ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಿ ನಾಟಿ ಅಭಿಯಾನ: ಜೂನ್ ಗಡುವು

ಸಮರೋಪಾದಿಯಲ್ಲಿ ಸಸಿ ನೆಡಿ: ಅಧಿಕಾರಿಗಳಿಗೆ ಜಿ.ಪಂ ಸಿಇಒ ಜಗದೀಶ್‌ ಸೂಚನೆ
Last Updated 1 ಮೇ 2019, 10:49 IST
ಅಕ್ಷರ ಗಾತ್ರ

ಕೋಲಾರ: ‘ಕೋಟಿ ನಾಟಿ ಅಭಿಯಾನವನ್ನು ಜೂನ್‌ ಅಂತ್ಯದೊಳಗೆ ಪೂರ್ಣಗೊಳಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಜಿ.ಜಗದೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋಟಿ ನಾಟಿ ಅಭಿಯಾನ ಅನುಷ್ಠಾನ ಸಂಬಂಧ ಇಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು 20 ಅಂಶದ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸಬೇಕು’ ಎಂದರು.

‘ಸಾರ್ವಜನಿಕ ಸ್ಥಳಗಳಾದ ರಸ್ತೆಗಳು, ಶಾಲಾ ಕಾಲೇಜು ಆವರಣ, ಗುಂಡು ತೋಪು, ಕೆರೆಯ ದಂಡೆ, ಗ್ರಾಮ ಪಂಚಾಯಿತಿ ಜಾಗಗಳಲ್ಲಿ ಸಸಿ ನೆಡಬೇಕು. ಅಭಿಯಾನವು ಕ್ಷಣಗಣನೆಗೆ ಸೀಮಿತವಾಗಬಾರದು. ಲೋಕಸಭೆ ಚುನಾವಣೆ ಕೆಲಸ ಮುಗಿದಿದ್ದು, ಸಮರೋಪಾದಿಯಲ್ಲಿ ಸಸಿ ನೆಡಬೇಕು. ಅರಣ್ಯ ಇಲಾಖೆಯು ಅಭಿಯಾನಕ್ಕಾಗಿ 25.91 ಲಕ್ಷ ಸಸಿ ಬೆಳೆಸಿದೆ’ ಎಂದು ತಿಳಿಸಿದರು.

‘ಸಸಿಗಳನ್ನು ನೆಟ್ಟರೆ ಸಾಲದು. ಅವುಗಳನ್ನು ಪೋಷಿಸಬೇಕು. ಹಿಂದಿನ ವರ್ಷ ನರೇಗಾ ಅಡಿ ₹ 90 ಕೋಟಿ ವೆಚ್ಚ ಮಾಡಲಾಗಿದೆ. ಈ ಬಾರಿ ₹ 140 ಕೋಟಿ ವೆಚ್ಚವಾಗಿದೆ. ಒಂದು ಸಾವಿರ ಚೆಕ್‌ಡ್ಯಾಂ ನಿರ್ಮಿಸಲಾಗಿದ್ದು, ಜಿಲ್ಲೆಯಲ್ಲಿ ಬರಡು ಭೂಮಿ ಪ್ರಮಾಣ ತಗ್ಗಿಸಲು ಹಾಗೂ ಅಂತರ್ಜಲ ವೃದ್ಧಿಸಲು ನರೇಗಾ ಉಪಯುಕ್ತ ಯೋಜನೆಯಾಗಿದೆ’ ಎಂದು ಹೇಳಿದರು.

ಮಾದರಿಯಾಗಲಿ: ‘ನರೇಗಾದಲ್ಲಿ ಸುಮಾರು 75 ಕೋಟಿಯನ್ನು (ಶೇ 61) ನೀರಿನ ಸಂಗ್ರಹಣೆಯ ರಚನೆಗೆ ಬಳಸಲಾಗಿದೆ. ಜಲಾಮೃತದಲ್ಲಿ ಹಸರೀಕರಣವು ಒಂದು ಯೋಜನೆಯಾಗಿದ್ದು, ಅಭಿಯಾನವು ಇಡೀ ರಾಜ್ಯಕ್ಕೆ ಮಾದರಿಯಾಗಬೇಕು’ ಎಂದು ಆಶಿಸಿದರು.

‘ಸಸಿಗಳ ಕೊರತೆಯಾದರೆ ಬೇರೆ ಜಿಲ್ಲೆಗಳಿಂದ ತರಿಸಲಾಗುತ್ತದೆ. ಗ್ರಾ.ಪಂ ವ್ಯಾಪ್ತಿಯಲ್ಲಿ ನರೇಗಾ ಮೂಲಕ ಜಿಯೋ ಟ್ಯಾಗ್‌ ಮಾಡಲಾಗುತ್ತದೆ. ಸಸಿಗಳ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ತಾ.ಪಂ ಕಾರ್ಯ ನಿರ್ವಹಣಾಧಿಕಾರಿಗಳು ಸಾರ್ವಜನಿಕ ಸ್ಥಳಗಳಿಗೆ ಅಭಿಯಾನದ ಪೋಸ್ಟರ್‌ ಮತ್ತು ಭಿತ್ತಿಪತ್ರ ತಲುಪಿಸಬೇಕು’ ಎಂದು ಸೂಚಿಸಿದರು.

10 ತಿಂಗಳ ಸಿದ್ಧತೆ: ‘ಅಭಿಯಾನಕ್ಕಾಗಿ 10 ತಿಂಗಳಿನಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅನೇಕ ಹಂತಗಳಲ್ಲಿ ಯೋಜನೆ ರೂಪಿಸುವ ಮೂಲಕ ತಾಲ್ಲೂಕು ಮಟ್ಟದಲ್ಲಿ ಜಾರಿಗೆ ತಂದಿದ್ದೇವೆ. ಅರಣ್ಯ ಇಲಾಖೆ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯನ್ನು ಒಗ್ಗೂಡಿಸಿ ಈ ಅಭಿಯಾನ ರೂಪಿಸಲಾಗಿದೆ’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಹಾಗೂ ಅಭಿಯಾನದ ಅಧ್ಯಕ್ಷ ಕೆ.ಅಮರನಾರಾಯಣ ವಿವರಿಸಿದರು.

‘ಎಲ್ಲಾ ತಾಲ್ಲೂಕು ಪಂಚಾಯಿತಿಗಳ ಕಾರ್ಯ ನಿರ್ವಾಹಣಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಭಿಯಾನದ ಯಶಸ್ಸಿಗೆ ಸಹಕರಿಸಬೇಕು. ಅಭಿಯಾನದ ಬಗ್ಗೆ ಹೆಚ್ಚು ಪ್ರಚಾರ ಮಾಡಿದಷ್ಟು ಹೆಚ್ಚು ಸಸಿ ನೆಡಬಹುದು’ ಎಂದು ಸಲಹೆ ನೀಡಿದರು.

‘ಪುಸ್ತಕ ವಿತರಣೆಗೆ ಮತ್ತು ಪ್ರಚಾರಕ್ಕೆ ರೋಟರಿ ಸಂಸ್ಥೆ ವತಿಯಿಂದ ಆಟೊ ವ್ಯವಸ್ಥೆ ಮಾಡಲಾಗುವುದು. ಪ್ರತಿ ಹೋಬಳಿ ಮಟ್ಟದಲ್ಲಿ ಪ್ರಚಾರ ಮಾಡುತ್ತೇವೆ. ಜಿ.ಪಂ ವತಿಯಿಂದ ಬ್ಯಾಡ್ಜ್ ಮತ್ತು ಟೋಪಿ ನೀಡಲಾಗುತ್ತದೆ. ಗ್ರಾ.ಪಂ ಮಟ್ಟದಲ್ಲಿ ಕೆಲಸ ಮಾಡುವವರಿಗೆ ಟೀ ಶರ್ಟ್ ವಿತರಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಮೊದಲ ಆದ್ಯತೆ: ‘ಮೊದಲು ಅರ್ಜಿ ಸಲ್ಲಿಸಿ ಹೆಸರು ನೋಂದಾಯಿಸುವ ರೈತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಇದರಲ್ಲಿ ಗ್ರಾಮ ಪಂಚಾಯ್ತಿ ಪಾತ್ರ ನಿರ್ಣಾಯಕ. ರೈತರಿಗೆ ಅನಾನುಕೂಲವಾಗವಂತೆ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಲಾಗುವುದು. ಮೇ 10ರಿಂದ 15ರವರೆಗೆ ಅರ್ಜಿ ವಿತರಿಸಲಾಗುತ್ತದೆ. ಒಬ್ಬ ರೈತರಿಗೆ ಗರಿಷ್ಠ 500 ಸಸಿ ಕೊಡಬಹುದು. ರೈತರ ಬೇಡಿಕೆಗೆ ಅನುಗುಣವಾಗಿ ಸಸಿ ಪೂರೈಸಬಹುದು. ಇದರಿಂದ ಆರ್ಥಿಕ ಮತ್ತು ಆಡಳಿತಾತ್ಮಕ ಗುರಿ ತಲುಪಬಹುದು’ ಎಂದರು.

ಅಭಿಯಾನದ ಮಾಹಿತಿ ಒಳಗೊಂಡ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ಜಿ.ಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ್, ಬೆಂಗಳೂರು ರೋಟರಿ ಅಧ್ಯಕ್ಷ ರವಿಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ದೇವರಾಜ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT