ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ನಷ್ಟ: ಪರಿಹಾರಕ್ಕೆ ಕೆಪಿಆರ್‌ಎಸ್‌ ಒತ್ತಾಯ

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ: ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ
Last Updated 26 ಮೇ 2022, 13:46 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ಆಗಿರುವ ಬೆಳೆ ನಷ್ಟಕ್ಕೆ ಪರಿಹಾರ ಕೊಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್) ಸದಸ್ಯರು ಇಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.

‘ಜಿಲ್ಲೆಯು ಕೃಷಿ ಚಟುವಟಿಕೆಗೆ ಹೆಸರುವಾಸಿಯಾಗಿದೆ. ಕೋವಿಡ್‌ ಹಾಗೂ ಲಾಕ್‌ಡೌನ್‌ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ರೈತರು ನಷ್ಟ ಅನುಭವಿಸಿದ್ದರು. ಇದೀಗ ಬಿರುಗಾಳಿ ಸಹಿತ ಧಾರಾಕಾರ ಮಳೆಯಿಂದ ಟೊಮೆಟೊ, ಮಾವು ಸೇರಿದಂತೆ ತೋಟಗಾರಿಕೆ ಬೆಳೆಗಳು ಸಂರ್ಪೂಣ ನಾಶವಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಪ್ರತಿಭಟನಾಕಾರರು ಹೇಳಿದರು.

‘ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಅನಾಹುತ ಸಂಭವಿಸಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಜಿಲ್ಲೆಯತ್ತ ತಿರುಗಿಯೂ ನೋಡಿಲ್ಲ. ರೈತರ ಸಮಸ್ಯೆಗೆ ಸ್ಪಂದಿಸದೆ ನಾಪತ್ತೆಯಾಗಿರುವ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ’ ಎಂದು ಕೆಪಿಆರ್‌ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್‌.ಸೂರ್ಯನಾರಾಯಣ ಕಿಡಿಕಾರಿದರು.

‘ಹಣ್ಣು, ತರಕಾರಿ ಹಾಗೂ ಹೂವಿನ ಬೆಳೆಯಲ್ಲಿ ಕೋಲಾರ ಜಿಲ್ಲೆ ಪ್ರಮುಖ ಸ್ಥಾನ ಪಡೆದಿದೆ. ನದಿ, ನಾಲೆಯಂತಹ ಮೇಲ್ಮೈ ನೀರಿನ ಮೂಲಗಳು ಜಿಲ್ಲೆಯಲ್ಲಿ ಇಲ್ಲದಿದ್ದರೂ ರೈತರು ಮಳೆ ಅಶ್ರಯಿಸಿ ಮತ್ತು ಅಂತರ್ಜಲ ಬಳಸಿಕೊಂಡು ಕೃಷಿ ನಿರ್ವಹಣೆ ಮಾಡುತ್ತಿದ್ದಾರೆ. ನೀರಿನ ಸಮಸ್ಯೆಗೆ ಎದೆಗುಂದದೆ ಬೆಳೆ ಬೆಳೆದು ಮಾದರಿಯಾಗಿದ್ದಾರೆ. ಆದರೆ, ಅತಿವೃಷ್ಟಿಯಿಂದ ಕೋಟ್ಯಂತರ ರೂಪಾಯಿ ಬೆಳೆ ನಷ್ಟವಾಗಿದೆ’ ಎಂದು ತಿಳಿಸಿದರು.

ಕುಸಿದ ಆಡಳಿತ ಯಂತ್ರ: ‘ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಮತ್ತು ಟೊಮೆಟೊ ಬೆಳೆಯಲಾಗುತ್ತದೆ. ಜಿಲ್ಲೆಯಿಂದ ಹೊರ ರಾಜ್ಯ ಮತ್ತು ವಿದೇಶಕ್ಕೆ ಮಾವು, ಟೊಮೆಟೊ ರಫ್ತಾಗುತ್ತದೆ. ಆದರೆ, ಮಳೆಯು ಟೊಮೆಟೊ ಹಾಗೂ ಮಾವು ಬೆಳೆಗಾರರಿಗೆ ದೊಡ್ಡ ಪೆಟ್ಟು ಕೊಟ್ಟಿದೆ. ಸಚಿವರ ಬೇಜವಾಬ್ದಾರಿಯಿಂದ ಜಿಲ್ಲೆಯಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು, ರೈತರು ಸಮಸ್ಯೆ ಅನುಭವಿಸುವಂತಾಗಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಕೊಯ್ಲಿಗೆ ಬಂದಿದ್ದ ಮಾವು ಮಳೆಯಿಂದ ಹಾಳಾಗಿದೆ. ಮಳೆ ಮತ್ತು ತೇವಾಂಶ ಹೆಚ್ಚಳದಿಂದ ಟೊಮೆಟೊ, ಕ್ಯಾಪ್ಸಿಕಂ ಹಾಗೂ ಹೂವಿನ ಬೆಳೆಯಲ್ಲಿ ಶಿಲೀಂಧ್ರ ರೋಗಗಳು ಕಾಣಿಸಿಕೊಂಡಿವೆ. ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ರೈತರು ರೋಗಬಾಧೆಯಿಂದ ಕಂಗಾಲಾಗಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೋಗ ಹತೋಟಿಗೆ ಸೂಕ್ತ ಮಾಹಿತಿ ಕೊಡುತ್ತಿಲ್ಲ’ ಎಂದು ದೂರಿದರು.

ಸಮೀಕ್ಷೆ ನಡೆಸಿ: ‘ಉಸ್ತುವಾರಿ ಸಚಿವರು ಕೂಡಲೇ ಜಿಲ್ಲೆಗೆ ಬಂದು ಮಳೆ ಅನಾಹುತ ಮತ್ತು ಬೆಳೆ ನಷ್ಟದ ಬಗ್ಗೆ ಸಮೀಕ್ಷೆ ನಡೆಸಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ಬೆಳೆ ಪರಿಹಾರ ಬಿಡುಗಡೆ ಮಾಡಿಸಬೇಕು. ಮಾವು ಬೆಳೆಗೆ ಎಕರೆಗೆ ₹ 50 ಸಾವಿರ, ಟೊಮೆಟೊಗೆ ₹ 2 ಲಕ್ಷ, ಇತರೆ ತರಕಾರಿ ಬೆಳೆಗಳಿಗೆ ₹ 1 ಲಕ್ಷ ಪರಿಹಾರ ನೀಡಬೇಕು. ರೈತರ ಬೆಳೆ ವಿಮೆ ಬಾಕಿ ಮತ್ತು ಬೆಳೆ ನಷ್ಟ ಪರಿಹಾರದ ಹಣವನ್ನು ಕೂಡಲೇ ನೀಡಬೇಕು. ಬ್ಯಾಂಕ್‌ಗಳು ರೈತರಿಗೆ ಹೊಸದಾಗಿ ಕೃಷಿ ಸಾಲ ನೀಡಬೇಕು’ ಎಂದು ಆಗ್ರಹಿಸಿದರು.

ಕೆಪಿಆರ್‌ಎಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್, ಸದಸ್ಯರಾದ ಪಿ.ಅರ್.ನವೀನ್‍ಕುಮಾರ್, ವೆಂಕಟೇಶ್, ವಿ.ನಾರಾಯಣರೆಡ್ಡಿ, ಮುನಿಸ್ವಾಮಿಗೌಡ, ಚಿನ್ನಮ್ಮ, ಅಪ್ಪಯ್ಯಣ್ಣ, ಎಸ್.ಎಂ.ನಾಗರಾಜ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT