ್ಲಜನಕ ನಿರ್ವಹಣೆಯಲ್ಲಿ ಉಂಟಾದ ಎಡವಟ್ಟಿನಿಂದ 5 ಮಂದಿ ಕೊರೊನಾ ಸೋಂಕಿತರು ಮೃತಪಟ್ಟ ಪ್ರಕರಣ ಸಂಬಂಧ ಸೋಮವಾರ ರಾತ್ರಿ ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ಸಿಬ್ಬಂದಿ ಸಭೆಯಲ್ಲಿ ಮಾತನಾಡಿದರು.

‘ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಕಳೆದೊಂದು ವಾರದಲ್ಲಿ ಸೋಂಕು ಹರಡುವಿಕೆ ಪ್ರಮಾಣ ಶೇ 14ರಷ್ಟು ಹೆಚ್ಚಳವಾಗಿದೆ. ಜತೆಗೆ ಮೂರ್ನಾಲ್ಕು ದಿನಗಳಿಂದ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಿದೆ. ಕೋವಿಡ್‌ ಸಂಕಷ್ಟದ ಪರಿಸ್ಥಿತಿಯಲ್ಲಿ ವೈದ್ಯಕೀಯ ಸಿಬ್ಬಂದಿಯ ಬೇಜವಾಬ್ದಾರಿ ಸಹಿಸುವುದಿಲ್ಲ’ ಎಂದು ಗುಡುಗಿದರು.

‘ಎಸ್‌್ಎನ್‌ಆರ್‌ ಜಿಲ್ಲಾ ಆಸ್ಪತ್ರೆ ಮತ್ತು ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕೋವಿಡ್‌ ಪರಿಸ್ಥಿತಿ ಹೇಗೆ ನಿಭಾಯಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಲು ದಿಢೀರ್ ಭೇಟಿ ಕೊಟ್ಟಿದ್ದೇನೆ. ಸೋಂಕಿತರ ಆರೈಕೆಗಾಗಿ ಅವರ ಕುಟುಂಬ ಸದಸ್ಯರಿಗೆ ಆಸ್ಪತ್ರೆಯ ಐಸಿಯು ಅಥವಾ ಜನರಲ್‌ ವಾರ್ಡ್‌ನಲ್ಲಿ ಇರಲು ಅವಕಾಶ ಕೊಡಬಾರದು’ ಎಂದು ಸೂಚಿಸಿದರು.

‘ಎಸ್‌ಎನ್‌ಆರ್‌ ಆಸ್ಪತ್ರೆಯ ಅಗತ್ಯಕ್ಕೆ ತಕ್ಕಂತೆ ವರ್ಷದ ಹಿಂದೆಯೇ ವೆಂಟಿಲೇಟರ್‌ಗಳನ್ನು ಪೂರೈಕೆ ಮಾಡಲಾಗಿದೆ. ಆದರೆ, ವೈದ್ಯಕೀಯ ಆಮ್ಲಜನಕ ಸರಬರಾಜಿನ ಲೈನ್‌ನಲ್ಲಿ ತಾಂತ್ರಿಕ ದೋಷವಿದೆ ಎಂಬ ಕಾರಣಕ್ಕೆ ವೆಂಟಿಲೇಟರ್‌ಗಳನ್ನು ಬಳಕೆ ಮಾಡುತ್ತಿಲ್ಲ. ಈ ಬಗ್ಗೆ ಮುಖ್ಯ ಎಂಜಿನಿಯರ್‌ ಜತೆ ಚರ್ಚಿಸಿ ಲೈನ್‌ನಲ್ಲಿ ದೋಷವಿದ್ದರೆ ಶೀಘ್ರವೇ ಸರಿ ಮಾಡಿಸುತ್ತೇವೆ’ ಎಂದು ಭರವಸೆ ನೀಡಿದರು.

ಆಶಾದೀಪವಾಗಿ: ‘ಆಸ್ಪತ್ರೆಯಲ್ಲಿನ 40 ವೆಂಟಿಲೇಟರ್‌ಗಳಿಂದ ಜೀವ ಉಳಿಸುವ ಕೆಲಸ ಆಗಬೇಕು. ಆಸ್ಪತ್ರೆಯಲ್ಲಿ 3 ಮಂದಿ ಅರಿವಳಿಕೆ ತಜ್ಞರು ಮತ್ತು 31 ಮಂದಿ ತಜ್ಞ ವೈದ್ಯರಿದ್ದಾರೆ. ಕೋವಿಡ್‌ನಿಂದ ಸಾವು ನೋವಿನ ಮಧ್ಯೆ ನರಳಾಡುತ್ತಿರುವ ಜನರಿಗೆ ವೈದ್ಯಕೀಯ ಸಿಬ್ಬಂದಿ ಮತ್ತು ಆಡಳಿತ ಯಂತ್ರ ಆಶಾದೀಪವಾಗಿ ಕೆಲಸ ಮಾಡಬೇಕು’ಎಂದುಹೇಳಿದರು.

‘ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯು ಗ್ರಾಮೀಣ ಭಾಗದಲ್ಲಿ ಕೋವಿಡ್‌ ನಿರ್ವಹಣೆಗಾಗಿ ಕಾರ್ಯಪಡೆ ರಚಿಸಿದ್ದಾರೆ. ಮನೆಗಳಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನ್‌ ಆಗಿರುವ ಸೋಂಕಿತರ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಅವರ ಚಿಕಿತ್ಸೆಗೆ ಔಷಧ ಮಾತ್ರೆಗಳ ಕಿಟ್‌ ಕೊಡಬೇಕು. ಆರೋಗ್ಯ ಸಿಬ್ಬಂದಿ ಖುದ್ದು ಅವರ ಮನೆಗಳಿಗೆ ಹೋಗಿ ಆರೋಗ್ಯ ತಪಾಸಣೆ ಮಾಡಬೇಕು’ ಎಂದರು.

‘ಸೋಂಕಿತರ ದೇಹಸ್ಥಿತಿ ಗಂಭೀರವಾಗಿ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ಮಾತ್ರ ಅವರನ್ನು ಸಕಾಲಕ್ಕೆ ಆಸ್ಪತ್ರೆಗೆ ದಾಖಲಿಸಬೇಕು. ಜಾಲಪ್ಪ ವೈದ್ಯಕೀಯ ಕಾಲೇಜಿನಲ್ಲಿ 1,100 ಹಾಸಿಗೆ ಸೌಲಭ್ಯವಿದೆ. ಇದರಲ್ಲಿ ಶೇ 75 ಹಾಸಿಗೆಗಳನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ನೀಡಬೇಕು. ರಾಷ್ಟ್ರೀಯ ಆರೋಗ್ಯ ಯೋಜನೆ (ಎನ್‌ಎಚ್‌ಎಂ) ಆರೋಗ್ಯ ಸಿಬ್ಬಂದಿಯನ್ನು ಕೋವಿಡ್‌ ಕರ್ತವ್ಯಕ್ಕೆ ನಿಯೋಜಿಸಬೇಕು’ ಎಂದು ಸೂಚಿಸಿದರು.

ಕ್ರಿಯಾಶೀಲರಾಗಿ: ‘ಜಿಲ್ಲೆಯಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕೋವಿಡ್‌ ಪರಿಸ್ಥಿತಿ ನಿರ್ವಹಿಸಬೇಕು. ಜನಸಾಮಾನ್ಯರಿಗೆ ಉತ್ತಮ ವೈದ್ಯಕೀಯ ಸೇವೆ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಎಸ್‌ಎನ್‌ಆರ್‌ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಸ್ಥಾನಿಕ ವೈದ್ಯಾಧಿಕಾರಿಯ ಅಮಾನತಿನಿಂದ ತೆರವಾಗಿರುವ ಹುದ್ದೆಗೆ ಬದಲಿ ಸಿಬ್ಬಂದಿಯನ್ನು ನೇಮಿಸುತ್ತೇವೆ’ ಎಂದರು.

‘ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳು ಕೆಲಸ ಮಾಡುತ್ತಿವೆ ಎಂದು ನಂಬಿದ್ದೆ. ಆದರೆ, ವೆಂಟಿಲೇಟರ್‌ಗಳು ಬಳಕೆಯಾಗದಿರುವ ಬಗ್ಗೆ ಸ್ನೇಹಿತರು ನನಗೂ ಕರೆ ಮಾಡಿ ಹೇಳಿದ ನಂತರ ವಸ್ತುಸ್ಥಿತಿ ತಿಳಿಯಿತು. ವೆಂಟಿಲೇಟರ್‌ಗಳು ಜಿಲ್ಲೆಯ ಜನರಿಗೆ ಉಪಯೋಗ ಆಗಬೇಕು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ, ಜಿ.ಪಂ ಸಿಇಒ ಎನ್‌.ಎಂ.ನಾಗರಾಜ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ತಹಶೀಲ್ದಾರ್‌ ಶೋಭಿತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಚಾರಿಣಿ, ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ವಿಜಯಕುಮಾರಿ, ವೈದ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT