ಭಾನುವಾರ, ಮೇ 22, 2022
22 °C

ಕೋವಿಡ್ ಲಸಿಕೆ: ಆತಂಕ ಬೇಡ

ಪ್ರಜಾವಾಣಿ ವಾರ್ತೆ‌‌ Updated:

ಅಕ್ಷರ ಗಾತ್ರ : | |

ಕೋಲಾರ: ‘ಭಾರತದ ವೈದ್ಯರು ದೇಶವನ್ನು ಕೊರೊನಾ ಮುಕ್ತ ರಾಷ್ಟ್ರವಾಗಿಸುವ ನಿಟ್ಟಿನಲ್ಲಿ ಕೋವಿಡ್‌ಗೆ ಸ್ವದೇಶಿ ಲಸಿಕೆ ಕಂಡುಹಿಡಿದಿದ್ದಾರೆ. ಈ ಲಸಿಕೆಗಳನ್ನು ಪಡೆಯುವುದರಿಂದ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.

ಇಲ್ಲಿ ಸೋಮವಾರ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆ ಪಡೆದ ನಂತರ ಮಾತನಾಡಿದ ಅವರು, ‘ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ದೇಸಿ ಲಸಿಕೆಗಳಾಗಿವೆ. ಜನರು ಆತಂಕಪಡದೆ ಈ ಲಸಿಕೆಗಳನ್ನು ಪಡೆಯಬಹುದು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಶೇ 65ರಷ್ಟು ಲಸಿಕೆ ಗುರಿ ಸಾಧನೆಯಾಗಿದೆ. ಲಸಿಕೆ ಪಡೆದವರ ಆರೋಗ್ಯದ ಮೇಲೆ ಈವರೆಗೆ ಯಾವುದೇ ಅಡ್ಡಪರಿಣಾಮವಾಗಿಲ್ಲ. ಆದ ಕಾರಣ ಸಾರ್ವಜನಿಕರು ಕೊರೊನಾ ಲಸಿಕೆ ವಿಚಾರವಾಗಿ ಯಾವುದೇ ವದಂತಿಗೆ ಕಿವಿಗೊಡಬಾರದು’ ಎಂದು ಕಿವಿಮಾತು ಹೇಳಿದರು.

‘ಸರ್ಕಾರದ ಮಾರ್ಗಸೂಚಿಯಂತೆ ನೊಂದಾಯಿತ ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿಗೆ ಕೋವಿಡ್‌ ಲಸಿಕೆ ನೀಡಲಾಗುತ್ತಿದೆ. ಸಿಬ್ಬಂದಿ ಯಾವುದೇ ಭಯಯಿಲ್ಲದೆ ಲಸಿಕೆ ಪಡೆಯಬಹುದು. ಲಸಿಕೆ ಇಲ್ಲದಿದ್ದಾಗ ಲಸಿಕೆ ಯಾವಾಗ ಬರುತ್ತದೆ ಎಂದು ಕುತೂಹಲದಿಂದ ಕಾಯುತ್ತಿದ್ದೆವು. ಈಗ ಲಸಿಕೆ ಬಂದ ನಂತರ ಪಡೆಯಲು ಹಿಂಜರಿಕೆ ಏಕೆ?’ ಎಂದು ಪ್ರಶ್ನಿಸಿದರು.

‘ಸಾವಿರಾರು ಜನರ ಮೇಲೆ ಲಸಿಕೆಯನ್ನು ಪ್ರಯೋಗ ಮಾಡಿ ಯಶಸ್ವಿಯಾದ ನಂತರ ನೀಡಲಾಗುತ್ತಿದೆ. ಪ್ರತಿ ವ್ಯಕ್ತಿ 2 ಡೋಸ್‌ ಲಸಿಕೆ ಪಡೆಯಬೇಕು. ಮೊದಲ ಡೋಸ್ ಪಡೆದ 28 ದಿನಗಳ ನಂತರ 2ನೇ ಡೋಸ್‌ ನೀಡಲಾಗುತ್ತದೆ’ ಎಂದು ವಿವರಿಸಿದರು.

‘ಹಾಲುಣಿಸುವ ತಾಯಂದಿರು, ಗರ್ಭಿಣಿಯರು, ಶ್ವಾಸಕೋಶ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವವರು ಹಾಗೂ 18 ವರ್ಷಕ್ಕಿಂತ ಕೆಳಗಿನವರಿಗೆ ಲಸಿಕೆ ಕೊಡುವುದಿಲ್ಲ’ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು