ಜಾತಿ, ಭಾಷೆ, ಬಣ್ಣ ದಾಟುವ ತುರ್ತು ಅಗತ್ಯ: ಶಿವಪ್ಪ ಅರಿವು

7

ಜಾತಿ, ಭಾಷೆ, ಬಣ್ಣ ದಾಟುವ ತುರ್ತು ಅಗತ್ಯ: ಶಿವಪ್ಪ ಅರಿವು

Published:
Updated:
Deccan Herald

ಕೋಲಾರ: ‘ಉತ್ತಮ ಸ್ಥಾನದಲ್ಲಿರುವವರು ಜಾತಿ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ವಿಷಾದದ ಸಂಗತಿ’ ಎಂದು ಸರ್ಕಾರಿ ಮಹಿಳಾ ಕಾಲೇಜಿನ ಉಪನ್ಯಾಸಕ ಜಿ.ಶಿವಪ್ಪ ಅರಿವು ಕಳವಳ ವ್ಯಕ್ತಪಡಿಸಿದರು.

ವಿಶ್ವಮಾನವ ವಿದ್ಯಾರ್ಥಿ ಯುವ ವೇದಿಕೆ ವತಿಯಿಂದ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ 2018ನೇ ಸಾಲಿನ ಜಿಲ್ಲಾ ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ‘ಅನಿಕೇತನ ಎಲ್ಲರನ್ನೂ ದಾಟಿಸುವ ಪ್ರಕ್ರಿಯೆ. ಅದರ ಮಹತ್ವ ಮತ್ತಷ್ಟು ವಿಸ್ತಾರವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಇತ್ತೀಚಿಗೆ ಸಮಾಜದಲ್ಲಿ ಜಾತಿ ಮತ್ತು ಧರ್ಮ ಬಹಳ ವೇಗವಾಗಿ ನಡೆಯುತ್ತಿರುವ ವಿಚಾರಗಳು. ಪ್ರಜ್ಞಾವಂತ, ವಿದ್ಯಾವಂತರೇ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರಗಳಿಗೆ ಜಯಂತಿಯ ಆಚರಣೆಯ ಹಿಂದಿನ ಆಶಯ ಬೇರೆಯಿದ್ದರೂ, ಆಚರಿಸುವ ರೀತಿ ಬೇರೆಯದ್ದೇ ಆಗಿದೆ’ ಎಂದರು.

‘ವಿಶ್ವಮಾನವ ವಿದ್ಯಾರ್ಥಿ ಯುವ ವೇದಿಕೆಯು ಕುವೆಂಪು ಅನಿಕೇತನ ಪ್ರಶಸ್ತಿ ಪ್ರದಾನ ಮಾಡುವ ಜತೆಗೆ ಅನಿಕೇತನ ಸಂದೇಶವನ್ನು ಮಕ್ಕಳಿಗೆ ಮುಟ್ಟಿಸುವ ಕೆಲಸ ಮಾಡಬೇಕು. ಇಂದಿಗೂ ಕಪ್ಪು ಬಣ್ಣಗಿರುವ ಗಂಡು, ಹೆಣ್ಣು ಮಕ್ಕಳನ್ನು ಹೀಯಾಳಿಸುವುದನ್ನು ಕಾಣಬಹುದು. ಹೀಗಾಗಿ ಅನಿಕೇತನ ಪರಿಕಲ್ಪನೆಯಲ್ಲಿ ಜಾತಿ, ಭಾಷೆ, ಬಣ್ಣ ದಾಟುವ ತುರ್ತು ಅಗತ್ಯವಿದೆ’ ಎಂದು ಹೇಳಿದರು.

‘ಜಾತಿಗಳನ್ನು ಕಟ್ಟುವ ರೀತಿಯಲ್ಲಿ ಜಯಂತಿಗಳ ಆಚರಣೆ ಆಗಬಾರದು. ಎಲ್ಲರನ್ನು ಒಳಗೊಳ್ಳುವ ಜಯಂತಿ ಆಚರಣೆ ಆಗಬೇಕಾದ ಅಗತ್ಯವಿದೆ’ಎಂದು ಪಿಯು ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಜೆ.ಜಿ.ನಾಗರಾಜ್ ತಿಳಿಸಿದರು.

‘ಬದ್ದತೆ ಇಲ್ಲದ ಶಿಕ್ಷಕ ಬದುಕಲು ಅಯೋಗ್ಯ. ಶಿಸ್ತು ಮತ್ತು ಶಿಕ್ಷಣದ ಮುಖವನ್ನು ತೋರಿಸುವವನೇ ನಿಜವಾದ ಶಿಕ್ಷಕ. ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಕ ಪ್ರಮುಖ ಪಾತ್ರ ವಹಿಸಬೇಕು, ಆತ್ಮವಂಚನೆ ಇಲ್ಲದೆ ಅರ್ಪಣಾ ಮನೋಭಾವದಿಂದ ಪಾಠ ಮಾಡಿದರೆ ಶಿಕ್ಷಕ ದಿನಾಚರಣೆಗೆ ಅರ್ಥ ಬರುತ್ತದೆ’ ಎಂದರು.

ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷ ವಿ.ಗೀತಾ ಪ್ರಶಸ್ತಿ ಪ್ರದಾನ ಮಾಡಿದರು.

ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಎಸ್.ವೆಂಕಟಸ್ವಾಮಿ, ವಿಶ್ವಮಾನವ ವಿದ್ಯಾರ್ಥಿ ಯುವ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಕೂರು ನಾಗರಾಜ್, ನೀರಾವರಿ ಹೋರಾಟ ಸಮಿತಿ ಸಂಚಾಲಕರಾದ ವಿ.ಕೆ. ರಾಜೇಶ್, ಪುಟ್ಟರಾಜು, ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಕೆ.ಎ.ಅನ್ವರ್‌ಪಾಷ, ಬಹುಜನ ವಿದ್ಯಾರ್ಥಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ನಾಗರಾಜ್, ವಿ.ಮುನಿರಾಜು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !