ಸೋಮವಾರ, ಜನವರಿ 24, 2022
28 °C

ಮಕ್ಕಳಿ ಕೋವಿಡ್‌ ಲಸಿಕೆ; ಮೊದಲ ದಿನ 10 ಸಾವಿರ ವಿದ್ಯಾರ್ಥಿಗಳಿಗೆ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯಲ್ಲಿ 15 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕುವ ಅಭಿಯಾನಕ್ಕೆ ಸೋಮವಾರ ಚಾಲನೆ ಸಿಕ್ಕಿದ್ದು, ಮೊದಲ ದಿನ 10 ಸಾವಿರ ಮಂದಿಗೆ ಲಸಿಕೆ ಹಾಕಲಾಯಿತು. ಇಡೀ ದಿನ ಲಸಿಕೆ ನೀಡಿಕೆ ಪ್ರಕ್ರಿಯೆ ಯಾವುದೇ ಸಮಸ್ಯೆಯಿಲ್ಲದೆ ಸುಸೂತ್ರವಾಗಿ ನಡೆಯಿತು.

ಮಕ್ಕಳಿಗೆ ಕೊರೊನಾ ಸೋಂಕು ತಗುಲುವುದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಲಸಿಕೆ ಅಭಿಯಾನ ಆರಂಭಿಸಿದೆ. ಇದರ ಭಾಗವಾಗಿ ಆರೋಗ್ಯ ಇಲಾಖೆಯು ಸಾಕಷ್ಟು ಸಿದ್ಧತೆಯೊಂದಿಗೆ ಜಿಲ್ಲೆಯಾದ್ಯಂತ ಏಕಕಾಲಕ್ಕೆ ಲಸಿಕೆ ವಿತರಣೆ ಪ್ರಕ್ರಿಯೆ ಆರಂಭಿಸಿತು. ಪ್ರಮುಖ ಕಾಲೇಜುಗಳಿಗೆ ತೆರಳಿದ ಆರೋಗ್ಯ ಇಲಾಖೆ ಸಿಬ್ಬಂದಿಯು ಮಕ್ಕಳಿಗೆ ಸ್ಥಳದಲ್ಲೇ ಲಸಿಕೆ ನೀಡಿದರು.

ಪ್ರತಿ ಕಾಲೇಜಿನ ಲಸಿಕಾ ಕೇಂದ್ರದಲ್ಲಿ ನಿರೀಕ್ಷಣಾ ಕೊಠಡಿ, ಲಸಿಕೆ ಕೊಠಡಿ ಮತ್ತು ನಿಗಾ ಕೊಠಡಿ ಸೇರಿದಂತೆ 3 ಕೊಠಡಿ ಮೀಸಲಿಡಲಾಗಿತ್ತು. ಪ್ರತಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸಿದರು. ಸಿಬ್ಬಂದಿಯು ಫಲಾನುಭವಿ ವಿದ್ಯಾರ್ಥಿಗಳ ದೇಹದ ಉಷ್ಣತೆ ಪರಿಶೀಲಿಸಿದರು.

ವಿದ್ಯಾರ್ಥಿಗಳು ಸಾಲಿನಲ್ಲಿ ನಿಂತು ಲಸಿಕೆ ಪಡೆದುಕೊಂಡರು. ಲಸಿಕೆ ನೀಡಿಕೆ ಬಳಿಕ ಅವರನ್ನು ಅರ್ಧ ತಾಸು ನಿಗಾ ಕೊಠಡಿಯಲ್ಲಿ ಕೂರಿಸಲಾಯಿತು. ಲಸಿಕೆ ಪಡೆದವರಿಗೆ ಯಾವುದೇ ಅಡ್ಡ ಪರಿಣಾಮವಾಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡ ನಂತರ ಕಳುಹಿಸಲಾಯಿತು. ಲಸಿಕೆ ಪಡೆದ ವಿದ್ಯಾರ್ಥಿಗಳು ಪ್ರತಿನಿತ್ಯದಂತೆ ಮಧ್ಯಾಹ್ನ ತರಗತಿಗೆ ಹಾಜರಾದರು.

ಕೋವಿಡ್ ಲಸಿಕೆ ನೀಡಿಕೆಯ ಎಲ್ಲಾ ಹಂತಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು. ದಾಖಲಾತಿ ಪರಿಶೀಲನೆ, ಹೆಸರು ನೋಂದಣಿ, ಲಸಿಕೆ ವಿತರಣೆ ಸೇರಿದಂತೆ ಎಲ್ಲಾ ಮಾಹಿತಿಯನ್ನು ಕೇಂದ್ರ ಸರ್ಕಾರದ ಕೋ–ವಿನ್‌ ತಂತ್ರಾಂಶದಲ್ಲಿ (ಪೋರ್ಟಲ್‌) ದಾಖಲಿಸಲಾಯಿತು.

‘ಜಿಲ್ಲೆಯಲ್ಲಿ ಮೊದಲ ದಿನ 5 ಸಾವಿರ ಮಕ್ಕಳಿಗೆ ಲಸಿಕೆ ನೀಡುವ ಗುರಿಯಿತ್ತು. ಅಂತಿಮವಾಗಿ ಸುಮಾರು 10 ಸಾವಿರ ಮಕ್ಕಳಿಗೆ ಲಸಿಕೆ ಹಾಕಲಾಯಿತು. ಮಕ್ಕಳು ಸ್ವಪ್ರೇರಣೆಯಿಂದ ಲಸಿಕೆ ಪಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ವಿಜಯಕುಮಾರಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು