ತನಿಖೆಗೆ ಒತ್ತಾಯಿಸಿ ದಲಿತ ಸಿಂಹ ಸೇನೆ ಧರಣಿ

7
ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಕ್ರಮ: ಆರೋಪ

ತನಿಖೆಗೆ ಒತ್ತಾಯಿಸಿ ದಲಿತ ಸಿಂಹ ಸೇನೆ ಧರಣಿ

Published:
Updated:
Deccan Herald

ಕೋಲಾರ: ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಕ್ರಮ ನಡೆದಿದ್ದು, ಉನ್ನತ ತನಿಖೆ ನಡೆಸಬೇಕೆಂದು ಒತ್ತಾಯಿಸಿ ದಲಿತ ಸಿಂಹ ಸೇನೆ ಸದಸ್ಯರು ಇಲ್ಲಿನ ಜಿಲ್ಲಾ ಪಂಚಾಯಿತಿ ಎದುರು ಮಂಗಳವಾರ ಧರಣಿ ನಡೆಸಿದರು.

‘ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಿಗೆ ಆಹಾರ ಪದಾರ್ಥಗಳ ಪೂರೈಕೆ ಹಾಗೂ ಸಾಮಗ್ರಿ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ. ಗುತ್ತಿಗೆದಾರರು ಇಲಾಖೆಯ ಅಧಿಕಾರಿಗಳ ಜತೆ ಶಾಮೀಲಾಗಿ ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲೆಯಾದ್ಯಂತ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳ ಸ್ಥಿತಿ ಶೋಚನೀಯವಾಗಿದೆ. ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಆಹಾರ ನೀಡಲಾಗುತ್ತಿದೆ. ಶೌಚಾಲಯಗಳು ಶಿಥಿಲಗೊಂಡಿದ್ದು, ಸ್ವಚ್ಛತೆ ಇಲ್ಲವಾಗಿದೆ. ಅಧಿಕಾರಿಗಳು ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ ಗಮನ ಹರಿಸುತ್ತಿಲ್ಲ’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜು ಆರೋಪಿಸಿದರು.

‘ಹುಳು ಬಿದ್ದ ತರಕಾರಿ ಮತ್ತು ಕಳಪೆ ಆಹಾರ ಪದಾರ್ಥಗಳನ್ನು ಬಳಸಿ ಅಡುಗೆ ಮಾಡಲಾಗುತ್ತಿದೆ. ಅಡುಗೆಗೆ ಶುದ್ಧ ನೀರು ಬಳಕೆ ಮಾಡುತ್ತಿಲ್ಲ. ಹಾಸ್ಟೆಲ್‌ಗೆ ಮಂಜೂರಾದ ಆಹಾರ ಪದಾರ್ಥಗಳನ್ನು ವಾರ್ಡನ್‌ ಹಾಗೂ ಅಡುಗೆ ಸಿಬ್ಬಂದಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಹಾಸ್ಟೆಲ್‌ನಿಂದ ಮನೆಗೆ ಕಳುಹಿಸುವುದಾಗಿ ವಿದ್ಯಾರ್ಥಿಗಳನ್ನು ಬೆದರಿಸುತ್ತಾರೆ’ ಎಂದು ದೂರಿದರು.

ರಕ್ಷಣೆ ಇಲ್ಲವಾಗಿದೆ: ‘ಬಹುಪಾಲು ಹಾಸ್ಟೆಲ್‌ ವಾರ್ಡನ್‌ ಹುದ್ದೆಗಳು ಖಾಲಿ ಇವೆ. ಅಡುಗೆ ಸಿಬ್ಬಂದಿಗೆ ನಿಯಮಬಾಹಿರವಾಗಿ ವಾರ್ಡನ್‌ ಹುದ್ದೆಯ ಜವಾಬ್ದಾರಿ ನೀಡಲಾಗಿದೆ. ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಕಾವಲಿಗೆ ಭದ್ರತಾ ಸಿಬ್ಬಂದಿಯಿಲ್ಲ. ಹೀಗಾಗಿ ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲವಾಗಿದೆ. ಇಲಾಖೆ ಅಧಿಕಾರಿಗಳು ಲಂಚದಾಸೆಗಾಗಿ ಗುತ್ತಿಗೆದಾರರ ಜತೆ ಕೈಜೋಡಿಸಿ ವಿದ್ಯಾರ್ಥಿಗಳನ್ನು ಶೋಷಿಸುತ್ತಿದ್ದಾರೆ’ ಎಂದು ಧರಣಿನಿರತರು ಕಿಡಿಕಾರಿದರು.

‘ಇಲಾಖೆಯ ಅಕ್ರಮದ ಬಗ್ಗೆ ಉನ್ನತ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಹಾಸ್ಟೆಲ್‌ಗಳಿಗೆ ಕಳಪೆ ಆಹಾರ ಪದಾರ್ಥ ಸರಬರಾಜು ಮಾಡಿರುವ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಜತೆಗೆ ಬಿಲ್‌ ತಡೆ ಹಿಡಿದು ಅವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಸದಸ್ಯರಾದ ಶಂಕರ್, ವಿ.ನಾರಾಯಣಸ್ವಾಮಿ, ಮುನಿರಾಜು, ಶ್ರೀನಿವಾಸ್, ಮಂಜುನಾಥ್ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !