ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಬೆಳೆ ಸಾಲ: ಅಕ್ರಮ ನಡೆದಿದ್ದರೆ ರಾಜೀನಾಮೆ

ಟೀಕಾಕಾರರಿಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಸವಾಲು
Last Updated 28 ಜೂನ್ 2020, 14:41 IST
ಅಕ್ಷರ ಗಾತ್ರ

ಕೋಲಾರ: ‘ರಾಜಕೀಯ ದುರುದ್ದೇಶಕ್ಕೆ ಯಾರೂ ಡಿಸಿಸಿ ಬ್ಯಾಂಕ್ ವಿರುದ್ಧ ಆರೋಪ ಮಾಡಬಾರದು. ಹಣಕಾಸು ವ್ಯವಹಾರದ ಸಂಬಂಧ ಅನುಮಾನವಿದ್ದರೆ ನೇರವಾಗಿ ಬ್ಯಾಂಕ್‌ಗೆ ಬಂದು ಪರಿಹರಿಸಿಕೊಳ್ಳಿ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಟೀಕಾಕಾರರಿಗೆ ಆಹ್ವಾನ ನೀಡಿದರು.

ಇಲ್ಲಿ ಭಾನುವಾರ ಡಿಸಿಸಿ ಬ್ಯಾಂಕ್‌ ಹಾಗೂ ದಕ್ಷಿಣ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ₹ 1.80 ಕೋಟಿ ಮರು ಬೆಳೆ ಸಾಲದ ಚೆಕ್‌ ವಿತರಿಸಿ ಮಾತನಾಡಿದರು.

‘ಬ್ಯಾಂಕ್ ದಿವಾಳಿಯಾಗಿ ರೈತರು, ಮಹಿಳೆಯರು ಸಾಲ ಸೌಲಭ್ಯದಿಂದ ವಂಚಿತರಾಗಿದ್ದರು. ಬ್ಯಾಂಕ್‌ಗೆ ಮರು ಜೀವ ನೀಡಿ ಆರ್ಥಿಕವಾಗಿ ಸದೃಢಗೊಳಿಸಿದ್ದೇವೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಲಕ್ಷಾಂತರ ಮಹಿಳೆಯರು ಮತ್ತು ರೈತರಿಗೆ ಬ್ಯಾಂಕ್, ಸೊಸೈಟಿಗಳ ಮೂಲಕ ಹಣಕಾಸು ನೆರವು ನೀಡಿದ್ದೇವೆ. ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದೇವೆ’ ಎಂದರು.

‘ವಿನಾಕಾರಣ ಸಹಕಾರ ಇಲಾಖೆ, ಆರ್‌ಸಿಎಸ್‌, ಅಫೆಕ್ಸ್ ಬ್ಯಾಂಕ್‌ಗೆ ಹೋಗಿ ದೂರು ಕೊಟ್ಟು ಜಿಲ್ಲೆಯ ಘನತೆ ಮಣ್ಣು ಪಾಲು ಮಾಡಬೇಡಿ. ಬ್ಯಾಂಕ್‌ನ ಹಣಕಾಸು ವ್ಯವಹಾರದಲ್ಲಿ ಲೋಪವಾಗಿದ್ದರೆ, ವಿರೋಧಿಗಳು ಆರೋಪಿಸಿರುವಂತೆ ಕೆರೆ ಕುಂಟೆಗೆ ಸಾಲ, ಬೇನಾಮಿ ಸಾಲ ಕೊಟ್ಟಿದ್ದರೆ ದಾಖಲೆಪತ್ರ ಸಮೇತ ಬ್ಯಾಂಕ್‌ಗೆ ಬಂದು ಸತ್ಯಾಸತ್ಯತೆ ಪರಿಶೀಲಿಸಿ. ಅಕ್ರಮ ನಡೆದಿದ್ದರೆ ಅಧ್ಯಕ್ಷಗಾದಿಗೆ ರಾಜೀನಾಮೆ ಕೊಡುತ್ತೇನೆ’ ಎಂದು ಸವಾಲು ಹಾಕಿದರು.

ಧಕ್ಕೆ ತರಬೇಡಿ: ‘ಸುಳ್ಳು ದೂರು ಕೊಟ್ಟು ಬ್ಯಾಂಕ್‌ನ ಗೌರವಕ್ಕೆ ಧಕ್ಕೆ ತರಬೇಡಿ. ಬಡವರು ಮತ್ತು ಮಹಿಳೆಯರಿಗೆ ಸಿಗುತ್ತಿರುವ ಸಾಲ ಸೌಲಭ್ಯಕ್ಕೆ ಕುತ್ತು ತರಬೇಡಿ. ರೈತರಿಗೆ ಸಾವಿರಾರು ಕೋಟಿ ಸಾಲದ ಅಗತ್ಯವಿದೆ. ವಿರೋಧಿಗಳು ಆರೋಪ ಮಾಡುವುದನ್ನು ಬಿಟ್ಟು ಬ್ಯಾಂಕ್‌ಗೆ ಶಕ್ತಿ ತುಂಬಬೇಕು’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮಣ್ಣ ಮನವಿ ಮಾಡಿದರು.

ಕಸಬಾ ದಕ್ಷಿಣ ಎಸ್‍ಎಫ್‌ಸಿಎಸ್‌ ಅಧ್ಯಕ್ಷ ಶ್ರೀನಿವಾಸಪ್ಪ, ಉಪಾಧ್ಯಕ್ಷ ಶ್ರೀನಿವಾಸ್, ಸಿಇಒ ವೆಂಕಟೇಶ್, ನಿರ್ದೇಶಕರಾದ ಡಿ.ವೆಂಕಟೇಶ್, ಶ್ರೀನಿವಾಸ್, ವೆಂಕಟೇಶಪ್ಪ, ಶ್ರೀರಾಮರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT