ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಪರಿಹಾರ ವಿಳಂಬ: ಪ್ರತಿಭಟನೆ

ಪಹಣಿಯಲ್ಲಿ ಬೆಳೆದಾಖಲು ದೋಷ: ಅಧಿಕಾರಿಗಳ ಸಬೂಬು
Last Updated 10 ಜುಲೈ 2020, 8:39 IST
ಅಕ್ಷರ ಗಾತ್ರ

ಮುಳಬಾಗಿಲು: ಸರ್ಕಾರ ಬೆಳೆ ಪರಿಹಾರ ವಿತರಣೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು ಎಂದು ರೈತ ಸಂಘದ ಸದಸ್ಯರು ತೋಟಗಾರಿಕೆ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಶಿವಕುಮಾರಿ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಕೊರೊನಾ ಹಾವಳಿಯಿಂದ ರೈತರು ತತ್ತರಿಸಿ ಹೋಗಿದ್ದಾರೆ. ಇದರಿಂದ ಸರ್ಕಾರ ರೈತರ ನೆರವಿಗೆ ಧಾವಿಸಿದ್ದು, ಹೂ ಬೆಳೆಗೆ ಹೆಕ್ಟೇರ್‌ಗೆ ₹25 ಸಾವಿರ, ತೋಟಗಾರಿಕೆ ಬೆಳೆಗೆ ₹15 ಸಾವಿರ ಪರಿಹಾರ ನೀಡಲು ಘೋಷಿಸಿದೆ. ಆದರೆ ಬೆಳೆ ನಷ್ಟ ಪರಿಹಾರ ಪಡೆಯಲು ರೈತರು ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ ಬಂದಿದೆ ಎಂದು ದೂರಿದರು.

ಬೆಳೆ ನಷ್ಟದ ಕುರಿತು ಎಲ್ಲ ದಾಖಲೆ ಒದಗಿಸಿದರೂ ಬೆಳೆ ಸಮೀಕ್ಷೆ ಮಾಡುವ ಅಧಿಕಾರಿಗಳು ಬೇಜವಾಬ್ದಾರಿಯಿಂದ ಹೂಬೆಳೆದ ಜಮೀನಿನಲ್ಲಿ ರಾಗಿ, ತರಕಾರಿ ಬೆಳೆದ ಜಮೀನಿನಲ್ಲಿ ನೀಲಗಿರಿ ಎಂದು ನಮೂದಿಸಲಾಗಿದೆ. ಇದನ್ನು ಸಂಬಂಧಿಸಿದ ಅಧಿಕಾರಿಗಳ ಬಳಿ ಕೇಳಿದರೆ ಕಂಪ್ಯೂಟರ್ ಮೇಲೆ ಗೂಬೆ ಕೂರಿಸುತ್ತಾರೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಸಮೀಕ್ಷೆ ಮಾಡಿ ಬೆಳೆಯನ್ನು ದೃಢೀಕರಿಸಬೇಕು. ಆ ಆಧಾರದ ಮೇಲೆ ಬೆಳೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕಿ ಶಿವಕುಮಾರಿ, ಬೆಳೆ ಪರಿಹಾರ ಪಡೆಯಲು ರೈತರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಕೆಲ ಜಮೀನುಗಳ ಸರ್ವೆ ನಂಬರ್‌ನಲ್ಲಿ ಕಂಪ್ಯೂಟರೀಕರಣಗೊಂಡ ಭೂದಾಖಲೆ ಪಹಣಿಗಳಲ್ಲಿ ತೋಟಗಾರಿಕೆ ಬೆಳೆಗಳ ಬದಲು ನೀಲಗಿರಿ, ರಾಗಿ ಇತರೆ ಬೆಳೆ ದಾಖಲಾಗಿರುವುದರಿಂದ ಪರಿಹಾರ ವಿಳಂಬವಾಗುತ್ತಿದೆ ಎಂದರು.

ರೈತರ ಜಮೀನು ಪರಿಶೀಲಿಸಿ ಬೆಳೆ ಇರುವ ರೈತರಿಗೆ ಪರಿಹಾರ ಕೊಡಲು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಫಾರೂಕ್‌ಪಾಷ, ಮುಖಂಡ ಈಕಂಬಳ್ಳಿ ಮಂಜುನಾಥ್, ವಿಜಯಪಾಲ್, ಜಗದೀಶ್, ಸುಧಾಕರ್, ನಾಗರಾಜ್, ಅನಿಲ್, ನಾರಾಯಣ್, ಶಿವು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT