ಬುಧವಾರ, ನವೆಂಬರ್ 13, 2019
28 °C
ಜಲ ಮೂಲ ಸಂರಕ್ಷಣೆ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಮಂಜುನಾಥ್ ಹೇಳಿಕೆ

ಕೆರೆ ರಕ್ಷಿಸದಿದ್ದರೆ ಭವಿಷ್ಯದಲ್ಲಿ ಅಪಾಯ

Published:
Updated:
Prajavani

ಕೋಲಾರ: ‘ಜಿಲ್ಲೆಯಲ್ಲಿ ಕೆರೆಗಳ ಒತ್ತುವರಿ ತೆರವುಗೊಳಿಸಿ ರಾಜಕಾಲುವೆಗಳನ್ನು ಸಂರಕ್ಷಿಸದಿದ್ದರೆ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ (ಎಫ್ಇಎಸ್) ಸಹಯೋಗದಲ್ಲಿ ಸಾಮೂಹಿಕ ಭೂಮಿ, ಜಲ ಮೂಲಗಳ ಅಭಿವೃದ್ಧಿ ಮತ್ತು ಸಂರಕ್ಷಣೆ ಕುರಿತು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಸಂಘ ಸಂಸ್ಥೆಗಳು ಮತ್ತು ಜನರು ಕೈಜೋಡಿಸಬೇಕು. ನೀರಿನ ಬವಣೆ ನೀಗಿಸಲು ಅನುಸರಿಸಬೇಕಾದ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನೀರು ಮುಗಿದು ಹೋಗುವ ಸಂಪನ್ಮೂಲವಾಗಿದ್ದು, ಮಿತವಾಗಿ ಬಳಸದಿದ್ದರೆ ಮುಂದೆ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಒಂದೆರಡು ಕಾರ್ಯಕ್ರಮದ ಮೂಲಕ ಜಿಲ್ಲೆಯನ್ನು ಹಸಿರುಗೊಳಿಸಲು ಸಾಧ್ಯವಿಲ್ಲ. ಎಲ್ಲರೂ ಈ ಕಾರ್ಯದಲ್ಲಿ ಭಾಗಿಯಾಗಬೇಕು. ಮಳೆ ನೀರು ಕೊಯ್ಲು, ಸಸಿ ನಾಟಿ, ಕೆರೆಗಳನ್ನು ತುಂಬಿಸುವುದು, ಕಲ್ಯಾಣಿಗಳಲ್ಲಿ ಹೂಳು ತೆಗೆಸುವ ಪ್ರಕ್ರಿಯೆಯು ಜನಾಂದೋಲನದಂತೆ ನಡೆಯಬೇಕು’ ಎಂದು ಸಲಹೆ ನೀಡಿದರು.

‘ಕೋಲಾರ ಜಿಲ್ಲೆ ನೀರಿನ ಸಮಸ್ಯೆ ಗಂಭೀರವಾಗಿದೆ. ಮಳೆ ಕೊರತೆಯಿಂದ ಪ್ರತಿ ವರ್ಷ ಅಂತರ್ಜಲ ಮಟ್ಟ 38 ಮೀಟರ್‌ನಷ್ಟು ಕುಸಿಯುತ್ತಿದೆ. ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಕೆ.ಸಿ ವ್ಯಾಲಿ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಈಗಾಗಲೇ 34 ಕೆರೆ ತುಂಬಿದ್ದು, ತಾಲ್ಲೂಕಿನ ಅಗ್ರಹಾರ ಕೆರೆಯು ಮೂರ್ನಾಲ್ಕು ದಿನದಲ್ಲಿ ಭರ್ತಿಯಾಗಲಿದೆ. ಬಳಿಕ ಜನ್ನಘಟ್ಟ ಕೆರೆಗೆ ನೀರು ಹರಿಯಲಿದೆ’ ಎಂದು ವಿವರಿಸಿದರು.

ಬವಣೆ ನೀಗುತ್ತದೆ: ‘ಯರಗೋಳ್ ಅಣೆಕಟ್ಟೆಯಿಂದ ಕೋಲಾರ, ಬಂಗಾರಪೇಟೆ, ಮಾಲೂರು ನಗರ ಮತ್ತು ಗ್ರಾಮಾಂತರ ಪ್ರದೇಶಕ್ಕೆ ಕುಡಿಯುವ ನೀರು ಕೊಡಲಾಗುತ್ತದೆ. ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಜಿಲ್ಲೆಗೆ ನೀರು ತರಲಾಗುವುದು. ಈ ಎರಡೂ ಯೋಜನೆಗಳು ದೊಡ್ಡ ಯೋಜನೆಗಳಾಗಿದ್ದು, ಇದರಿಂದ ಜಿಲ್ಲೆಯ ನೀರಿನ ಬವಣೆ ನೀಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಗಿಡ ಮರ ಬೆಳೆಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಕೈಗೆತ್ತಿಕೊಂಡಿದ್ದು, ಈಗಾಗಲೇ ಗ್ರಾಮ ಪಂಚಾಯಿತಿ ಮತ್ತು ಶಾಲಾ ಕಾಲೇಜು ಆವರಣದಲ್ಲಿ ಲಕ್ಷಾಂತರ ಸಸಿ ನೆಡಲಾಗಿದೆ. ಬೆಟ್ಟ ಗುಡ್ಡಗಳಲ್ಲಿ ಪ್ಯಾರಾ ಗ್ಲೈಡರ್‌ ಮೂಲಕ ಬೀಜದುಂಡೆ ಬಿತ್ತನೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಅರಣ್ಯ ಉಳಿಸಿ: ‘ಮನುಷ್ಯನಿಗೆ ಅಗತ್ಯವಾಗಿ ಬೇಕಿರುವ ಮೂಲಸೌಕರ್ಯವನ್ನು ನಿಸರ್ಗ ಕಲ್ಪಿಸಿದೆ. ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ. ಒಂದು ಮರ ದಿನಕ್ಕೆ ಒಂದು ಕೆ.ಜಿ ಆಮ್ಲಜನಕ ಉತ್ಪಾದನೆ ಮಾಡುತ್ತದೆ. ಗಿಡ ಮರಗಳ ನಾಶದಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ಅರಿತು ಅರಣ್ಯ ಸಂಪತ್ತು ಉಳಿಸಿ’ ಎಂದು ಪರಿಸರ ತಜ್ಞ ಯಲ್ಲಪ್ಪರೆಡ್ಡಿ ಕಿವಿಮಾತು ಹೇಳಿದರು.

‘ಜನಸಂಖ್ಯೆಗೆ ಹೋಲಿಸಿದರೆ ಮರಗಳ ಸಂಖ್ಯೆ ಕಡಿಮೆಯಿದ್ದು, ಶುದ್ಧ ಗಾಳಿ ಸಿಗುತ್ತಿಲ್ಲ. ಇದರಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಶುದ್ಧ ಗಾಳಿಗಾಗಿ ರಸ್ತೆಗಳ ಅಕ್ಕಪಕ್ಕ ಗಿಡ ನೆಟ್ಟು ಬೆಳೆಸಬೇಕು. ಜನ ತಮ್ಮ ಸಮಸ್ಯೆಗಳನ್ನು ತಾವೇ ಗುರುತಿಸಿ ಪರಿಹಾರ ಕಂಡುಕೊಳ್ಳಬೇಕು. ಜಿಲ್ಲೆಯಲ್ಲಿ 3,200 ಕೆರೆಗಳು ಮತ್ತು 1,800 ಕಲ್ಯಾಣಿಗಳಿದ್ದು, ಇವುಗಳನ್ನು ಸಂರಕ್ಷಿಸಿದರೆ ಅಂತರ್ಜಲ ವೃದ್ಧಿಯಾಗುತ್ತದೆ’ ಎಂದರು.

ಜಿ.ಪಂ. ಉಪ ಕಾರ್ಯದರ್ಶಿ ಸಂಜೀವಪ್ಪ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)