ಸೋಮವಾರ, ನವೆಂಬರ್ 18, 2019
24 °C
ಆರ್‌ಸಿಇಪಿ ಒಪ್ಪಂದ: ಜಿಲ್ಲೆಯಲ್ಲಿ ವ್ಯಾಪಕ ವಿರೋಧ

ಹಸುಗಳ ಮೆರವಣಿಗೆ: ರಸ್ತೆಗಿಳಿದು ಪ್ರತಿಭಟನೆ

Published:
Updated:
Prajavani

ಕೋಲಾರ: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದಕ್ಕೆ (ಆರ್‌ಸಿಇಪಿ) ಜಿಲ್ಲೆಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆಯ ಬಿಸಿ ಹೆಚ್ಚಿದೆ.

ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕದಂತೆ ಒತ್ತಾಯಿಸಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಇಲ್ಲಿ ಸೋಮವಾರ ರಸ್ತೆಗಿಳಿದು ಬೃಹತ್ ಪ್ರತಿಭಟನೆ ಮಾಡಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದರು.

ಕೊಂಡರಾಜನಹಳ್ಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಸುಗಳೊಂದಿಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ‘ಆರ್‌ಸಿಇಪಿ ಒಪ್ಪಂದವು ರೈತರ ಪಾಲಿಗೆ ಮರಣಶಾಸನ. ಹೀಗಾಗಿ ಈ ಒಪ್ಪಂದಕ್ಕೆ ಯಾವುದೇ ಕಾರಣಕ್ಕೂ ಸಹಿ ಹಾಕಬಾರದು’ ಎಂದು ಆಗ್ರಹಿಸಿದರು.

‘ಕೇಂದ್ರವು ವಿದೇಶಿ ಕೈಗಾರಿಕೋದ್ಯಮಿಗಳ ಪರ ಕಾನೂನು ಜಾರಿಗೆ ತಂದು ದೇಶದ ರೈತರು, ಕೃಷಿ ಕಾರ್ಮಿಕರನ್ನು ಬೀದಿಪಾಲು ಮಾಡಲು ಹೊರಟಿದೆ. ಕೇಂದ್ರವು ತೆರಿಗೆ ರಹಿತವಾಗಿ ವಿದೇಶಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಆಮದಿಗೆ ಅವಕಾಶ ನೀಡಿದರೆ ದೇಶದ ಹೈನೋದ್ಯಮಕ್ಕೆ ದೊಡ್ಡ ಪೆಟ್ಟು ಬೀಳುತ್ತದೆ’ ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಆತಂಕ ವ್ಯಕ್ತಪಡಿಸಿದರು.

‘ಬಹುರಾಷ್ಟ್ರೀಯ ಕಂಪನಿಗಳ ಪರವಾದ ಜಾಗತೀಕರಣ ನೀತಿಯಿಂದ ದೇಶದ ಕೃಷಿ ಹಾಗೂ ಕೃಷಿ ಸಂಬಂಧಿ ಉಪ ಕಸುಬುಗಳು ನಿರ್ನಾಮವಾಗಿವೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಮುಚ್ಚುವ ಸ್ಥಿತಿಗೆ ತಲುಪಿವೆ. ದೇಶದಲ್ಲಿ ಪಕ್ಷಾತೀತವಾಗಿ ಆರ್‌ಸಿಇಪಿ ಒಪ್ಪಂದಕ್ಕೆ ವಿರೋಧ ವ್ಯಕ್ತವಾಗಿದೆ. ಆದರೂ ಕೇಂದ್ರವು ಒಪ್ಪಂದದ ಸಾಧಕ ಬಾಧಕದ ಬಗ್ಗೆ ಚರ್ಚಿಸಿದೆ ತರಾತುರಿಯಲ್ಲಿ ಸಹಿ ಹಾಕಲು ಮುಂದಾಗಿದೆ’ ಎಂದು ಕಿಡಿಕಾರಿದರು.

‘ರಾಜ್ಯದಲ್ಲಿ 1 ಲೀಟರ್ ಹಾಲು ಉತ್ಪಾದನೆಗೆ ₹ 39 ವೆಚ್ಚವಾಗುತ್ತದೆ. ಸರ್ಕಾರದ ಪೋತ್ಸಾಹಧನ ಸೇರಿದಂತೆ ಲೀಟರ್ ಹಾಲಿಗೆ ₹ 28 ಖರೀದಿ ದರವಿದೆ. ಅಮೆರಿಕ, ಚೀನಾ, ವಿಯಟ್ನಾಂ ದೇಶದಲ್ಲಿ ಭಾರತಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ ಮತ್ತು ಆ ದೇಶಗಳಲ್ಲಿ ಉತ್ಪಾದನಾ ವೆಚ್ಚ ಸಹ ಕಡಿಮೆಯಿದೆ’ ಎಂದು ಹೇಳಿದರು.

ಬಿಕ್ಕಟ್ಟು ಸೃಷ್ಟಿ: ‘ಎರಡೂವರೆ ದಶಕದಿಂದ ಅನುಸರಿಸುತ್ತಾ ಬಂದ ಮುಕ್ತ ವ್ಯಾಪಾರ ಆರ್ಥಿಕ ನೀತಿಯಿಂದ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ವಿದೇಶಿ ಕೃಷಿ ಹಾಗೂ ಕೈಗಾರಿಕಾ ಉತ್ಪನ್ನಗಳ ದಾಳಿಗಳಿಂದ ಭಾರತದಲ್ಲಿ ಕೃಷಿ ಹಾಗೂ ಸಣ್ಣ ಕೈಗಾರಿಕೆಗಳು ನಲುಗಿ ಹೋಗಿವೆ. ಕೃಷಿ ಬಿಕ್ಕಟ್ಟು ತಡೆಯಲಾಗದೆ ಪ್ರತಿ ಅರ್ಧ ಗಂಟೆಗೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ’ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.

‘ಹೈನು ಉತ್ಪನ್ನಗಳನ್ನು ಮುಕ್ತ ವ್ಯಾಪಾರ ಒಪ್ಪಂದದ ವ್ಯಾಪ್ತಿಗೆ ತರುವ ನಿರ್ಧಾರ ಕೈಬಿಡಬೇಕು. ಸೂಕ್ಷ್ಮ ವಲಯಗಳಾದ ಕೃಷಿ ಮತ್ತು ಹೈನೋದ್ಯಮವನ್ನು ಮುಕ್ತ ವ್ಯಾಪಾರ ಒಪ್ಪಂದಿಂದ ದೂರವಿಡಬೇಕು. ಈ ಸಂಬಂಧ ಸಂಸದರು ಅಧಿವೇಶನದಲ್ಲಿ ಧ್ವನಿ ಎತ್ತಬೇಕು. ಮೋದಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಂಸದರ ಸಭೆ ಕರೆ ಕರೆದು ಸಮಗ್ರ ಚರ್ಚೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಚೌಡೇಶ್ವರಿ, ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ವಿ.ಗೀತಾ, ರೈತ ಸಂಘ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಳಿನಿ, ರಾಜ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ಕೆಪಿಆರ್ಎಸ್‌ ಪ್ರಧಾನ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್, ಕೆಪಿಆರ್‌ಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎನ್.ಶ್ರೀರಾಮ್ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)