ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ ದೀಪೋತ್ಸವಕ್ಕೆ ಜನಸಾಗರ

Last Updated 29 ನವೆಂಬರ್ 2020, 15:48 IST
ಅಕ್ಷರ ಗಾತ್ರ

ಕೋಲಾರ: ದಕ್ಷಿಣ ಕಾಶಿ ಎಂದೇ ಹೆಸರವಾಗಿರುವ ನಗರದ ಹೊರವಲಯದ ಅಂತರಗಂಗೆ ಬೆಟ್ಟದಲ್ಲಿ ಭಾನುವಾರ ರಾತ್ರಿ ಲಕ್ಷ ದೀಪೋತ್ಸವ ಹಾಗೂ ತೆಪ್ಪೋತ್ಸವ ಅದ್ಧೂರಿಯಾಗಿ ನಡೆಯಿತು.

ಜಿಟಿಜಿಟಿ ಮಳೆ ನಡುವೆಯೂ ಲಕ್ಷ ದೀಪೋತ್ಸವದ ಸೊಬಗು ಕಣ್ತುಂಬಿಕೊಳ್ಳಲು ಅಂತರಗಂಗೆ ಬೆಟ್ಟಕ್ಕೆ ಜನ ಸಾಗರವೇ ಹರಿದು ಬಂದಿತು. ಭಕ್ತರು ಬೆಟ್ಟದಲ್ಲಿನ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದರು.

ಅಂತರಗಂಗೆ ಬೆಟ್ಟದಲ್ಲಿ 14 ವರ್ಷಗಳಿಂದ ಲಕ್ಷ ದೀಪೋತ್ಸವ ನಡೆಯುತ್ತಿದ್ದು, ಜಿಲ್ಲೆಯ ಜತೆಗೆ ಅಕ್ಕಪಕ್ಕದ ಜಿಲ್ಲೆಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ತೆಪ್ಪೋತ್ಸವದ ಜತೆಗೆ ನಡೆದ ಕಾಶಿ ವಿಶ್ವೇಶ್ವರಸ್ವಾಮಿಯ ಕಲ್ಯಾಣೋತ್ಸವವು ಜನರನ್ನು ಭಕ್ತಿ ಸಾಗರದಲ್ಲಿ ಮುಳುಗಿಸಿತು.

ಭಕ್ತರು ಚಳಿ ನಡುವೆಯೂ ಅಂತರಗಂಗೆ ಕ್ಷೇತ್ರವನ್ನು ಹಣತೆಗಳಿಂದ ಬೆಳಗಿಸಿದರು. ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ಹೂವಿನ ಅಲಂಕಾರ ಮಾಡಲಾಗಿತ್ತು. ಲಕ್ಷ ದೀಪೋತ್ಸವದ ಅಂಗವಾಗಿ ಗರ್ಭಗುಡಿಯನ್ನು ಕೈಲಾಸದಂತೆ ಅಲಂಕರಿಸಲಾಗಿತ್ತು. ನಾದಸ್ವರ ಮತ್ತು ಸ್ಯಾಕ್ಸೊಫೋನ್‌ ವಾದನದ ಹಿಮ್ಮೇಳವು ಗಮನ ಸೆಳೆಯಿತು.

ಭಕ್ತರು ದೇವಾಲಯದ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನಡೆಸಿದರು. ದೇವಾಲಯದ ಬಳಿಯ ಕಲ್ಲಿನ ಬಸವ ಮೂರ್ತಿಯ ಬಾಯಿಯಿಂದ ಬರುವ ಸಿಹಿ ನೀರು ಕುಡಿಯಲು ಭಕ್ತರು ಮುಗಿಬಿದ್ದರು. ಮತ್ತೆ ಕೆಲ ಭಕ್ತರು ಬಾಟಲಿಗಳಿಗೆ ನೀರು ತುಂಬಿಸಿಕೊಂಡರು. ಇನ್ನು ಕೆಲವರು ಪವಿತ್ರ ಜಲ ಪ್ರೋಕ್ಷಣೆ ಮಾಡಿಕೊಂಡು ಪುನೀತರಾದರು.

ಪೊಲೀಸ್‌ ಬಂದೋಬಸ್ತ್‌: ಲಕ್ಷ ದೀಪೋತ್ಸವ ಹಿನ್ನೆಲೆಯಲ್ಲಿ ಬೆಟ್ಟದ ಕೆಳಗಿನಿಂದ ಮೇಲಿನವರೆಗೂ ಜನವೋ ಜನ. ದೇವರ ದರ್ಶನ ಪಡೆಯಲು ಭಕ್ತಾದಿಗಳು ಸಾಲುಗಟ್ಟಿ ನಿಂತಿದ್ದರು. ಕೋವಿಡ್‌ ಹಿನ್ನೆಲೆಯಲ್ಲಿ ಮಾಸ್ಕ್‌ ಧರಿಸಿ ಬಂದಿದ್ದ ಭಕ್ತರು ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆದರು. ಮುನ್ನೆಚ್ಚರಿಕೆ ಕ್ರಮವಾಗಿ ಬೆಟ್ಟದಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಪೂಜೆಯ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಬೆಟ್ಟದ ತಪ್ಪಲಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿ, ಜಾತ್ರೆಯ ಕಳೆ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT