ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಎಚ್ಚರಿಕೆ ವಹಿಸದಿದ್ದರೆ ಅಪಾಯ

Last Updated 28 ಏಪ್ರಿಲ್ 2021, 16:10 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್‌ಗೆ ಬಡವ, ಶ್ರೀಮಂತರೆಂಬ ಬೇಧವಿಲ್ಲ. ಜನರು ಎಚ್ಚರಿಕೆ ವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಎಲ್ಲರೂ ಸರ್ಕಾರದ ಕೋವಿಡ್‌ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್.ರಘುನಾಥ್ ಕಿವಿಮಾತು ಹೇಳಿದರು.

ಕೋವಿಡ್ ನಿಯಂತ್ರಣ ಹಾಗೂ ಲಸಿಕಾ ಅಭಿಯಾನದ ಸಂಬಂಧ ಜಾಗೃತಿ ಮೂಡಿಸುವ ವಾಹನಕ್ಕೆ ಇಲ್ಲಿ ಬುಧವಾರ ಚಾಲನೆ ನೀಡಿ ಮಾತನಾಡಿ, ‘ಜನರು ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು’ ಎಂದು ತಿಳಿಸಿದರು.

‘ಕೋವಿಡ್‌ ಮಹಾಮಾರಿಯಿಂದ ಇಡೀ ಜಗತ್ತು ಬೆಚ್ಚಿಬಿದ್ದಿದೆ. ದೇಶದಲ್ಲೂ ಕೋವಿಡ್‌ ಅಟ್ಟಹಾಸ ಮೆರೆಯುತ್ತಿದ್ದು, ಅನೇಕರ ಜೀವ ಬಲಿ ತೆಗೆದುಕೊಳ್ಳುತ್ತಿದೆ. ಸರ್ಕಾರ ಉಚಿತವಾಗಿ ಕೋವಿಡ್ ಲಸಿಕೆ ನೀಡುತ್ತಿದೆ. ಲಸಿಕೆ ಪಡೆಯುವುದರಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಜನರು ಆತಂಕಪಡದೆ ಲಸಿಕೆ ಪಡೆಯಬೇಕು’ ಎಂದು ಸಲಹೆ ನೀಡಿದರು.

‘ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಕಡಿವಾಣ ಹಾಕಬೇಕು. ಜೀವ ಉಳಿದರೆ ಅಂತಹ ಎಷ್ಟೋ ಕಾರ್ಯಕ್ರಮ ಮಾಡಬಹುದು ಮತ್ತು ನೋಡಬಹುದು. ಜೀವವೇ ಹೋದರೆ ಹೇಗೆ ಎಂಬ ಸತ್ಯ ಅರಿತು ಜನರು ವಿವೇಕಯುತವಾಗಿ ವರ್ತಿಸಬೇಕು. ವಿನಾಕಾರಣ ರಸ್ತೆಗಿಳಿದು ಸೋಂಕು ಹೆಚ್ಚಳಕ್ಕೆ ಅವಕಾಶ ನೀಡಬಾರದು’ ಎಂದು ಮನವಿ ಮಾಡಿದರು.

‘ಆಸ್ಪತ್ರೆಗಳಲ್ಲಿ ಬೆಡ್‌ ಮತ್ತು ವೈದ್ಯಕೀಯ ಆಮ್ಲಜನಕ ಕೊರತೆ ಆಗುತ್ತಿರುವುದನ್ನು ಪ್ರತಿನಿತ್ಯ ಕೇಳುತ್ತಿದ್ದೇವೆ. ಬೆಡ್‌ ಮತ್ತು ವೈದ್ಯಕೀಯ ಆಮ್ಲಜನಕದ ಕೊರತೆ ನೀಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಸೋಂಕಿತರಿಗೆ ಬೆಡ್‌ ಅಥವಾ ಆಮ್ಲಜನಕದ ಸಮಸ್ಯೆಯಾದರೆ ಕಾನೂನು ಸೇವಾ ಪ್ರಾಧಿಕಾರದ ಸಹಾಯವಾಣಿಗೆ ಸಂಪರ್ಕಿಸಬಹುದು’ ಎಂದರು.

ಜಾಗೃತಿ ಮೂಡಿಸಿ: ‘ಕೊರೊನಾ ತಡೆಗಟ್ಟುವುದು ಜನರ ಕೈಯಲ್ಲೇ ಇದೆ. ನಾವೆಲ್ಲಾ ಜನರಿಗೆ ಜಾಗೃತಿ ಮೂಡಿಸಿ ಅಂತರ ಕಾಪಾಡುವಂತೆ ತಿಳಿಸೋಣ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್, ಪ್ರಧಾನ ಕಾರ್ಯದರ್ಶಿ ರಘುಪತಿಗೌಡ, ಸರ್ಕಾರಿ ಅಭಿಯೋಜಕ ಎಂ.ಪಿ.ನಾರಾಯಣಸ್ವಾಮಿ, ವಕೀಲರಾದ ಕೆ.ಆರ್.ಧನರಾಜ್, ಉಸ್ಮಾನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT