ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನೋದ್ಯಮ ಜಿಲ್ಲೆಯ ರೈತರಿಗೆ ಆಸರೆ

Last Updated 21 ಸೆಪ್ಟೆಂಬರ್ 2021, 16:18 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್ ಸಂಕಷ್ಟ ಹಾಗೂ ಬರಗಾಲದಲ್ಲೂ ಹೈನೋದ್ಯಮವು ಜಿಲ್ಲೆಯ ರೈತರ ಆರ್ಥಿಕತೆಗೆ ಆಸರೆಯಾಗಿದೆ’ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಲಕ್ಷ್ಮೀಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಕ್ಷೀರ ಸಂಜೀವಿನಿ ಯೋಜನೆಯಡಿ ಮಂಗಳವಾರ ನಡೆದ ಶುದ್ಧ ಹಾಲು ಉತ್ಪಾದನಾ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಕೋಚಿಮುಲ್ ರೈತರ ಹಿತ ರಕ್ಷಣೆಗೆ ಬದ್ಧವಾಗಿದೆ. ಹಸು ವಿಮೆ ಮೂಲಕ ಹೈನುಗಾರರನ್ನು ರಕ್ಷಿಸುವ ಕೆಲಸ ಮಾಡಲಾಗಿದೆ. ಸಂಕಷ್ಟದಲ್ಲಿರುವವರಿಗೆ ಒಕ್ಕೂಟ ನೆರವಾಗಲಿದೆ’ ಎಂದು ಭರವಸೆ ನೀಡಿದರು.

‘ಕರ್ನಾಟಕ ಹಾಲು ಮಹಾಮಂಡಳ ಒಕ್ಕೂಟದ ಸ್ಟೆಪ್ ಯೋಜನೆಯಡಿ ಕ್ಷೀರ ಸಂಜೀವಿನಿ ಯೋಜನೆ 2ನೇ ಹಂತದಲ್ಲಿ ರಾಸು ಖರೀದಿಗೆ ತಲಾ ₹ 25 ಸಾವಿರ ಬಡ್ಡಿರಹಿತ ಸಾಲ ಸೌಲಭ್ಯ ನೀಡುತ್ತಿದೆ. ಒಟ್ಟಾರೆ 12 ಸದಸ್ಯರಿಗೆ ಈ ಸೌಲಭ್ಯ ಸಿಗಲಿದೆ. ಸಂಘದಲ್ಲಿ ದಿನಕ್ಕೆ ಸುಮಾರು 250 ಲೀಟರ್ ಹಾಲು ಶೇಖರಣೆಯಾಗುತ್ತಿರುವುದು ಪ್ರಶಂಸನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ತಾಲ್ಲೂಕನ್ನು ಕ್ಯಾನ್‌ರಹಿತ ಹಾಲು ಸಂಗ್ರಹ ತಾಲ್ಲೂಕಾಗಿ ಮಾಡುತ್ತೇವೆ. ಎಲ್ಲಾ ಎಂಪಿಸಿಎಸ್‌ಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಒಕ್ಕೂಟದಿಂದ ಹಣಕಾಸು ನೆರವು ನೀಡಲಾಗುತ್ತದೆ. ₹ 567 ಪಾವತಿಸಿ ರಾಸುಗಳಿಗೆ ವಿಮೆ ಮಾಡಿಸಬೇಕು. ರಾಸುಗಳಿಗೆ ಆಕಸ್ಮಿಕವಾಗಿ ಮೃತಪಟ್ಟರೆ ಪ್ರತಿ ರಾಸಿಗೆ ₹ 70 ಸಾವಿರ ಪರಿಹಾರ ಸಿಗಲಿದೆ. ಹಾಲು ಉತ್ಪಾದಕರು ಇದರ ಸದುಪಯೋಗ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.

ಧೃತಿಗೆಡಬೇಡಿ: ‘ಕೋವಿಡ್ ಕಾರಣಕ್ಕೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಕುಸಿದಿದೆ. ಇದರಿಂದ ತಾತ್ಕಾಲಿಕವಾಗಿ ಹಾಲು ಖರೀದಿ ದರ ಕಡಿಮೆ ಮಾಡಲಾಗಿದೆ. ಮುಂದೆ ವಹಿವಾಟು ಸುಧಾರಿಸಿದಾಗ ಹಾಲು ಖರೀದಿ ದರ ಹೆಚ್ಚಿಸುತ್ತೇವೆ. ಈಗ ದರ ಕಡಿಮೆ ಮಾಡಿರುವುದಕ್ಕೆ ರೈತಾಪಿ ವರ್ಗ ಧೃತಿಗೆಡಬಾರದು’ ಎಂದು ಕೋಚಿಮುಲ್‌ ಶಿಬಿರ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ ಸಲಹೆ ನೀಡಿದರು.

ವಕ್ಕಲೇರಿ ಗ್ರಾಮ ಪಂಚಾಯಿತಿ ಸದಸ್ಯ ಮುರಳಿ, ಕೋಚಿಮುಲ್‌ ಶಿಬಿರ ಉಪ ವ್ಯವಸ್ಥಾಪಕ ಶ್ರೀಧರಮೂರ್ತಿ, ಸ್ಟೆಪ್ ವಿಭಾಗದ ಉಪ ವ್ಯವಸ್ಥಾಪಕಿ ವಿಜಯಲಕ್ಷ್ಮಿ, ವಿಸ್ತರಣಾಧಿಕಾರಿ ಶ್ರೀನಿವಾಸ್, ನಳಿನಿ ಸಂಘದ ಅಧ್ಯಕ್ಷೆ ಜಯಲಕ್ಷ್ಮೀ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT