ಗುರುವಾರ , ಡಿಸೆಂಬರ್ 2, 2021
20 °C
ಚೆನ್ನೈ ಕಾರಿಡಾರ್ ರಸ್ತೆ ನಿರ್ಮಾಣಕ್ಕೆ ಸಾಮಗ್ರಿ ಸಂಗ್ರಹಾಲಯಕ್ಕೆ ಸ್ಥಳೀಯರ ವಿರೋಧ

ದೇವಾಲಯಗಳಿಗೆ ಹಾನಿ: ಆತಂಕ

ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್: ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್ ರಸ್ತೆಗೆ ಸಾಮಗ್ರಿಗಳನ್ನು ಸಂಗ್ರಹಿಸಲು ಮತ್ತು ಪೂರೈಸಲು ತಾಲ್ಲೂಕಿನ ಗುಟ್ಟಹಳ್ಳಿ (ಬಂಗಾರತಿರುಪತಿ) ಬಳಿ ಬೃಹತ್ ಸಂಗ್ರಹಾಲಯವನ್ನು ಸ್ಥಾಪಿಸುವುದರಿಂದ ಸ್ಥಳೀಯ ದೇವಾಲಯಗಳಿಗೆ ಹಾನಿಯಾಗುವ ಆತಂಕ ಸ್ಥಳೀಯರಲ್ಲಿ ಮೂಡಿದೆ.

ಹಲವಾರು ವರ್ಷಗಳ ಕಾಲ ನಡೆಯುವ ರಸ್ತೆ ಕಾಮಗಾರಿಗೆ ಬಂಡೆ ಸಿಡಿತದಿಂದ ಮೊದಲ್ಗೊಂಡು, ಎಂ ಸ್ಯಾಂಡ್ ಪೂರೈಕೆವರೆಗೂ ಎಲ್ಲವನ್ನು ಇಲ್ಲಿಯೇ ಮಾಡಲಾಗುತ್ತದೆ. ಅದಕ್ಕೆ ಬೇಕಾದ ವಸ್ತುಗಳನ್ನು ಸಾಗಿಸಲು ಟಿಪ್ಪರ್‌ಗಳು ದೇವಾಲಯದ
ಹಾದಿಯಲ್ಲಿ ಓಡಾಡುವುದು ಹೆಚ್ಚಾಗಿ ದೇವಾಲಯದ ಅಸ್ತಿತ್ವಕ್ಕೆ ಧಕ್ಕೆ ಬರಬಹುದು ಎಂಬ ಭೀತಿ ಸ್ಥಳೀಯರಲ್ಲಿ ಉಂಟಾಗಿದೆ.

ಬೆಂಗಳೂರಿನ ಹೊಸಕೋಟೆ ಬಳಿಯಿಂದ ಶುರುವಾಗುವ ಎಕ್ಸ್‌ಪ್ರೆಸ್‌ ಕೈಗಾರಿಕಾ ಕಾರಿಡಾರ್ ತಾಲ್ಲೂಕಿನ ಮೂಲಕ ಹಾದುಹೋಗಿ ಆಂಧ್ರದ ಬಂಗಾರುಪಾಳ್ಯಂ ಮೂಲಕ ತಮಿಳುನಾಡಿಗೆ ಸೇರುತ್ತದೆ. ಜಪಾನ್ ಇಂಟರ್‌ ನ್ಯಾಷನಲ್ ಕೋ ಅಪರೇಷನ್ ಏಜೆನ್ಸಿ ಅಭಿವೃದ್ಧಿಪಡಿಸುತ್ತಿದೆ.

ಗುಟ್ಟಹಳ್ಳಿ ದೇವಾಲಯದ ಜಾಗಕ್ಕೆ ಹೊಂದಿಕೊಂಡಿರುವ ಸಂಗ್ರಹಾಲಯದ ಜಾಗ ಉದ್ದೇಶಿತ ರಸ್ತೆಯ ಮಧ್ಯಭಾಗದಲ್ಲಿ ಬರುತ್ತದೆ. ಆದ್ದರಿಂದ ಎಲ್ಲೆಡೆಗೆ ಸಾಮಾನುಗಳನ್ನು ಇಲ್ಲಿಂದಲೇ ಸಾಗಿಸಬಹುದು ಎಂಬ ಉದ್ದೇಶದಿಂದ ರೈತರಿಂದ ಈಗಾಗಲೇ ಗುತ್ತಿಗೆ ಆಧಾರದ ಮೇಲೆ ಜಮೀನು ಪಡೆಯಲಾಗುತ್ತಿದೆ. ಅಲ್ಲಿ ಇಂಧನ ಸಂಗ್ರಹಕ್ಕೆ ವ್ಯವಸ್ಥೆ ಮಾಡಲು ಟ್ಯಾಂಕರ್‌ಗಳು ಬಂದಿವೆ. ಹಳ್ಳ, ದಿಣ್ಣೆಗಳನ್ನು ಸಮ ಮಾಡಲಾಗುತ್ತಿದೆ. ಈಗಾಗಲೇ 25 ಎಕರೆ ಜಮೀನನ್ನು ಪಡೆಯಲಾಗಿದೆ.

‘ತಾಲ್ಲೂಕಿಗೆ ಹೊಂದಿಕೊಂಡಿರುವ ಬಂಡ ಹಳ್ಳಿ ಗ್ರಾಮದಲ್ಲಿ ಜಲ್ಲಿ ಕಲ್ಲು ಒಡೆಯುವುದರಿಂದ ಆವಣಿಯ ರಾಮಲಿಂಗೇಶ್ವರ ದೇವಾಲಯ ಮತ್ತು ಬಂಗಾರತಿರುಪತಿಯ ಗುಡ್ಡದ ಮೇಲೆ ಇರುವ ವೆಂಕಟರಮಣಸ್ವಾಮಿ ಮತ್ತು ಅಲುಮೇಲು ಮಂಗಮ್ಮ ದೇವಾಲಯಗಳಿಗೆ ತೊಂದರೆಯಾಗುವ ಸಂಭವ ಇದೆ. ಈ ಬಗ್ಗೆ ಸಂಶೋಧನೆ ನಡೆಸಿ ವರದಿಯನ್ನು ಸ್ಥಳೀಯರಿಗೆ ನೀಡಬೇಕಾಗಿತ್ತು. ಆದರೆ ಸಾರ್ವಜನಿಕರ ಮಾಹಿತಿಗೆ ಏನೂ ನೀಡದೆ, ವರ್ಷಾನುಗಟ್ಟಲೆ ನಡೆಯುವ ಕಾಮಗಾರಿಗೆ ದೇವಾಲಯ ಸಮೀಪ ಜಾಗ ಕೊಟ್ಟಿರುವುದು ಸರಿಯಲ್ಲ’ ಎಂದು ಸ್ಥಳೀಯ ನಿವಾಸಿ ವರದರಾಜ್ ಅಭಿಪ್ರಾಯ ಪಡುತ್ತಾರೆ.

‘ಸಾಮಗ್ರಿ ಸಂಗ್ರಹಾಲಯ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ. ಪರಿಸರ ಮತ್ತು ಸಾರ್ವಜನಿಕರಿಗೆ ತೊಂದರೆ ಇದೆಯೇ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹುಲ್ಕೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಶ್ಮಿ ಹೇಳಿದರು.

ಪ್ರತಿಭಟನೆಯ ಎಚ್ಚರಿಕೆ

‘ಕಂದಾಯ ಇಲಾಖೆಯವರು ಸರ್ವೆ ಮಾಡದೆ, ಈ ಜಾಗವನ್ನು ಉಪಯೋಗಿಸಲು ಅನುಮತಿ ಕೊಟ್ಟಿದ್ದಾರೆ. ಬೇತಮಂಗಲ ಕಂದಾಯ ವೃತ್ತದ ಅಧಿಕಾರಿಗಳು ಜವಾಬ್ದಾರಿ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಸಂಗ್ರಹಾಲಯಕ್ಕೆ ಜಾಗ ಕೊಡುವ ಮೊದಲು ಅಲ್ಲಿಗೆ ಹೋಗುವ ದಾರಿ ಯಾವುದು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಿಲ್ಲ. ದೇವಾಲಯದ ಪ್ರಾಂಗಣದ ಬಳಿ ಇರುವ ದಾರಿಯನ್ನು ಸಂಗ್ರಹಾಲಯದ ಬಳಕೆಗೆ ಉಪಯೋಗಿಸಿಕೊಂಡರೆ, ಪ್ರತಿಭಟನೆ ನಡೆಸಲಾಗುವುದು. ದೇವಾಲಯದ ಭಕ್ತಾದಿಗಳಿಗೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಕೂಡ ತೊಂದರೆಯಾಗಬಾರದು ಎಂದು ರೈತ ಸಂಘದ ಮುಖಂಡ ಹುಲ್ಕೂರು ಹರಿಕುಮಾರ್ ಹೇಳುತ್ತಾರೆ.

***

ಸಾಮಗ್ರಿ ಸಂಗ್ರಹಾಲಯದಿಂದ ದೂಳು ಬಂದು ಭಕ್ತಾದಿಗಳಿಗೆ ತೊಂದರೆಯಾಗುವುದಾದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು

- ಸುಬ್ರಹ್ಮಣಿ, ಕಾರ್ಯನಿರ್ವಹಣಾಧಿಕಾರಿ, ಮುಜರಾಯಿ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು