ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಶಾಲಾ ವ್ಯಾಮೋಹಕ್ಕೆ ಕಡಿವಾಣ: ಡಿಡಿಪಿಐ ಜಯರಾಮರೆಡ್ಡಿ

ಸರ್ಕಾರಿ ಶಾಲೆಗಳ ಫಲಿತಾಂಶ ಸಾಧನೆಗೆ ಡಿಡಿಪಿಐ ಜಯರಾಮರೆಡ್ಡಿ ಮೆಚ್ಚುಗೆ
Last Updated 29 ಅಕ್ಟೋಬರ್ 2020, 15:13 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ 36 ಸರ್ಕಾರಿ ಶಾಲೆಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100ರ ಫಲಿತಾಂಶ ಸಾಧನೆಯೊಂದಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಯಶಸ್ಸು ಸಾಧಿಸಿ ಪೋಷಕರ ಖಾಸಗಿ ಶಾಲಾ ವ್ಯಾಮೋಹಕ್ಕೆ ಕಡಿವಾಣ ಹಾಕಿವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎಂ.ಜಯರಾಮರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ತಾಲ್ಲೂಕಿನ ಕ್ಯಾಲನೂರು ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಇಲ್ಲಿ ಗುರುವಾರ ಲ್ಯಾಪ್‌ಟಾಪ್‌ ವಿತರಿಸಿ ಮಾತನಾಡಿ, ‘ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಗಳಿಂದ 7,863 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರು. ಈ ಪೈಕಿ 6,799 ಮಂದಿ ಉತ್ತೀರ್ಣರಾಗಿ ಶೇ 86.47 ಫಲಿತಾಂಶ ಬಂದಿದೆ’ ಎಂದು ತಿಳಿಸಿದರು.

‘36 ಸರ್ಕಾರಿ ಶಾಲೆಗಳು ಶೇ 100ರಷ್ಟು ಫಲಿತಾಂಶ ಸಾಧನೆ ಮಾಡುವ ಮೂಲಕ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದಿವೆ. ಈ ಫಲಿತಾಂಶ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ ಕಾರಣವಾಗಿದೆ. ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಸಿಲುಕಿದ್ದ ಪೋಷಕರ ಮನಸ್ಸಿನಲ್ಲಿ ಸರ್ಕಾರಿ ಶಾಲೆಗಳ ಕುರಿತು ಉತ್ತಮ ಭಾವನೆ ಬಲಗೊಳ್ಳಲು ಕಾರಣವಾಗಿದೆ’ ಎಂದರು.

‘ಕೋವಿಡ್ ಸಂಕಷ್ಟದಲ್ಲೂ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರು ಮಕ್ಕಳ ಕಲಿಕೆಗೆ ನೆರವಾಗಿದ್ದಾರೆ. ವಿದ್ಯಾಗಮದ ಜತೆಗೆ ಆನ್‌ಲೈನ್ ಕಲಿಕೆಗೂ ಒತ್ತು ನೀಡಿದ್ದಾರೆ. ಶಿಕ್ಷಕರ ಪರಿಶ್ರಮದಿಂದ ಜಿಲ್ಲೆಗೆ ಉತ್ತಮ ಫಲಿತಾಂಶದ ಗೌರವ ಸಿಗುವಂತಾಯಿತು’ ಎಂದು ಅಭಿಪ್ರಾಯಪಟ್ಟರು.

ಗುಣಾತ್ಮಕತೆ: ‘ಶೇ 60ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಶೇ 80ರಷ್ಟಿದ್ದಾರೆ. ಇದು ಗುಣಾತ್ಮಕತೆಗೆ ಹಿಡಿದ ಕೈಗನ್ನಡಿ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಪೌಷ್ಟಿಕ ಆಹಾರ, ಹಾಲು, ಉಚಿತ ಪಠ್ಯಪುಸ್ತಕ, ಸಮವಸ್ತ್ರ ನೀಡಲಾಗುತ್ತಿದೆ, ಜತೆಗೆ ಶುಲ್ಕವೂ ಇಲ್ಲ. ಕೋವಿಡ್ ಸಂಕಷ್ಟದಲ್ಲಿರುವ ಪೋಷಕರು ಇದೀಗ ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂಬ ಕಾರಣಕ್ಕೆ ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡಿದೆ. ಸಾಧಕ ಮಕ್ಕಳ ಶೈಕ್ಷಣಿಕ ಜೀವನ ಉತ್ತಮ ಹಾದಿಯಲ್ಲಿ ಸಾಗಲಿ’ ಎಂದು ಆಶಿಸಿದರು.

ಕ್ಯಾಲನೂರು ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳಾದ ನಿಖಿಲ್‌ಕುಮಾರ್, ಆಶಾ ಮತ್ತು ಚೈತ್ರಾಬಾಯಿ ಅವರಿಗೆ ಲ್ಯಾಪ್‌ಟಾಪ್‌ ವಿತರಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ, ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಗಂಗಾಧರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT