ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರಿಗೆ ಕೈಗಾರಿಕೆಯಲ್ಲೇ ಕೋವಿಡ್ ಪರೀಕ್ಷೆ

ಇಟಿಸಿಎಂ ಆಸ್ಪತ್ರೆಗೆ ಕೋವಿಡ್‌ ಲಸಿಕೆ– ಪರೀಕ್ಷಾ ಕೇಂದ್ರ ಸ್ಥಳಾಂತರ: ಜಿಲ್ಲಾಧಿಕಾರಿ ಸೂಚನೆ
Last Updated 7 ಮೇ 2021, 13:24 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾ ಕೇಂದ್ರದ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಜನದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಕೋವಿಡ್‌ ತಪಾಸಣೆ ಮತ್ತು ಲಸಿಕೆ ನೀಡಿಕೆ ಕೇಂದ್ರವನ್ನು ಇಟಿಸಿಎಂ ಆಸ್ಪತ್ರೆ ಆವರಣಕ್ಕೆ ಗುರುವಾರ ಸ್ಥಳಾಂತರಿಸಲಾಗಿದ್ದು, ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಸ್ಥಳಾಂತರಗೊಂಡ ಕೇಂದ್ರಗಳನ್ನು ಪರಿಶೀಲಿಸಿದರು.

ಜಿಲ್ಲಾಡಳಿತವು ಹಿಂದಿನ ವರ್ಷವೇ ಎಸ್‌ಎನ್‌ಆರ್‌ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಿತ್ತು. ಜತೆಗೆ ಕೊರೊನಾ ಸೋಂಕಿತರ ವಾರ್ಡ್‌ನ ಸಮೀಪವೇ ಕೋವಿಡ್‌ ಲಸಿಕೆ ನೀಡಿಕೆ ಮತ್ತು ತಪಾಸಣಾ ಕೇಂದ್ರ ತೆರೆಯಲಾಗಿತ್ತು. ಲಸಿಕೆ ಪಡೆಯಲು ಮತ್ತು ಕೋವಿಡ್‌ ತಪಾಸಣೆಗಾಗಿ ಪ್ರತಿನಿತ್ಯ ಸಾವಿರಾರು ಮಂದಿ ಎಸ್‌ಎನ್‌ಆರ್ ಆಸ್ಪತ್ರೆಗೆ ಬರುತ್ತಿದ್ದರಿಂದ ಜನದಟ್ಟಣೆ ಹೆಚ್ಚಿತ್ತು.

ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಜನದಟ್ಟಣೆಯಿಂದಾಗಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಳವಾಗುವ ಆತಂಕದ ಕಾರಣಕ್ಕೆ ಕೋವಿಡ್ ತಪಾಸಣೆ ಮತ್ತು ಲಸಿಕೆ ನೀಡಿಕೆ ಕೇಂದ್ರಗಳನ್ನು ಇಟಿಸಿಎಂ ಆಸ್ಪತ್ರೆ ಆವರಣಕ್ಕೆ ಸ್ಥಳಾಂತರಿಸಿ ಅಲ್ಲಿಯೇ ಲಸಿಕೆ ನೀಡಿಕೆ ಹಾಗೂ ತಪಾಸಣಾ ಕಾರ್ಯ ಆರಂಭಿಸಲಾಗಿದೆ.

ಈ ಬಗ್ಗೆ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿಯು, ವಿಸ್ಟ್ರಾನ್‌ ಕಂಪನಿ ಸೇರಿದಂತೆ ತಾಲ್ಲೂಕಿನ ನರಸಾಪುರ ಮತ್ತು ವೇಮಗಲ್‌ ಕೈಗಾರಿಕಾ ಪ್ರದೇಶದಲ್ಲಿನ ವಿವಿಧ ಕಂಪನಿಗಳ ನೂರಾರು ಕಾರ್ಮಿಕರು ಕೋವಿಡ್‌ ಪರೀಕ್ಷೆಗಾಗಿ ತಂಡೋಪತಂಡವಾಗಿ ಇಟಿಸಿಎಂ ಆಸ್ಪತ್ರೆ ಕೇಂದ್ರಕ್ಕೆ ಬಂದಿರುವುದನ್ನು ಕಂಡು ಅಸಮಾಧಾನಗೊಂಡರು.

ವಿಸ್ಟ್ರಾನ್‌ ಕಂಪನಿ ಮಾನವ ಸಂಪನ್ಮೂಲ ವಿಭಾಗದ ಪ್ರತಿನಿಧಿಗಳಿಗೆ ಕರೆ ಮಾಡಿದ ಜಿಲ್ಲಾಧಿಕಾರಿ, ‘ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ನೂರಾರು ಕಾರ್ಮಿಕರನ್ನು ಒಂದೇ ಸಲ ಕೋವಿಡ್‌ ಪರೀಕ್ಷೆಗೆ ಕಳುಹಿಸಿದರೆ ಹೇಗೆ? ತಮ್ಮ ಕಂಪನಿ ಕಾರ್ಮಿಕರನ್ನು ಮೊದಲು ವಾಪಸ್‌ ಕರೆಸಿಕೊಳ್ಳಿ’ ಎಂದು ಎಚ್ಚರಿಕೆ ನೀಡಿದರು.

‘ವೇಮಗಲ್ ಮತ್ತು ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಕೈಗಾರಿಕೆಗಳ ಆಡಳಿತ ಮಂಡಳಿಯವರು ಕಾರ್ಮಿಕರನ್ನು ಕೋವಿಡ್ ಪರೀಕ್ಷೆಗಾಗಿ ಎಸ್‍ಎನ್‍ಆರ್ ಆಸ್ಪತ್ರೆಗೆ ಕಳುಹಿಸಬಾರದು. ಕೈಗಾರಿಕೆಗಳ ಕಾರ್ಮಿಕರು ಯಾರೇ ಬಂದರೂ ವಾಪಸ್ ಕಳುಹಿಸಬೇಕು. ಕಾರ್ಮಿಕರಿಗೆ ಕೈಗಾರಿಕೆಗಳಲ್ಲೇ ಕೋವಿಡ್ ಪರೀಕ್ಷೆ ಮಾಡಬೇಕು’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಶೇ 50ರಷ್ಟು ಹಾಸಿಗೆ: ‘ಕೋವಿಡ್‌ ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಹೀಗಾಗಿ ಇಟಿಸಿಎಂ ಆಸ್ಪತ್ರೆಯಲ್ಲಿ 2 ಲಸಿಕಾ ಕೇಂದ್ರ ತೆರೆಯಿರಿ. ಕೋವಿಡ್‌ ಪರೀಕ್ಷಾ ಕೇಂದ್ರವನ್ನು ಮಹಿಳಾ ಸಮಾಜ ಪ್ರೌಢ ಶಾಲಾ ಆವರಣದಲ್ಲಿ ತೆರೆಯಿರಿ’ ಎಂದು ತಿಳಿಸಿದರು.

‘ಜಿಲ್ಲಾ ಕೇಂದ್ರದ ಮುನ್ಸಿಪಲ್ ಆಸ್ಪತ್ರೆ, ಕ್ಲಾಕ್‌ಟವರ್ ಬಳಿಯ ಸಮುದಾಯ ಆರೋಗ್ಯ ಕೇಂದ್ರ, ಗಾಂಧಿನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಕೋವಿಡ್‌ ಲಸಿಕೆ ನೀಡಲಾಗುತ್ತಿದೆ. ಜನರು ಲಸಿಕೆ ಪಡೆಯಲು ಒಂದೆಡೆ ಗುಂಪುಗೂಡುವ ಬದಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಜಿಲ್ಲೆಯಲ್ಲಿ ದಿನದಿಂದ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಸೋಂಕಿತರ ಚಿಕಿತ್ಸೆಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಶೇ 50ರಷ್ಟು ಹಾಸಿಗೆ ಕಾಯ್ದಿರಿಸಿದ್ದು, ಸರ್ಕಾರಿ ಆಸ್ಪತ್ರೆಗಳಿಂದ ಶಿಫಾರಸ್ಸು ಆಗಿ ಹೋದ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕು’ ಎಂದರು.

ಬೀಗಮುದ್ರೆ: ‘ಕೋವಿಡ್‌ ಮಾರ್ಗಸೂಚಿ ಪಾಲಿಸದ ಅಂಗಡಿ ಮಾಲೀಕರ ವಿರುದ್ಧ ದೂರು ದಾಖಲಿಸಿ ಅಂಗಡಿಗಳಿಗೆ ಬೀಗಮುದ್ರೆ ಹಾಕಲಾಗಿದೆ. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುತ್ತಿದೆ. ಪೊಲೀಸ್‌ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಕೋವಿಡ್‌ ಮಾರ್ಗಸೂಚಿ ಪರಿಣಾಮಕಾರಿ ಅನುಷ್ಠಾನಕ್ಕೆ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಕೊರೊನಾ ಸೋಂಕಿತರಿಗೆ ಬೆಡ್‌ ಕಲ್ಪಿಸುವ ವಿಚಾರದಲ್ಲಿ ಒತ್ತಡ ಹೆಚ್ಚಿದೆ. ಬೆಂಗಳೂರು ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಸೋಂಕಿತರು ಚಿಕಿತ್ಸೆಗಾಗಿ ಜಿಲ್ಲೆಗೆ ಬರುತ್ತಿದ್ದಾರೆ. ಇದರ ತಡೆಗೆ ಗಮನ ಹರಿಸಲಾಗುತ್ತಿದೆ’ ಎಂದು ವಿವರಿಸಿದರು.

ತಹಶೀಲ್ದಾರ್ ಶೋಭಿತಾ, ಎಸ್‍ಎನ್‍ಆರ್ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಗದೀಶ್, ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ವಿಜಯಕುಮಾರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT