ಶುಕ್ರವಾರ, ಆಗಸ್ಟ್ 12, 2022
22 °C

ಕೋವಿಡ್‌: ಮೃತ ಪೋಷಕರ ಮಕ್ಕಳಿಗೆ ಮೀಸಲಾತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ವಿ.ವಿಯ ವಿವಿಧ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಒಂದು ಸ್ಥಾನವನ್ನು ಕೋವಿಡ್‌ನಿಂದ ಮೃತಪಟ್ಟ ಪೋಷಕರ ಮಕ್ಕಳಿಗೆ ಮೀಸಲಿಡಲು ಮತ್ತು ಸಂಪೂರ್ಣ ಶುಲ್ಕ ವಿನಾಯಿತಿ ನೀಡಲು ಸಿಂಡಿಕೇಟ್‌ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ತಿಳಿಸಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ವಿ.ವಿಯಲ್ಲಿ ಮಂಗಳವಾರ (ಜೂನ್‌ 15) ನಡೆದ ಸಿಂಡಿಕೇಟ್ ಸಭೆಯು ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಜತೆಗೆ ಕೋರ್ಸ್‌ ಅವಧಿಯಲ್ಲಿ ಪಾವತಿಸುವ ಶುಲ್ಕದಲ್ಲಿ ಸಂಪೂರ್ಣ ಪೂರ್ಣ ವಿನಾಯಿತಿ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

‘2019-20ನೇ ಶೈಕ್ಷಣಿಕ ವರ್ಷದಲ್ಲಿ ವಿ.ವಿಯು ಸಾಲಬಾಧೆಯಿಂದ ಮೃತರಾದ ಪೋಷಕರ ಮಕ್ಕಳಿಗೆ ಪ್ರತಿ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಒಂದು ಸ್ಥಾನ ಮೀಸಲಿಟ್ಟಿತ್ತು. ಅದೇ ರೀತಿ ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ದೇಶದೆಲ್ಲೆಡೆ ಕೋವಿಡ್ 2ನೇ ಅಲೆಯಿಂದ ಸಾವಿರಾರು ಜನ ಮೃತಪಟ್ಟಿದ್ದಾರೆ. ಹಲವೆಡೆ ತಂದೆ ತಾಯಿ ಮೃತಪಟ್ಟು ಮಕ್ಕಳು ಅನಾಥರಾಗಿದ್ದಾರೆ. ಕುಟುಂಬದಲ್ಲಿ ಜೀವನಕ್ಕೆ ಆಸರೆಯಾಗಿದ್ದ ಪೋಷಕರೇ ಮೃತಪಟ್ಟು ಮಕ್ಕಳ ವಿದ್ಯಾಭ್ಯಾಸ ಮತ್ತು ಜೀವನ ನಿರ್ವಹಣೆಗೆ ಸಮಸ್ಯೆಯಾಗಿದೆ’ ಎಂದು ವಿಷಾದಿಸಿದರು.

‘ಪೋಷಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಆಸರೆ ನೀಡಲು ಹಲವು ಧಾರ್ಮಿಕ ಸಂಸ್ಥೆಗಳು, ಮಠಗಳು ಹಾಗೂ ಸಮಾಜ ಸೇವಾ ಸಂಸ್ಥೆಗಳು ಮುಂದೆ ಬಂದಿವೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಅರ್ಹ ಮಕ್ಕಳ ಉನ್ನತ ಶಿಕ್ಷಣ ಮುಂದುವರಿಕೆಗೆ ಕನಿಷ್ಠ ಸಹಾಯ ಮತ್ತು ಅವಕಾಶ ನೀಡುವುದು ವಿ.ವಿಯ ಕರ್ತವ್ಯ’ ಎಂದು ಹೇಳಿದರು.

‘ಆರ್ಥಿಕ ಸಮಸ್ಯೆ, ಅವಕಾಶ ಮತ್ತು ಇತರೆ ಸಮಸ್ಯೆಗಳಿಂದ ಹಲವು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮುಂದುರಿಸಲು ಸಾಧ್ಯವಾಗುವುದಿಲ್ಲ. ರಾಜ್ಯದ ಹಲವು ವಿ.ವಿಗಳು ಈ ಸಂಬಂಧ ಸೂಕ್ತ ರೀತಿಯಲ್ಲಿ ವಿವಿಧ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಸ್ಥಾನ ಮೀಸಲಿಡುವ ವಿಚಾರ ಸೇರಿದಂತೆ ಸಹಾಯ ನೀಡುವ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.