ರೇಷ್ಮೆ ಕೃಷಿ ಇಲಾಖೆ ಎದುರು ದಸಂಸ ಧರಣಿ

7
ಸವಲತ್ತು ಹಂಚಿಕೆಯಲ್ಲಿ ಅಧಿಕಾರಿಗಳ ತಾರತಮ್ಯ: ಆರೋಪ

ರೇಷ್ಮೆ ಕೃಷಿ ಇಲಾಖೆ ಎದುರು ದಸಂಸ ಧರಣಿ

Published:
Updated:
Deccan Herald

ಕೋಲಾರ: ಪರಿಶಿಷ್ಟ ಸಮುದಾಯದ ಯೋಜನೆಗಳ ಸವಲತ್ತು ಹಂಚಿಕೆಯಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಇಲ್ಲಿ ಸೋಮವಾರ ರೇಷ್ಮೆ ಕೃಷಿ ಇಲಾಖೆ ಎದುರು ಧರಣಿ ನಡೆಸಿದರು.

‘ಜಿಲ್ಲೆಯಲ್ಲಿ ರೇಷ್ಮೆ ಕೃಷಿಯು ರೈತರ ಬೆನ್ನೆಲುಬಾಗಿದೆ. ರೈತ ಕುಟುಂಬಗಳಿಗೆ ರೇಷ್ಮೆ ಬೆಳೆಯು ಪ್ರಮುಖ ಆದಾಯ ಮೂಲವಾಗಿದೆ. ಆದರೆ, ಸರ್ಕಾರದ ಸವಲತ್ತುಗಳನ್ನು ರೇಷ್ಮೆ ಬೆಳೆಗಾರರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಅಕ್ರಮ ಎಸಗುತ್ತಿದ್ದಾರೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಬರ ಪರಿಸ್ಥಿತಿ ನಡುವೆಯೂ ರೈತರು ಬಡ್ಡಿ ಸಾಲ ಮಾಡಿ ರೇಷ್ಮೆ ಬೆಳೆಯುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರವು ರೇಷ್ಮೆ ಬೆಳೆಗಾರರ ಹಿತ ರಕ್ಷಣೆಗಾಗಿ ಹಲವು ಯೋಜನೆ ರೂಪಿಸಿವೆ. ಆದರೆ, ರೇಷ್ಮೆ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕರು ಹಾಗೂ ವೇಮಗಲ್ ಹೋಬಳಿ ರೇಷ್ಮೆ ಕೃಷಿ ಸಹಾಯಕರು ಫಲಾನುಭವಿಗಳ ಆಯ್ಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ’ ಎಂದು ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಸಿ.ನಾಗೇಶ್‌ ಆರೋಪಿಸಿದರು.

ಸವಲತ್ತು ಕೈಸೇರಿಲ್ಲ: ‘ವಿವಿಧ ಯೋಜನೆಗಳ ಸವಲತ್ತುಗಳಿಗೆ ಅರ್ಜಿ ಹಾಕಿರುವ ಬೆಳೆಗಾರರಿಗೆ ಈವರೆಗೂ ಸವಲತ್ತು ಕೈಸೇರಿಲ್ಲ. ಅಧಿಕಾರಿಗಳು ಅನರ್ಹರಿಂದ ಹೊಸದಾಗಿ ಅರ್ಜಿ ಪಡೆದು ಸೌರ ವಿದ್ಯುತ್‌ದೀಪ, ರೇಷ್ಮೆ ಸಲಕರಣೆ ಹಾಗೂ ಕೀಟನಾಶಕಗಳನ್ನು ವಿತರಿಸಿ, ಅರ್ಹ ಫಲಾನುಭವಿಗಳನ್ನು ವಂಚಿಸುತ್ತಿದ್ದಾರೆ’ ಎಂದು ಧರಣಿನಿರತರು ದೂರಿದರು.

‘ಮಾರುಕಟ್ಟೆಯಲ್ಲಿ ವ್ಯಾಪಾರಿಗಳು, ದಲ್ಲಾಳಿಗಳು ರೇಷ್ಮೆಗೂಡಿನ ತೂಕ ಹಾಗೂ ಬೆಲೆ ನಿಗದಿಯಲ್ಲಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಮತ್ತೊಂದೆಡೆ ಅಧಿಕಾರಿಗಳು ರೈತರನ್ನು ಶೋಷಿಸುತ್ತಿದ್ದಾರೆ. ಬೆಲೆ ಕುಸಿತ, ಅಧಿಕಾರಿಗಳು ಹಾಗೂ ವ್ಯಾಪಾರಿಗಳ ಶೋಷಣೆಯಿಂದ ರೇಷ್ಮೆ ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಅಳಲು ತೋಡಿಕೊಂಡರು.

ತನಿಖೆ ನಡೆಸಬೇಕು: ‘ಪರಿಶಿಷ್ಟರ ಯೋಜನೆಗಳ ಸವಲತ್ತು ವಿತರಣೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ವಂಚನೆಗೆ ಒಳಗಾಗಿರುವ ಫಲಾನುಭವಿಗಳಿಗೆ ಸೌಕರ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಸಮಿತಿಯ ಜಿಲ್ಲಾ ಘಟಕದ ಖಜಾಂಚಿ ಎಂ.ರವಿಕುಮಾರ್, ಉಪಾಧ್ಯಕ್ಷ ಪ್ರಕಾಶ್, ಸದಸ್ಯರಾದ ಹನುಮಪ್ಪ, ರವಿ, ಆಂಜಿ, ಜಿ.ಯಲ್ಲಪ್ಪ, ಮುನಿರಾಜು, ಮಂಜು, ವೆಂಕಟಮ್ಮ, ಲಕ್ಷ್ಮಮ್ಮ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !